ಸ್ವಪ್ನವಾಸವದತ್ತ ೬

🌼 ಸ್ವಪ್ನವಾಸವದತ್ತ ಎಸಳು-೬🌼

*विस्रब्धं हरिणाश्चरन्त्यचकिता देशागतप्रत्यया वृक्षा: पुष्पफलै: समृद्धविटपा: सर्वे दयारक्षिता: । भूयिष्ठं कपिलानि गोकुलधनान्यक्षेत्रवत्यो दिशो नि:सन्दिग्धमिदं तपोवनमयं धूमो हि बह्वाश्रय: ।।*

_ವಾಸವದತ್ತೆಯನ್ನು ಪದ್ಮಾವತಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಆ ಸಮಯದಲ್ಲಿ ಬಂದ ಬ್ರಹ್ಮಚಾರಿಯೊಬ್ಬ  ಆಶ್ರಮವನ್ನು ಪ್ರವೇಶಿಸಿ  ಪರಿಸರವನ್ನು ವರ್ಣಿಸುತ್ತಿದ್ದಾನೆ.  ಹರಿಣಗಳು ಭಯವಿಲ್ಲದೆ ಸಂಚರಿಸುತ್ತಿವೆ. ಆ ಪ್ರದೇಶದಲ್ಲಿ ತಮಗೆ ಯಾರೂ ಆತಂಕ ತದ್ದೊಡ್ಡಲಾರರು ಎಂಬ ನಂಬಿಕೆಯಿಂದ ಜಿಂಕೆಗಳು ಅತ್ತಿಂದಿತ್ತ ಸಂತೋಷವಾಗಿ ಸಂಚರಿಸುತ್ತಿವೆ. ಮರಗಳಲ್ಲಿ ಪುಷ್ಪ-ಫಲಗಳು ಸಮೃದ್ಧವಾಗಿ ಇವೆ. ಆಶ್ರಮವಾಸಿಗಳ ದಯೆಯಿಂದ ರಕ್ಷಿಸಲ್ಪಟ್ಟ ಮರಗಳು ಫಲಪುಷ್ಪಗಳಿಂದ ತುಂಬಿವೆ ಹಾಗೂ ರೆಂಬೆ-ಕೊಂಬೆಗಳೂ ಧಾರಾಳವಾಗಿವೆ. ಗೆಲ್ಲು ಮುರಿಯುವ, ಕಡಿಯುವ ಹೆದರಿಕೆ ಅವುಗಳಿಗಿಲ್ಲ. ತಪಸ್ವಿಗಳು  ನೀರನ್ನೂ ಪ್ರೀತಿಯನ್ನೂ ಕರುಣಿಸುವ ಕಾರಣ ಫಲ ಪುಷ್ಪಗಳು ಧಾರಾಳವಾಗಿವೆ. ತಮ್ಮ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಜಾಗೃತೆಯಾಗಿ ಗಿಡಗಳಿಗೆ ನೋವಾಗದಂತೆ ತೆಗೆದು ಅವುಗಳನ್ನು ಪೋಷಿಸುತ್ತಿರುವರು ಸುತ್ತಲಿನ ಜನರು. ಕಪಿಲ ಬಣ್ಣದ ಗೋವುಗಳು ಎಲ್ಲೆಡೆ ಮೇಯುತ್ತಿವೆ. ಅವುಗಳ ಹಂಭಾರವ ಹಾಗೂ ಸಂತೋಷದ ಕ್ಷಣಗಳು ಸುತ್ತಲೂ ಕಾಣಸಿಗುತ್ತಿವೆ. ಯಜ್ಞ ಕರ್ಮಗಳಲ್ಲಿ ಕಪಿಲ ಗೋವಿನ ಉತ್ಪನ್ನಗಳಿಗೆ ಮೊದಲ ಆದ್ಯತೆ. ಪಂಚಗವ್ಯದ ಲಕ್ಷಣದಲ್ಲಿ ಬೇರೆ ಬೇರೆ ಬಣ್ಣದ ಗೋವುಗಳ ಉತ್ಪನ್ನವನ್ನು ಉಲ್ಲೇಖಿಸಿದ್ದಾರೆ.       ಅಂತಹ ಶ್ರೇಷ್ಠವಾದ ಕಪಿಲ ಗೋವುಗಳು ಬಹುಸಂಖ್ಯೆಯಲ್ಲಿ ಸುಖವಾಗಿ ಇವೆ. ಅವುಗಳನ್ನು ಓಡಿಸುವ ಪ್ರಸಂಗ ಇಲ್ಲ. ಏಕೆಂದರೆ  ಸುತ್ತಮುತ್ತಲಲ್ಲಿ ಯಾವ ಹೊಲ ಅಥವಾ ಗದ್ದೆಗಳೂ ಇಲ್ಲ. ಹಾಗಾಗಿ ಕೃಷಿಕರು ಹಸುಗಳನ್ನು ಓಡಿಸುವ ಪ್ರಮೇಯವೇ ಇಲ್ಲ. ಇಲ್ಲಿ ಹೆಚ್ಚು ಕಾಣುತ್ತಿರುವ ವಸ್ತುವೆಂದರೆ ಯಜ್ಞಗಳ ಧೂಮ‌. ಯಾವ ಕುಟೀರ ನೋಡಿದರೂ ಯಾಗಗಳ ಧೂಮರಾಶಿ ಮೇಲೆ ಮೇಲೆ ವ್ಯಾಪಿಸುತ್ತಿದೆ. ಈ ಎಲ್ಲಾ ಲಕ್ಷಣಗಳನ್ನು ನೋಡಿದಾಗ ಈ ಪ್ರದೇಶ ನಿಸ್ಸಂಶಯವಾಗಿ ತಪೋವನವೆಂದು ತೋರುತ್ತಿದೆ.  ಸಕಲ ಜೀವಿಗಳು ಯಾವ ಪ್ರದೇಶದಲ್ಲಿ ಸುಖವಾಗಿ ವ್ಯವಹರಿಸುತ್ತವೆಯೋ ಅಂತಹ ಪ್ರದೇಶವೇ ಆಶ್ರಮವೆಂದು ಯಾವ ಶಂಕೆಯೂ ಇಲ್ಲದೆ ತರ್ಕಿಸಬಹುದು._


http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩