ಸ್ವಪ್ನವಾಸವದತ್ತ೭
🌼 ಸ್ವಪ್ನವಾಸವದತ್ತ ಎಸಳು-೭🌼
*नैवेदानीं तादृशाश्चक्रवाका नैवाप्यन्ये स्त्रीविशेषैर्वियुक्ता: । धन्या सा स्त्री यां तथा वेत्ति भर्ता भर्तृस्नेहात् सा हि दग्धाप्यदग्धा ।।*
_ಬ್ರಹ್ಮಚಾರಿ ಹೇಳುವ ಮಾತು. ಯೌಗಂಧರಾಯಣನ ಬಳಿ ಉದಯನನ ಕಥೆಯನ್ನು ನಿರೂಪಿಸುತ್ತಾ ಅಗ್ನಿಯಲ್ಲಿ ಸುಟ್ಟುಹೋದ ವಾಸವದತ್ತೆಯನ್ನು ನೆನೆದು ಉದಯನನು ಎಷ್ಟು ದುಃಖಿಸುತ್ತಿರುವನೆಂದರೆ ಅದಕ್ಕೆ ಸರಿಸಾಟಿಯಾದುದು ಲೋಕದಲ್ಲಿ ಯಾವುದೂ ಇಲ್ಲ ಎನ್ನುತ್ತಿದ್ದಾನೆ. ಚಕ್ರವಾಕ ಪಕ್ಷಿಗಳು ತಮ್ಮ ಪ್ರಿಯೆಯನ್ನು ನೆನಪು ಮಾಡಿಕೊಳ್ಳುತ್ತಾ ತುಂಬಾ ಕೂಗುತ್ತವೆ. ಅವುಗಳ ವಿರಹರೋದನ ಪ್ರಸಿದ್ಧ. ಇಲ್ಲಿ ಉದಯನನ ವಿರಹದ ಕೂಗು ಅದನ್ನೂ ಮೀರಿಸಿದೆ. ಇನ್ನು ಲೋಕದಲ್ಲಿ ಸೀತೆ-ಶಕುಂತಲೆ-ದಮಯಂತಿ ಮುಂತಾದ ಪ್ರಸಿದ್ಧ ಸ್ತ್ರೀಯರ ಪತಿಗಳು ಅಂದರೆ ರಾಮಾದಿಗಳು ತಮ್ಮ ಸತಿಯರನ್ನು ನೆನೆಯುತ್ತಾ ಲೋಕವೇ ಮರುಕಪಡುವಂತೆ ಎಷ್ಟು ಕಣ್ಣೀರುಗರೆದರೋ ಅದನ್ನೂ ಮೀರುವಂತಿದೆ ಉದಯನನ ವಿರಹಗೀತೆ. ಅವರು ವ್ಯಕ್ತಪಡಿಸಿದ ದುಃಖಕ್ಕಿಂತಲೂ ಹೆಚ್ಚಿನ ದುಃಖದ ಅನುಭವ ಇಲ್ಲಿ ಕಾಣುತ್ತಿದೆ. ಸಂತೋಷದಲ್ಲಿ ಹೆಚ್ಚು ಕಡಿಮೆ ಇದ್ದಂತೆ ಇಲ್ಲಿ ದುಃಖದ ಹೆಚ್ಚು ಕಡಿಮೆಯ ವರ್ಣನೆ. ನಿಜಕ್ಕೂ ಆ ವಾಸವದತ್ತೆ ಧನ್ಯಳು. ಪತಿಯು ತನ್ನ ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಆ ಪತ್ನಿ ಅದೃಷ್ಟಶಾಲಿ. ಈಗ ಅವಳು ಅಗ್ನಿಯಲ್ಲಿ ದಗ್ಧಳಾಗಿದ್ದರೂ ದಗ್ಧಳಲ್ಲ. ಏಕೆಂದರೆ ಪತಿಯ ಪ್ರೀತಿಯೆಂಬ ಮನೆಯಲ್ಲಿ ಅವಳು ಸುರಕ್ಷಿತಳಾಗಿದ್ದಾಳೆ. ತನ್ನನ್ನು ಅತ್ಯಂತ ಪ್ರೀತಿಸುವ ಅಥವಾ ಆರಾಧಿಸುವ ಪತಿ ದೊರಕಿದನೆಂದರೆ ಯಾವ ಪತ್ನಿ ತಾನೇ ಸಂತೋಷ ಪಡಲಾರಳು? ಪ್ರತಿಯೊಂದು ಹೆಣ್ಣೂ ಪತಿಯ ನಿರತಿಶಯ ಪ್ರೀತಿಯನ್ನೇ ಬಯಸುವುದು. ಅದು ಸಿಗದಿದ್ದಾಗ ಏನು ಸಿಕ್ಕಿದರೂ ಅವಳಿಗೆ ತೃಪ್ತಿಯಾಗದು. ಅಂತಹ ಉತ್ಕೃಷ್ಟ ಪ್ರೀತಿ ಉದಯನ ವಾಸವದತ್ತೆಯರ ನಡುವಿನದ್ದು ಎಂಬ ಭಾವ ಇಲ್ಲಿದೆ. ಉದಯನ ವಾಸವದತ್ತೆಯನ್ನು ಎಷ್ಟು ಪ್ರೀತಿಸುತ್ತಿದ್ದನು ಎನ್ನುವುದೂ ಗೋಚರವಾಗುತ್ತದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ