ರಾಮಾಯಣ ೧೦೫
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೫
*ಪೀತ್ವಾ ಘಟಸಹಸ್ರೇ ದ್ವೇ ಗಮನಾಯೋಪಚಕ್ರಮೇ ಈಷತ್ಸಮುತ್ಕಟೋ ಮತ್ತಸ್ತೇಜೋಬಲಸಮನ್ವಿತಃ*
_ಯುದ್ಧಕ್ಕಾಗಿ ಎದ್ದ ಕುಂಭಕರ್ಣನು ಸ್ನಾನ ಮಾಡಿ ವಸ್ತ್ರಾದಿಗಳಿಂದ ಅಲಂಕರಿಸಿಕೊಂಡನು. ಅನಂತರ ಬಲವರ್ಧಕವಾದ ಮದ್ಯವನ್ನು ಪಾನ ಮಾಡಲು ಅಪೇಕ್ಷಿಸಿದನು. ಆಗ ಸೇವಕರು ತಂದಿಟ್ಟ ಸುಮಾರು ಎರಡು ಸಾವಿರ ಕೊಡಗಳಷ್ಟು ಮದ್ಯವನ್ನು ಕುಡಿದು ಮತ್ತಷ್ಟು ಶಕ್ತಿವಂತನಾದನು. ಹಿಂದಿನ ವೀರರು ಕುಡಿಯುತ್ತಿದ್ದ ಮದ್ಯ ಈಗಿನ ಮದ್ಯದಂತೆ ಇಂದ್ರಿಯಗಳನ್ನು ಹಾಳು ಮಾಡುವಂತಹದ್ದು ಆಗಿರಲಿಲ್ಲ. ಏಕೆಂದರೆ ಕುಂಭಕರ್ಣನು ಇಷ್ಟು ಕುಡಿದರೂ ಸರಿಯಾಗಿಯೇ ವರ್ತಿಸುತ್ತಿದ್ದನು. ಅವನು ಅಣ್ಣನಿಗೆ ಧರ್ಮವನ್ನು ಬೋಧಿಸುವ ಪರಿಯೂ ತುಂಬಾ ಚೆನ್ನಾಗಿದೆ. ಈಗಿನ ಎನರ್ಜಿ ಡ್ರಿಂಕ್ ಗಳಂತೆ ಅವುಗಳು ಒಂದಷ್ಟು ಉತ್ತೇಜನ ಕೊಡುತ್ತಿದ್ದವು, ಅಥವಾ ಆಗಿನ ಜನರ ಸಾಮರ್ಥ್ಯವು ಅತಿಶಯಿತವಾಗಿತ್ತೋ ಏನೋ! ಕುಂಭಕರ್ಣನು ಕುಡಿದ ಪ್ರಮಾಣದ ಮದ್ಯ ಈಗಿನ ಒಂದು ದೊಡ್ಡ ಮದ್ಯದಂಗಡಿಯ ಎಲ್ಲಾ ಮದ್ಯದಷ್ಟು ಆಗಬಹುದೇನೋ! ಅವನ ಸ್ವೀಕರಿಸುವ ಸಾಮರ್ಥ್ಯ ಅಥವಾ ದೇಹ ಎಷ್ಟು ಬೃಹತ್ತಾಗಿದ್ದಿರಬಹುದು! ಕಲ್ಪನೆಗೆ ಸಿಗದ ಅದ್ಭುತ ಕುಂಭಕರ್ಣ._
*ಕೇಚಿಚ್ಛರಣ್ಯಂ ಶರಣಂ ಸ್ಮ ರಾಮಂ ವ್ರಜಂತಿ ಕೇಚಿದ್ವ್ಯಥಿತಾಃ ಪತಂತಿ ಕೇಚಿದ್ದಿಶಃ ಸ್ಮ ವ್ಯಥಿತಾಃ ಪ್ರಯಾಂತಿ ಕೇಚಿದ್ಭಯಾರ್ತಾ ಭುವಿ ಶೇರತೇ ಸ್ಮ*
_ಕುಂಭಕರ್ಣನನ್ನು ನೋಡಿದ ಕಪಿಗಳ ಅವಸ್ಥೆಯನ್ನು ವಾಲ್ಮೀಕಿ ಸುಂದರವಾಗಿ ಸೆರೆಹಿಡಿದಿದ್ದಾನೆ. ಅವರೆಲ್ಲರೂ ಹೆದರಿಹೋದರು. ಊಹಾತೀತವಾದ ಅವನ ಆಕೃತಿ ಕಂಡು ಕೆಲವರು ತತ್ತರಿಸಿಹೋದರು. ಕೆಲವರು ರಾಮನೇ ನಮಗೆ ಗತಿಯೆಂದು ಒಡಿಹೋದರು. ಕೆಲವರು ಭಯದಿಂದ ನಡುಗುತ್ತಾ ಅಲ್ಲೇ ನೆಲಕ್ಕುರುಳಿದರು. ಕೆಲವರು ಅಂಜಿಕೆಯಿಂದ ಕಂಗೆಟ್ಟು ದಿಕ್ಕುದಿಕ್ಕುಗಳಿಗೆ ಪಲಾಯನ ಮಾಡಿದರು. ಕೆಲವರು ತಲ್ಲಣಿಸಿ ನೆಲವನ್ನಪ್ಪಿಕೊಂಡು ಮಲಗಿ ಬಿಟ್ಟರು. ಗ್ರೆನೇಡ್ ಅಥವಾ ದೊಡ್ಡ ಬಾಂಬ್ ಅಪ್ಪಳಿಸಿದಾಗ ಆಗುವ ಸಂಗತಿಗಳು ಕುಂಭಕರ್ಣನನ್ನು ನೋಡಿದಾಗಲೇ ಘಟಿಸಿದವು. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಆ ಆಕೃತಿ ಕಂಡ ಕಪಿವೀರರು ಎತ್ತೆತ್ತಲೋ ಓಡಿದರು. ಅವನ ಆಗಮನವೇ ಒಂದು ಅಚ್ಚರಿಯಾಗಿತ್ತು._
*ಪೃಥಿವ್ಯಾಃ ಕೇತುಭೂತೋಸೌ ಮಹಾನೇಕೋತ್ರ ದೃಶ್ಯತೇ*
_ಕವಿ ಈ ಸಂದರ್ಭದಲ್ಲಿ ಒಂದು ಒಳ್ಳೆಯ ಉಪಮೆ ಬಳಸಿದ್ದಾನೆ. ಹಿಂದೆ ತ್ರಿವಿಕ್ರಮನಾಗಿ ಅವತಾರ ತಾಳಿದ ವಾಮನನು ಎದ್ದುಬಂದಂತೆ ಇತ್ತು ಈ ಸ್ಥಿತಿ. ರಾಮನು ಅದನ್ನು ಕಂಡು ವಿಭೀಷಣನ ಬಳಿ ಪ್ರಶ್ನಿಸುತ್ತಾನೆ. ಯಾರಿವನು, ಮಿಂಚಿನಿಂದ ಕೂಡಿದ ಮೇಘದಂತೆ ಕಾಣುತ್ತಿರುವನು. ಬೃಹದಾಕಾರದ ಇವನು ಭೂಮಿಗೆ ಧ್ವಜಸ್ಥಂಭದಂತೆ ತೋರುತ್ತಿದ್ದಾನೆ. ರಾಕ್ಷಸನೋ, ಅಸುರನೋ, ಭೂತವೋ? ಇಲ್ಲಿ ವರ್ಣಿಸಿದ ಧ್ವಜಸ್ತಂಭದ ಉಪಮೆ ತುಂಬಾ ಸಮಂಜಸವಾಗಿದೆ. ಆಕಾಶದೆತ್ತರಕ್ಕೆ ಹಾರುವ ಧ್ವಜವೊಂದನ್ನು ಹಾರಿಸಿದರೆ ಅದಕ್ಕೆ ಆಧಾರವಾಗಿ ಒಂದು ಸ್ಥಂಭ ಬೇಕಾಗುತ್ತದೆ. ಆ ಕಂಬದಂತೆ ಬೃಹತ್ತಾಗಿದ್ದನು ಕುಂಭಕರ್ಣ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ