ಧಾರ್ಮಿಕ ಆಚರಣೆ ಭಾಗ ೯

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೯

*ಪ್ರಾಣಾಯಾಮ*

*ಪ್ರಾಣಾಯಾಮಂ ವಿನಾ ಮಂತ್ರಪೂಜನೇ ನಹಿ ಯೋಗ್ಯತಾ* _ಎಂಬ ಮಾತಿನಂತೆ ಪ್ರತಿಯೊಂದು ಕರ್ಮದ ಆದಿಯಲ್ಲಿಯೂ ಆಚಮನ ಮಾಡಿದ ನಂತರ ಪ್ರಾಣಾಯಾಮ ಮಾಡಿಯೇ ತೊಡಗಬೇಕು. ಕರ್ಮಗಳಲ್ಲಿನ ಪ್ರಾಣಾಯಾಮಗಳಲ್ಲಿ ಮೂಗಿನ ಬಲಹೊಳ್ಳೆಯ ಮೂಲಕ ಗಾಳಿಯನ್ನು ಒಳಗೆಳೆದು ಬಂಧಿಸಿ ಬಿಡುವುದು ಸರಿಯಾದದ್ದು. ಉಳಿದ ಸಮಯದಲ್ಲಿ ಎಡಹೊಳ್ಳೆಯಿಂದಲೂ ಸ್ವೀಕರಿಸಿ ಅಥವಾ ರೇಚಕದ ಮೂಲಕ ಆರಂಭಿಸಿಯೂ ಪ್ರಾಣಾಯಾಮ ಮಾಡಬಹುದು._

*ಪ್ರಾಣಾಯಾಮತ್ರಯಂ ಕೃತ್ವಾ ಪ್ರಾಣಾಯಾಮೈಸ್ತ್ರಿಭಿರ್ನಿಶಿ ಅಹೋರಾತ್ರಕೃತಾತ್ ಪಾಪಾನ್ಮುಚ್ಯತೇ ನಾತ್ರಸಂಶಯಃ*

_ಮೇಲಿನ ಮಾತಿನಂತೆ ಸಂಧ್ಯಾಕಾಲಗಳಲ್ಲಿನ ಪ್ರತಿಯೊಬ್ಬ ಮನುಷ್ಯರ ಮೂರು ಮೂರು ಪ್ರಾಣಾಯಾಮಗಳು ಅವನ ದಿನದ ಪಾಪವನ್ನು ಸೆಳೆಯುತ್ತವೆ. ಅಷ್ಟೇ ಅಲ್ಲದೆ ಪ್ರಾಣಾಯಾಮವು ಇಂದ್ರಿಯಗಳ ದೋಷವನ್ನೂ ನಿವಾರಿಸುತ್ತದೆ._

*ನಿರೋಧಾಜ್ಜಾಯತೇ ವಾಯುರ್ವಾಯೋರಗ್ನಿಃ ಪ್ರಜಾಯತೇ ಅಗ್ನೇರಾಪೋ ವ್ಯಜಾಯಂತ ತೈರಂತಃ ಶುಧ್ಯತೇ ತ್ರಿಭಿಃ*

_ಪ್ರಾಣಾಯಾಮದ ಸಾಧನೆಯು ಗಾಳಿಯ  ಹರಿವನ್ನು ಸರಾಗವಾಗಿಸಿ ದೇಹದ ಅಗ್ನಿಯು ಅಂದರೆ ಉಷ್ಣಾಂಶವು ಸಮಸ್ಥಿತಿಯಲ್ಲಿರುತ್ತದೆ. ಯಾವಾಗ ಅಗ್ನಿಯು ಉತ್ತಮ ಸ್ಥಿತಿಯಲ್ಲಿರುವನೋ ಆಗ ನೀರಿನಿಂದ ಬರುವ ದೋಷಗಳೂ ದೂರಹೋಗುತ್ತವೆ. ಅಗ್ನಿ ಆರಿದ್ದರೆ ಅಥವಾ ನೀರೇ ಹೆಚ್ಚಿದ್ದರೆ ಶೀತಕ್ಕೆ ಸಂಬಂಧಿಸಿದ ದೋಷಗಳು ದೇಹವನ್ನು ಬಾಧಿಸುತ್ತವೆ. ವಾಯು ಸರಿಯಾಗಿ ತಿರುಗಾಡದಿದ್ದಾಗ ವಾತ ದೋಷಗಳೂ ಉಂಟಾಗುತ್ತವೆ. ಇವೆರಡರ ವಿಷಮತೆಯು ಕಫದ ವಿಪರಿಣಮತೆಗೆ ಸಹಕಾರಿ ಆಗುತ್ತದೆ. ಈ ಮೂರು ದೋಷಗಳು ಒಂದು ಹಂತದವರೆಗೆ ಪ್ರಕೃತಿಗೆ ತಕ್ಕಂತೆ ಅಂದರೆ ಆಯಾ ವ್ಯಕ್ತಿಗಳ ಪ್ರಕೃತಿಗೆ ಅನುಗುಣವಾಗಿ ಇದ್ದಾಗ ಆರೋಗ್ಯ ಭಾಗ್ಯ ಸಿಗುತ್ತದೆ. ಇದಕ್ಕಾಗಿಯಾದರೂ ಪ್ರಾಣಶಕ್ತಿಯ ನಿರೋಧ ಬೇಕೇಬೇಕು. ಇದನ್ನೇ ಬೇರೆ ಬೇರೆ ಪುರಾಣಗಳಲ್ಲಿ ಭಿನ್ನ ರೀತಿಯಲ್ಲಿ ಹೇಳಿದ್ದಾರೆ._

*ಶನೈರ್ನಾಸಾಪುಟೇ ವಾಯುಮುತ್ಸೃಜೇನ್ನ ತು ವೇಗತಃ* _ಎಂಬಂತೆ ಗಾಳಿಯನ್ನು ಬಿಡುವಾಗ ಒಮ್ಮೆಲೇ ಜೊರಾಗಿ ಬಿಡದೇ ನಿಧಾನಕ್ಕೆ ತೆಗೆದುಕೊಂಡ ರೀತಿಯಲ್ಲಿಯೇ ಬಿಡಬೇಕು. ಇವುಗಳಲ್ಲಿ ಕೇವಲ ಕುಂಭಕವನ್ನು ಯಾರು ಸಿದ್ಧಿಸಿಕೊಳ್ಳುವರೋ ಅವರಿಗೆ ಲೋಕದ ಎಲ್ಲವೂ ಒಲಿದು ಬರುವುದು. ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಹೀಗೆ ಪ್ರಾಣಾಯಾಮದ ಆಚರಣೆಯು ಧಾರ್ಮಿಕ ಆಯಾಮಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಹೊಂದಿದೆ. ಮುಂದೆ ಇನ್ನೊಂದು ವಿಷಯದ ಬಗ್ಗೆ ಗಮನ ಹರಿಸೋಣ._

http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩