ಧಾರ್ಮಿಕ ಆಚರಣೆ ಭಾಗ ೮
🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೮
*ಪ್ರಾಣಾಯಾಮ*
*ಪ್ರಾಣ ಆಯಮ್ಯತೇ ಅನೇನ ಇತಿ* _ಪ್ರಾಣಾಯಾಮ ಎಂದಾಗುತ್ತದೆ. ಪ್ರಾಣವಾಯುವನ್ನು ಯಾವ ಪ್ರಕ್ರಿಯೆಯ ಮುಖಾಂತರ ಹಿಡಿದಿಟ್ಟುಕೊಳ್ಳುವೆವೋ ಅದೇ ಪ್ರಾಣಾಯಾಮ._
_ಇದರಲ್ಲಿ ಮೂರು ಅಂಗಗಳಿವೆ. ಪೂರಕ, ಕುಂಭಕ, ರೇಚಕ ಎಂಬುದಾಗಿ. ಪ್ರಾಣವಾಯುವನ್ನು ಮಂತ್ರದಿಂದಲೋ ಓಂಕಾರದಿಂದಲೋ ತುಂಬಿಸುವುದು ಪೂರಕ. ತುಂಬಿದ ವಾಯುವನ್ನು ಕೆಲಕಾಲ ಹಿಡಿದಿಟ್ಟುಕೊಳ್ಳುವುದು ಕುಂಭಕ. ಅನಂತರ ಬಿಡುವುದು ರೇಚಕ. ಪ್ರತಿಯೊಂದು ಕರ್ಮಗಳ ಆದಿಯಲ್ಲಿ ವಿಹಿತವಾದುದು ಪ್ರಾಣಾಯಾಮ. ಆದರೆ ಬಹಳಷ್ಟು ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವರೇ ಹೊರತು ಇಂತಹ ಪ್ರಾಣವಾಯುವಿನ ನಿಯಂತ್ರಣ ಮಾಡುವುದಿಲ್ಲ. ಪುರೋಹಿತರಾದಿ ಉಳಿದವರೂ ಅದರ ಬಗ್ಗೆ ತಿಳಿ ಹೇಳುವುದಿಲ್ಲ ಎನ್ನುವುದೂ ಸತ್ಯ. ಆಧ್ಯಾತ್ಮಿಕ ಲಾಭಗಳೇನೇ ಇರಲಿ ದೇಹಕ್ಕಂತೂ ಅಥವಾ ಜೀವನಕ್ಕಂತೂ ಇದು ತುಂಬಾ ಲಾಭದಾಯಕ._
*ಯಾವದ್ವಾಯುಃ ಸ್ಥಿತೋ ದೇಹೇ ತಾವಜ್ಜೀವನಮುಚ್ಯತೇ ಮರಣಂ ತಸ್ಯ ನಿಷ್ಕ್ರಾಂತಿಸ್ತತೋ ವಾಯುಂ ನಿರೋಧಯೇತ್*
_ದೇಹದಲ್ಲಿ ಪ್ರಾಣವಾಯು ಇರುವ ತನಕ ಜೀವನ. ಅನಂತರ ಏನಿದ್ದರೂ ಹೊತ್ತುಕೊಂಡು ಹೋಗಿ ಅಷ್ಟೇ. ಹಾಗಾಗಿ ವಾಯುವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಬೆಳೆಸಿದಷ್ಟೂ ನಮ್ಮ ಬದುಕು ದೀರ್ಘವಾಗುತ್ತದೆ. ಪ್ರಾಣಿಗಳ ಉಸಿರಾಟ ಹಾಗೂ ನಮ್ಮ ಉಸಿರಾಟ ಗಮನಿಸಿದರೆ ಇದರ ತಿಳುವಳಿಕೆ ಬರುತ್ತದೆ. ನಾಯಿ ಬೆಕ್ಕು ಮೊದಲಾದ ಪ್ರಾಣಿಗಳ ಉಸಿರಾಟ ನಿಮಿಷಕ್ಕೆ ಇಪ್ಪತ್ತಕ್ಕೂ ಹೆಚ್ಚಿದ್ದರೆ ನಮ್ಮ ಉಸಿರಾಟ ಅಂದಾಜು ೧೭ರಷ್ಟು ಇರುತ್ತದೆ. ಹಾಗಾಗಿ ವಾಯುವನ್ನು ನಿರೋಧಿಸಿ ಕಡಿಮೆ ಉಸಿರಾಡಿದಷ್ಟೂ ಬದುಕುವ ಸಾಧ್ಯತೆ ಹೆಚ್ಚು._
*ಪ್ರಾಣವಾಯೋರ್ಗತಿವಿಚ್ಛೇದಕಾರಕವ್ಯಾಪಾರ ಏವ ಪ್ರಾಣಾಯಾಮ:* _ಪ್ರಾಣವಾಯುವಿನ ಗತಿಗೆ ತಡೆ ಒಡ್ಡುವ ಒಂದು ಬಗೆಯ ವ್ಯಾಪಾರವೇ ಪ್ರಾಣಾಯಾಮ. ಕಿರು ಬೆರಳು, ಅನಾಮಿಕಾ ಹಾಗೂ ಹೆಬ್ಬೆರಳ ಮೂಲಕ ಪ್ರಾಣಾಯಾಮ ಮಾಡಬೇಕು._ *ಸ ವಿಜ್ಞೇಯಃ ತರ್ಜನೀಮಧ್ಯಮಾಂ ವಿನಾ* _ಎಂಬಂತೆ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಬಿಡಬೇಕು. ಇದು ಎರಡು ವಿಧ. ಸಗರ್ಭ ಹಾಗೂ ನಿಗರ್ಭ ಎಂದು. ಮಂತ್ರ ಜಪದ ಮೂಲಕ ಮಾಡುವ ಪ್ರಾಣಾಯಾಮ ಸಗರ್ಭ. ಮಂತ್ರ ಹೇಳದೇ ಸಮಯ ನೋಡಿಕೊಂಡು ಮಾಡುವ ಪ್ರಾಣಾಯಾಮ ಅದು ನಿಗರ್ಭ. ಇಲ್ಲಿ ಪ್ರಣವ ಅಂದರೆ ಓಂಕಾರ ಅಥವಾ ಗಾಯತ್ರಿ ಮೊದಲಾದ ಮಂತ್ರಗಳನ್ನು ಹದಿನಾರು ಬಾರಿ ಜಪಿಸಿ ಎಡಮೂಗಿನಿಂದ ತುಂಬಿಸಿ, ಮನದಲ್ಲಿ ಅರವತ್ನಾಲ್ಕು ಬಾರಿ ಅದೇ ಮಂತ್ರ ಜಪಿಸುವಷ್ಟು ಕಾಲ ಹಿಡಿದಿಟ್ಟುಕೊಳ್ಳಬೇಕು. ಅನಂತರ ಮೂವತ್ತೆರಡು ಬಾರಿ ಹೇಳುವಷ್ಟು ಸಮಯ ನಿಧಾನಕ್ಕೆ ಬಲಮೂಗಿನಿಂದ ಬಿಡಬೇಕು. ಚಂದ್ರನಾಡಿಯಿಂದ ತುಂಬಿಸಿ ಸೂರ್ಯ ನಾಡಿಯಿಂದ ಬಿಡುವುದು ಸರಿಯಾದ ಕ್ರಮ. ಇಂತಹ ಪ್ರಾಣಾಯಾಮ ಮಾಡಲು ಕಡಿಮೆ ಅಂದರೂ ನಾಲ್ಕೈದು ನಿಮಿಷ ಬೇಕಾದೀತು. ಹೀಗೆ ಮಾಡುವುದರಿಂದ ಆರೋಗ್ಯವೂ ಜೊತೆಗೆ ಮಂತ್ರಬಲವೂ ಸಿಗುತ್ತದೆ. ಪ್ರಕೃತ ಎಲ್ಲೆಡೆ ಹೆಚ್ಚಾಗಿ ಮೂರು ಬಾರಿ ಮಂತ್ರ ಹೇಳಿ ಪ್ರಾಣಾಯಾಮ ಮುಗಿಸುತ್ತೇವೆ. ಅರಿಯದಿದ್ದವರು ಅತ್ತ ಕಡೆ ಮಂತ್ರವೂ ಇಲ್ಲ, ಇತ್ತ ಕಡೆ ಗಾಳಿಯೂ ಇಲ್ಲ ಎಂಬಂತೆ ಕಾಟಾಚಾರಕ್ಕೆ ಮೂಗು ಹಿಡಿಯುತ್ತಾರೆ._
*ಸವ್ಯಾಹೃತಿಂ ಸಪ್ರಣವಾಂ ಗಾಯತ್ರೀಂ ಶಿರಸಾ ಸಹ*
_ಸಂಧ್ಯಾವಂದನೆ ಮಾಡುವಾಗ ಓಂಕಾರ ಹಾಗೂ ಭೂಃ ಭುವಃ ಸುವಃ ಭೂರ್ಭುವಸ್ಸುವಃ ಎಂಬ ನಾಲ್ಕು ವ್ಯಾಹೃತಿ ಸಹಿತವಾಗಿ ಪ್ರಾಣಾಯಾಮ ಮಾಡಬೇಕು. ಉಳಿದ ಸಮಯದಲ್ಲಿ ಹೇಗಾದರೂ ಮಾಡಬಹುದು. ಪ್ರಾಣಾಯಾಮ ಮಾಡಲು ಮನಸ್ಸಿದ್ದರೆ ಸಾಕು. ಜಾತಿ-ಗೋತ್ರ- ಹಣ ಯಾವುದೂ ಬೇಕಾಗಿಲ್ಲ._
ಮುಂದೆ ಇನ್ನಷ್ಟು ವಿವರ ನೋಡೋಣ.......
http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ