ಮಹಾಭಾರತ ೫೦
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೦
*ಪ್ರದಕ್ಷಿಣಂ ಗಿರಿಂ ಕೃತ್ವಾ ಪ್ರಯಯೌ ದ್ವಾರಕಾಂ ಪ್ರತಿ ತಾಮಭಿದ್ರುತ್ಯ ಕೌಂತೇಯಃ ಪ್ರಸಹ್ಯಾರೋಪಯದ್ರಥಮ್*
_ಕೃಷ್ಣನ ಮಾತಿನಂತೆ ಬೇಟೆಯ ನೆಪದಲ್ಲಿ ಹೊರಟ ಅರ್ಜುನನು ರೈವತಕ ಪರ್ವತ ಪೂಜೆಗೈಯುತ್ತಿದ್ದ ಸುಭದ್ರೆಯನ್ನು ಬಲಾತ್ಕಾರವಾಗಿ ರಥಕ್ಕೆ ಹತ್ತಿಸಿ ತನ್ನ ಪಟ್ಟಣದ ಕಡೆಗೆ ವೇಗವಾಗಿ ಹೊರಡುತ್ತಾನೆ. ಮಹಾಭಾರತದಲ್ಲಿ ಈ ಕಥೆ ಮಾತ್ರ ಇರುವುದು. ಅರ್ಜುನನು ಯಾವ ಸನ್ಯಾಸಿಯ ವೇಷವನ್ನೂ ಧರಿಸಿಲ್ಲ ಅಥವಾ ಅವಳನ್ನು ಮರುಳು ಮಾಡಲಿಲ್ಲ. ಕ್ಷತ್ರಿಯರಿಗೆ ಹಾಗೂ ಆಗಿನ ಕಾಲಕ್ಕೆ ಯೋಗ್ಯವಾದ ಪರಾಕ್ರಮದಿಂದ ಪಡೆದುಕೊಳ್ಳುವ ತಂತ್ರವನ್ನು ಅನುಸರಿಸಿ ಸುಭದ್ರೆಯನ್ನು ಹೊಂದಿದನು. ಅವಳ ಅಣ್ಣನ ಬೆಂಬಲ ಇದ್ದುದು ಅದಕ್ಕೆ ಪೂರಕವಾಯಿತು. ಇಲ್ಲದಿದ್ದರೆ ಅರ್ಜುನನಿಗೆ ಕಷ್ಟವಾಗುತ್ತಿತ್ತೋ ಏನೋ! ಅಂದಾಜು ಕಾಲಾಂತರದಲ್ಲಿ ಬಂದ ಭಾರತಗಳಲ್ಲಿ ಅಥವಾ ಬೇರೆ ಪುರಾಣಗಳಲ್ಲಿ ಅರ್ಜುನಸನ್ಯಾಸಿಯ ಕಥೆ ಇರಬಹುದು._
*ಕ್ಷುಬ್ಧಾಸ್ತೇನಾಥ ಶಬ್ದೇನ ಭೋಜವೃಷ್ಣ್ಯಂಧಕಾಸ್ತದಾ ಅನ್ನಪಾನಮಪಾಸ್ಯಾಥ ಸಮಾಪೇತುಃ ಸಭಾಂ ತತಃ*
_ಇತ್ತ ಕಡೆ ಸುಭದ್ರೆಯ ಅಪಹರಣವಾದುದನ್ನು ಕಂಡ ಸೈನಿಕರು ಓಡಿ ಬಂದು ಯುದ್ಧ ಸೂಚಕವಾದ ನಗಾರಿಯನ್ನು ದ್ವಾರಕೆಯಲ್ಲಿ ಬಾರಿಸಿದರು. ಆ ಶಬ್ದದಿಂದ ಗಾಬರಿಗೊಂಡ ಭೋಜರು, ವೃಷ್ಣಿಗಳು, ಅಂಧಕರು ಆ ಸಮಯದಲ್ಲಿ ತಿನ್ನುತ್ತಿರುವ ಅನ್ನ ಪಾನಾದಿಗಳನ್ನು ಬಿಟ್ಟು ಆ ಸಭೆಗೆ ಅಂದರೆ ಸಭಾಪತಿಯು ಎಲ್ಲಿ ಭೇರಿ ಬಾರಿಸಿದನೋ ಅಲ್ಲಿಗೆ ಧಾವಿಸಿ ಬಂದರು. ಹಿಂದೆಯೂ ಸಂದರ್ಭಾನುಸಾರ ಸೂಚನೆ ಕೊಡುವ ವ್ಯವಸ್ಥೆ ಇಂದಿನಂತೆಯೇ ಇದ್ದಿರಬೇಕು. ಅದು ಮಾನವರೇ ಮಾಡುತ್ತಿದ್ದರಿಂದ ಹೆಚ್ಚು ವ್ಯವಸ್ಥಿತವಾಗಿತ್ತು. ಈಗ ಯಂತ್ರಗಳ ಅವಲಂಬನೆಯಿಂದ ಕೆಲವೊಮ್ಮೆ ಅವ್ಯವಸ್ಥೆ ಆಗುತ್ತದೆ. ತಿನ್ನುವುದನ್ನೇ ಬಿಟ್ಟು ಬರಬೇಕೆಂದರೆ ಅದರ ಮಹತ್ವ ಗೊತ್ತಾಗುತ್ತದೆ. ರಾಜ್ಯಕ್ಕೆ ಏನೋ ಆಪತ್ತು ಬಂದಿರುವ ಸೂಚನೆ ಆ ಭೇರಿಯ ನಾದ ಹೊಮ್ಮಿಸುತ್ತಿತ್ತು. ಇಲ್ಲಿ ಹೇಳಿರುವ ಭೋಜರು-ವೃಷ್ಣಿಗಳು-ಅಂಧಕರು ಯಾದವರಲ್ಲೇ ಬೇರೆ ಬೇರೆ ಪ್ರದೇಶಗಳನ್ನಾಶ್ರಯಿಸಿದ ವೀರರಿರಬೇಕು. ಇಲ್ಲದಿದ್ದರೆ ಇಂತಹ ಒಗ್ಗಟ್ಟು ಅಥವಾ ಜವಾಬ್ದಾರಿ ದ್ವಾರಕೆಯ ಬಗೆಗೆ ಅವರಿಗಿರುತ್ತಿರಲಿಲ್ಲ._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ