ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*तथापि निघ्नं नृप तावकीनै: प्रह्वीकृतं मे हृदयं गुणौघै: । वीतस्पृहाणामपि मुक्तिभाजां भवन्ति भव्येषु हि पक्षपाता: ।।*
_ವ್ಯಾಸರ ನುಡಿ. ಧರ್ಮಜ, ತಪಸ್ವಿಗಳು ಎಂದಿಗೂ ಸಮಾನ ವ್ಯವಹಾರವನ್ನು ನಡೆಸಬೇಕು. ಒಬ್ಬರ ಮೇಲೆ ಪ್ರೀತಿ ಮತ್ತೊಬ್ಬರ ಮೇಲೆ ದ್ವೇಷ ಅಥವಾ ತಟಸ್ಥ ಭಾವ ಹೀಗೆ ತೋರಿದರೆ ಅವರು ತಪಸ್ವಿಗಳಾಗಲಾರರು. ಹಾಗಿದ್ದರೂ ನಿಮ್ಮ ಅಣ್ಣತಮ್ಮಂದಿರ ಸದ್ಗುಣಗಳು ನಿಮ್ಮೆಡೆಗೆ ನನ್ನನ್ನು ಸೆಳೆದಿವೆ. ವಸ್ತುತಃ ನಾನು ಕೌರವ-ಪಾಂಡವರೀರ್ವರಲ್ಲೂ ಸಮಾನ ಪ್ರೀತಿಯುಳ್ಳವನು. ಹಾಗಿದ್ದರೂ ನಿಮ್ಮ ವಿಧೇಯತೆ, ಪ್ರಾಮಾಣಿಕತೆ, ನಿರ್ವಂಚನೆಯ ಭಾವ, ಸಾಧುಸ್ವಭಾವ ಇವುಗಳು ನನ್ನನ್ನು ಹೆಚ್ಚು ಆಕರ್ಷಿಸಿವೆ. ಲೋಕದಲ್ಲೂ ಇದು ಕಂಡುಬರುತ್ತದೆ. ವೀತಸ್ಪೃಹರು ಅಂದರೆ ಯಾವ ವಿಧವಾದ ಆಸೆ ಇಲ್ಲದೆ ಭಗವಂತನನ್ನು ಭಜಿಸಿ ಮುಕ್ತಿ ಪಡೆಯಲು ಯೋಗ್ಯರಾದವರು ಯಾರಿರುವರೋ ಅಂತಹ ಯೋಗಿಗಳೂ ಕೂಡ ಅಂದರೆ ಭಾವನೆಗೆ ಬೀಳದಿರುವವರೂ ಕೂಡ ಸಜ್ಜನರಲ್ಲಿ ಪಕ್ಷಪಾತ ತೋರುತ್ತಾರೆ ಅನ್ನುವ ವಿಷಯ ಸತ್ಯ. ಅವರಿಗೆ ಯಾರಿಂದ ಯಾವ ಅಪೇಕ್ಷೆಯೂ ಇರುವುದಿಲ್ಲ. ಹಾಗಿದ್ದರೂ ಮುಕ್ತರು ಅಥವಾ ಯೋಗಿಗಳು ಸಜ್ಜನರು ಕಂಡರೆ ಅವರನ್ನು ಹೆಚ್ಚು ಆದರಿಸುತ್ತಾರೆ. ಇರುವೆ ಯಾವತ್ತಿದ್ದರೂ ಬೆಲ್ಲವನ್ನು ಬಯಸುವುದಲ್ಲದೇ ಹಾಗಲಕಾಯಿಯನ್ನು ಬಯಸುವುದೇ! ಈ ಕಾರಣದಿಂದ ನಿನ್ನ ಧಾರ್ಮಿಕ ವರ್ತನೆಯು ನನಗೆ ನಿನ್ನ ಮೇಲೆ ಹೆಚ್ಚು ಪ್ರೀತಿಯುಂಟಾಗುವಂತೆ ಮಾಡಿದೆ. ನಾವು ಎಷ್ಟೋ ಬಾರಿ ಆಲೋಚಿಸುತ್ತೇವೆ. ನಮ್ಮನ್ನು ಗೌರವಿಸದೇ ಅಥವಾ ಮಾನಿಸದೇ ಇನ್ನಾರನ್ನೋ ಮಾನಿಸಿದರು ಎಂಬುದಾಗಿ. ಆದರೆ ನಮ್ಮಲ್ಲೂ ಸದ್ಗುಣಗಳಿದ್ದಾಗ ಸಹಜವಾಗಿ ನಮ್ಮನ್ನು ಎಲ್ಲರೂ ಆದರಿಸುತ್ತಾರೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ