ಧಾರ್ಮಿಕ ಆಚರಣೆಗಳು ೩

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೩

*ಸ್ನಾನ*

_ಸ್ನಾನ ನಿಜಕ್ಕಾದರೆ ಧಾರ್ಮಿಕವೆಂದಲ್ಲ ಸಾಮಾನ್ಯ ಆಚರಣೆ. ಅದರಲ್ಲಿರುವ ಧಾರ್ಮಿಕ ಅಂಶಗಳನ್ನು ಮಾತ್ರ ಅರಿಯಲು ಪ್ರಯತ್ನಿಸೋಣ. *ಷ್ಣಾ ಶೌಚೇ* ಎಂಬ ಧಾತುವಿನಿಂದ ಶೋಧನ ಅಥವಾ ಮುಳುಗುವಿಕೆ ಎಂಬ ಅರ್ಥದಲ್ಲಿ ಲ್ಯುಟ್ ಪ್ರತ್ಯಯ ಬಂದು ಉಂಟಾದ ಶಬ್ದವೇ ಸ್ನಾನ. ಅಷ್ಟವಿಧ ಸ್ನಾನಗಳು ಸ್ಮೃತಿಗಳಲ್ಲಿ ಉಲ್ಲಿಖಿತವಾಗಿವೆ. *ಮಾಂತ್ರ, ಪಾರ್ಥಿವ,ಭೌಮ, ಆಗ್ನೇಯ, ವಾಯವ್ಯ, ದಿವ್ಯ, ವಾರುಣ, ಮಾನಸ* ಇವು ಎಂಟು ಬಗೆಯ ಸ್ನಾನಗಳು._

_ಆಪೋಹಿಷ್ಠಾ ಮಂತ್ರ ಹೇಳಿ ಮಾಡುವ ಸ್ನಾನ ಮಂತ್ರಸ್ನಾನ. ಈ ಮಂತ್ರದಿಂದ ಪ್ರೋಕ್ಷಣೆ ಅಂದರೆ ನೀರನ್ನು ಚುಮುಕಿಸಿಕೊಂಡರೆ ಅದೂ ಮಂತ್ರಸ್ನಾನವೇ ಆಗುತ್ತದೆ. ಅಘಮರ್ಷಣ ಎಂಬ ಸೂಕ್ತ ಹೇಳಿ ಮಾಡುವ ಸ್ನಾನವೂ ಮಂತ್ರಸ್ನಾನವೇ ಆಗಿದೆ._

_ದೇಹದ ಕೆಲವು ಮುಖ್ಯ ಭಾಗಗಳಿಗೆ ಮಣ್ಣನ್ನು ಮೆತ್ತಿಕೊಳ್ಳುವ ವಿಧಾನ ಪಾರ್ಥಿವ ಸ್ನಾನ‌. ಹಿಂದೆ ಮಲ-ಮೂತ್ರಗಳ ವಿಸರ್ಜನೆಯ ನಂತರ ಕೈ ಕಾಲುಗಳಿಗೆ ಮಣ್ಣು ಹಚ್ಚಿಕೊಳ್ಳುವ ಪದ್ಧತಿ ಇತ್ತು. ಅದು ಸ್ನಾನದ ಒಂದು ಪದ್ಧತಿಯೇ ಆಗಿದೆ. ಶುದ್ಧವಾದ ಮಣ್ಣಿನ ಆಯ್ಕೆ ಅವಶ್ಯ. ಇಲ್ಲದಿದ್ದರೆ ಮತ್ತೊಮ್ಮೆ ಸ್ನಾನ ಮಾಡಬೇಕಾದೀತು._

_ದೇಹಕ್ಕೆ ಭಸ್ಮವನ್ನು ಲೇಪಿಸಿಕೊಳ್ಳುವ ಸ್ನಾನ ಆಗ್ನೇಯ ಸ್ನಾನ. ಭಸ್ಮವನ್ನು ಹೆಚ್ಚಾಗಿ ಬೆರಣಿಯಿಂದ ಮಾಡುತ್ತಾರೆ. ಬೆರಣಿಯನ್ನು ಸುಟ್ಟು ಅದರ ಬೂದಿಯನ್ನು ಗೋಮೂತ್ರದೊಡನೆ ಅರೆದು ಒಣಗಿಸಿ ಶೇಖರಿಸಿದ ಭಸ್ಮ ಉತ್ತಮ. ಯಜ್ಞ ಮಾಡಿದಾಗ ಉಳಿಯುವ ತುಪ್ಪ ಸಮಿಧೆ ಮೊದಲಾದವುಗಳ ಶೇಷವೂ ಉತ್ತಮ ಭಸ್ಮ. ಇದನ್ನು ನೀರಲ್ಲಿ ಕಲಿಸಿ ಅಂಗಾಂಗಗಳಲ್ಲಿ ಧರಿಸಿದರೆ ಅದೊಂದು ಬಗೆಯ ಸ್ನಾನ._

_ಕೊಟ್ಟಿಗೆಯ ಧೂಳನ್ನು ಅಥವಾ ಹಸು ನಡೆದಾಡಿದ ಪ್ರದೇಶದ ಮಣ್ಣನ್ನು ಹಚ್ಚಿಕೊಂಡರೆ ಅದು ವಾಯವ್ಯ ಸ್ನಾನ. ನಮ್ಮ ನಂಬಿಕೆಯಂತೆ ಗೋವಿನ ರೋಮ ರೋಮಗಳಲ್ಲೂ ದೇವತೆಗಳು ನೆಲೆಸಿರುವ ಕಾರಣ ಅದು ಸಂಚರಿಸಿದ ಪ್ರದೇಶ ಶುದ್ಧವಾಗಿರುತ್ತದೆ._

_ಇನ್ನು ಬಿರುಬಿಸಿಲಿಗೆ ಮೈಯೊಡ್ಡುವ ಬಗೆ ದಿವ್ಯ ಸ್ನಾನ. ವಿದೇಶಗಳಲ್ಲಿ ಸನ್ ಬಾತ್ ಎಂದು ದಿವ್ಯ ಸ್ನಾನ ಮಾಡಲಾಗುತ್ತದೆ. ಮುಂಜಾನೆಯ ಅಥವಾ ಸಂಜೆಯ ಬಿಸಿಲಿಗೆ ಸ್ವಲ್ಪ ಒಳ್ಳೆಯದೆನಿಸೀತು. ಮಧ್ಯಾಹ್ನದ ಬಿಸಿಲಿಗೆ ಮತ್ತೆ ಬೆವರಿನ ಸ್ನಾನವಾದೀತು ಅಷ್ಟೇ.  ನೀರಿನ ಯಾವ ವಿಧದ ಅನುಕೂಲ ಇಲ್ಲದಿದ್ದಾಗ ಇದನ್ನು ಮಾಡಬಹುದು._

_ಇನ್ನು ನೀರಲ್ಲಿ ಪೂರ್ಣ ದೇಹವನ್ನು ಮುಳುಗಿಸಿ ಮಾಡುವ ಸ್ನಾನ ವಾರುಣ ಸ್ನಾನ. ನದಿಯಲ್ಲಿ , ಕೆರೆ, ಸಮುದ್ರದಲ್ಲಿ , ಬಾವಿಯಲ್ಲಿ ಮುಳುಗಿ ಮಾಡುವ ಸ್ನಾನಗಳೆಲ್ಲವೂ ಇದೇ ಬಗೆಯದ್ದು. ಕೆಲವರು ತಲೆಯನ್ನು ಮಾತ್ರ ಮೂರು ಸಲ ಮುಳುಗಿಸಿ ಸ್ನಾನ ಮಾಡುತ್ತಾರೆ. ಆದರೆ ಇಡೀ ದೇಹವನ್ನು ಮುಳುಗಿಸುವುದು ಶ್ರೇಷ್ಠ._

_ಮಾನಸ ಸ್ನಾನವೆಂದರೆ ಭಗವಂತನ ನಾಮ ಸ್ಮರಣೆ. ಸದಾ ಭಗವನ್ನಾಮ ಸ್ಮರಣೆ ಮಾಡಿದರೆ ಅದು ಅತ್ಯಂತ ಶ್ರೇಷ್ಠ ಸ್ನಾನವಾಗುತ್ತದೆ._

_ಇವುಗಳಲ್ಲಿ ವಾರುಣ ಸ್ನಾನ ಅತ್ಯಂತ ಶ್ರೇಷ್ಠವಾದದ್ದು. *ಪ್ರಾತಸ್ನಾಯ್ಯರುಣಕಿರಣಗ್ರಸ್ತಾಂ ಪ್ರಾಚೀಮವಲೋಕ್ಯ*  ಮುಂಜಾನೆ ಅರುಣೋದಯ ಆಗುವ ಕಾಲದಲ್ಲಿ ಸ್ನಾನ ಮಾಡಬೇಕು. ಸೂರ್ಯೋದಯದ ಎರಡು ಘಳಿಗೆಗಳ ಮೊದಲೇ ಸ್ನಾನ ಮಾಡಿ ಸೂರ್ಯೋದಯದ ಕಾಲದಲ್ಲಿ ನಮ್ಮ ಪೂಜಾದಿಗಳನ್ನು ನಡೆಸಬೇಕು. *ನೈರ್ಮಲ್ಯಂ ಭಾವಶುದ್ಧಿಶ್ಚ ವಿನಾ ಸ್ನಾನಂ ನ ಜಾಯತೇ*  ಸ್ನಾನ ಮಾಡುವ ಮುಖ್ಯ ಉದ್ದೇಶ ದೇಹದ ನೈರ್ಮಲ್ಯ. ಎರಡನೆಯದು ಭಾವಶುದ್ಧಿ. ಹಿಂದಿನ ಎಲ್ಲಾ ವಿಚಾರಗಳನ್ನು ಮರೆತು ಮನವನ್ನು ಮುಂದಿನ ಕರ್ಮಕ್ಕೆ ಅಣಿಗೊಳಿಸುವುದು ಕೂಡ ಸ್ನಾನದ ಉದ್ದೇಶ._

_*ಅಸ್ನಾತ್ವಾ ಚಾಪ್ಯಹುತ್ವಾ ಚ ಭುಙ್ತೇ ಅದತ್ವಾ ಚ ಯೋ ನರಃ ದೇವಾದೀನಾಮೃಣೀ ಭೂತ್ವಾ ನರಕಂ ಪ್ರತಿಪದ್ಯತೇ*  ಸ್ನಾನ ಮಾಡದೇ, ದೇವರಿಗೆ ಅರ್ಪಿಸದೇ, ಯಾರಿಗೂ ದಾನ ಮಾಡದೇ ಯಾರು ಈ ಲೋಕದಲ್ಲಿ ಸುಖವನ್ನು ಉಣ್ಣುವರೋ ಅವರು ದೇವ-ಪಿತೃ-ಭೂತ ಋಣಗಳಿಂದ ಮುಕ್ತನಾಗದೇ ನರಕವನ್ನು ಹೊಂದುತ್ತದೆ._

_*ಸಾರ್ವಕಾಲಂ ತಿಲೈಃ ಸ್ನಾನಂ ಪುಣ್ಯಮ್*  ಎಳ್ಳು ಮಿಶ್ರ ಮಾಡಿದ ನೀರಿನ ಸ್ನಾನ ತುಂಬಾ ಪುಣ್ಯದಾಯಕ. *ಅಸ್ನಾತ್ವಾ ನಾಚರೇತ್ ಕರ್ಮ ಜಪಹೋಮಾದಿ ಕಿಂಚನ* ಎಂಬಂತೆ ಸ್ನಾನ ಮಾಡದೇ ಯಾವ ಕರ್ಮವನ್ನು ಮಾಡಬಾರದು.ಆಯಾ ದೇಶ ಕಾಲ ನೋಡಿಕೊಂಡು ಯಾವ ಬಗೆಯ ಸ್ನಾನವನ್ನಾದರೂ ಮಾಡಿ ಶುದ್ಧಿಯನ್ನು ಪಡೆಯುವುದು ಅವಶ್ಯಕ._

ಇದರ ವಿಷಯದಲ್ಲಿ ಇನ್ನೊಂದಷ್ಟು ವಿಷಯ ಮುಂದೆ ನೋಡೋಣ.......






http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.

ಫಾರ್ವರ್ಡ್ ಮಾಡುವವರು ಹೆಸರನ್ನು ತೆಗೆದು ಕಳಿಸಬೇಡಿ. ಹಾಗೆಯೇ ಕಳಿಸಿ. ಮೊಬೈಲಿನಲ್ಲಿ  ಟೈಪ್ ಮಾಡಿದ್ದಕ್ಕಾದರೂ ಗೌರವಿಸಿ.👏

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩