ಧಾರ್ಮಿಕ ಆಚರಣೆಗಳು ೬

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೬

*ಸ್ನಾನ*

*ತೀರ್ಥೇ ವಿವಾಹೇ ಯಾತ್ರಾಯಾಂ ಸಂಗ್ರಾಮೇ ದೇಶವಿಪ್ಲವೇ ನಗರಗ್ರಾಮದಾಹೇ ಚ ಸ್ಪೃಷ್ಟಾಸ್ಪೃಷ್ಟಿ‌ ನ ದುಷ್ಯತಿ ಆಪದ್ಯಪಿ ಚ ಕಷ್ಟಾಯಾಂ ರುಗ್ಭಯೇ ಪೀಡನೇ ಸದಾ ಮಾತಾಪಿತ್ರೋಃ ಗುರೋಶ್ಚೈವ ನಿದೇಶೇ ವರ್ತನೇ ತಥಾ*

_ಸ್ನಾನ ಮಾಡುವಾಗ ಅಥವಾ ಮಾಡಿದ ಮೇಲೆ ಯಾರನ್ನು ಸ್ಪರ್ಶ ಮಾಡಬಹುದು ಯಾರನ್ನು ಮಾಡಬಾರದು ಎಂಬ ನಿಯಮ ಇಷ್ಟು ಸಂದರ್ಭಗಳಲ್ಲಿ ಅನ್ವಯಿಸುವುದಿಲ್ಲ. ಕೆಲವು ಮೂಢಕರ್ಮಠರು ಇಂತಹ ಸಮಯದಲ್ಲಿ ಶಾಸ್ತ್ರ ಚಿಂತಿಸಿ ಪಾಪಿಷ್ಠರಾಗುತ್ತಾರೆ. ಹಾಗಾಗಿಯೇ ಶಾಸ್ತ್ರ ಅದಕ್ಕೂ ಒಂದು ನಿಯಮ ಮಾಡಿದೆ. ತೀರ್ಥ ಕ್ಷೇತ್ರಗಳಲ್ಲಿ ಎಲ್ಲವೂ ಎಲ್ಲರೂ ಪವಿತ್ರ. ಭಗವಂತನ ಸಾನ್ನಿಧ್ಯ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ ಅಲ್ಲಿ ದೋಷವಿಲ್ಲ. ಮದುವೆಯ ಸಂದರ್ಭದಲ್ಲಿ ಸ್ನಾನ ಮಾಡಿ ಬಂದಾಗ ಯಾರನ್ನೋ ಮುಟ್ಟಿದೆವೆಂದು ಮತ್ತೆ ಓಡುವುದಲ್ಲ ಅಲ್ಲಿ ಮುಹೂರ್ತ ಮೀರದಂತೆ ವರ್ತಿಸಬೇಕು. ಎಲ್ಲೋ ಯಾತ್ರೆ ಹೊರಟಿದ್ದೇವೆ. ಒಮ್ಮೆ ಸ್ನಾನ ಮಾಡುವುದೇ ಕಷ್ಟ. ಅಲ್ಲಿ ಅಡಿಗಡಿಗೆ ಸ್ನಾನ ಮಾಡಿ ಯಾತ್ರೆಯ ಉದ್ದೇಶವನ್ನು ಹಾಳುಮಾಡುವುದಲ್ಲ. ಯುದ್ಧ ನಡೆಯುವ ಸಂದರ್ಭದಲ್ಲಿ ಒಂದು ಚಿಕ್ಕ ಸ್ನಾನ ಧಾರಾಳ ಸಾಕು. ಸಿಯಾಚಿನ್ ಗಡಿಯ ವೀರರು ತಿಂಗಳುಗಟ್ಟಲೆ ಸ್ನಾನವಿಲ್ಲದೆ ಕಳೆಯುತ್ತಾರೆ. ಅಲ್ಲಿ ತಪ್ಪಲ್ಲ ಅದು. ದೇಶದಲ್ಲಿ ಭೀಕರ ಬರಗಾಲ. ಈ ಸಂದರ್ಭದಲ್ಲಿ ಮೂರು ಸ್ನಾನ ಅಥವಾ ಗಂಟೆಗಟ್ಟಲೆ ಮೀಯುತ್ತಾ ಕುಳಿತರೆ ಎಲ್ಲರಿಗೂ ನೀರು ಸಿಗುವುದೇ, ಅಥವಾ ದೇಶದಲ್ಲಿ ತುರ್ತು ಪರಿಸ್ಥಿತಿ ಅಥವಾ ಊರಿನಲ್ಲಿ ಏನೋ ದೊಡ್ಡ ಕಲಹ-ಕೋಲಾಹಲ. ಇಂತಹ ಸಂದರ್ಭ ಸ್ನಾನಾದಿಗಳ ಅಥವಾ ಸ್ಪರ್ಶಾದಿಗಳ ದೋಷ ಗೌಣ. ಯಾರೋ ಆಪತ್ತಿನಲ್ಲಿ ಅಥವಾ ರೋಗದಲ್ಲಿ ಅಥವಾ ದೊಡ್ಡ ನೋವಿನಲ್ಲಿ ನರಳುವ ಸಮಯ ಬಂದಾಗ ಜಾತಿ-ಮತ-ಲಿಂಗ-ಅಂತಸ್ತಿನ ಭೇದವಿಲ್ಲದೆ ಕೂಡಲೇ ಧಾವಿಸುವುದು ಅವಶ್ಯಕ. ಅದು ಬಿಟ್ಟು ನಾನು ಆಗಲೇ ಸ್ನಾನ ಮಾಡಿರುವೆ ಈಗ ಹೇಗೆ ಮುಟ್ಟಲಿ ಎಂದೆಲ್ಲಾ ಮೂರ್ಖರಂತೆ ಆಲೋಚಿಸಬಾರದು. ಇನ್ನು ಮಾತಾ ಪಿತೃಗಳು ಯಾವುದೋ ಸಂದರ್ಭದಲ್ಲಿ ಆದೇಶ ಮಾಡಿದರು ಅಥವಾ ತಮ್ಮ ಕರ್ಮದಿಂದ ಏನನ್ನೋ ಮಾಡಿ ತೋರಿದರು ಎಂಬ ಪಕ್ಷದಲ್ಲಿ ಅದನ್ನೇ ಆಶ್ರಯಿಸಬೇಕು. ಏಕೆಂದರೆ ಅವರನ್ನು ಮೀರಿದ ಶಾಸ್ತ್ರ ಅಥವಾ ದೈವ ಲೋಕದಲ್ಲಿ ಇನ್ನೊಂದಿಲ್ಲ._

*ಸರ್ವತೀರ್ಥಾಭಿಷೇಕಾದ್ಧಿ ಪವಿತ್ರಂ ವಿದುಷಾಂ ವಚಃಧರ್ಮಶ್ರವಣವೇಲಾಯಾಂ ವಿಪ್ರೋ ವ್ಯಾಸಸಮಃ ಸ್ಮೃತಃ*

_ನೀವು ಎಷ್ಟೇ ತೀರ್ಥಗಳಲ್ಲಿ ಮುಳುಗಿ, ಅಥವಾ ಎಷ್ಟೇ ಪುಣ್ಯ ಸ್ನಾನ ಮಾಡಿದರೂ ಜ್ಞಾನಿಗಳ ಮಾತನ್ನು ಕೇಳದಿದ್ದಲ್ಲಿ ಅವೆಲ್ಲವೂ ವ್ಯರ್ಥ ಎನ್ನುತ್ತದೆ ಪುರಾಣ‌. ಎಲ್ಲಾ ತೀರ್ಥಗಳಿಗಿಂತಲೂ ಪವಿತ್ರ ಜ್ಞಾನಿಗಳ ಒಂದು ಮಾತು. ಅದನ್ನು ತಿರಸ್ಕರಿಸಿದರೆ ತೀರ್ಥವನ್ನು ಮೆಟ್ಟಿದಂತೆಯೇ ಸರಿ. ಯಾರು ಜ್ಞಾನಿ ಎಂಬ ಪೂರ್ಣ ನಿಶ್ಚಯ ನಮ್ಮಲ್ಲಿರಬೇಕು ಅಷ್ಟೇ. ಅದೇ ರೀತಿ ಧರ್ಮವನ್ನು ಬೋಧಿಸುವ ಸಮಯದಲ್ಲಿ ವಿಪ್ರನು ಅಂದರೆ ಜ್ಞಾನಿಯು ವ್ಯಾಸರಿಗೆ ಸಮನಾಗುತ್ತಾನೆ. ಸರಿಯಾಗಿ ಅರಿತು ಇನ್ನೊಬ್ಬರಿಗೆ ಧರ್ಮ ಉಪದೇಶಿಸುವಾಗ ವ್ಯಾಸನಷ್ಟೇ ಗೌರವ ಅವರಿಗೆ ಕೊಡಬಹುದು. ಉಳಿದ ಸಮಯದಲ್ಲಿ ಎಷ್ಟೇ ಆತ್ಮೀಯತೆ ಅಥವಾ ಗೆಳೆತನ ಇದ್ದರೂ ಆ ಸಮಯದ ನಮಸ್ಕಾರ ಅವರ ಕರ್ಮಕ್ಕೆ ಕೊಡುವ ಗೌರವ ಎಂದು ಕರೆಸಿಕೊಳ್ಳುತ್ತದೆ._

ಇದರ ವಿಷಯದಲ್ಲಿ ಇನ್ನೊಂದಷ್ಟು ವಿಷಯ ಮುಂದೆ ನೋಡೋಣ.......

http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩