ಮಹಾಭಾರತ ೫೨
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೨
*ತಚ್ಛ್ರುತ್ವಾ ವಾಸುದೇವಸ್ಯ ತಥಾ ಚಕ್ರುರ್ಜನಾಧಿಪ ನಿವೃತ್ತಶ್ಚಾರ್ಜುನಸ್ತತ್ರ ವಿವಾಹಂ ಕೃತವಾಂಸ್ತತಃ*
_ವಾಸುದೇವನ ಮಾತನ್ನು ಕೇಳಿದ ವೃಷ್ಣಿಗಳು ಅರ್ಜುನನನ್ನು ಗೌರವ ಪೂರ್ವಕ ಕರೆತಂದು ವಿಧಿವತ್ತಾಗಿ ಸುಭದ್ರೆಯೊಡನೆ ವಿವಾಹ ಮಾಡಿಸಿದರು. ಒಂದು ತಪ್ಪು ಮಾಡಿದ ಭಾವನೆಯಿಂದ ತೀರ್ಥಯಾತ್ರೆಗೆ ಹೊರಟ ಅರ್ಜುನ ಮೂರು ಮೂರು ತಪ್ಪುಗಳನ್ನು ಮಾಡಿದ. ( ಚಿತ್ರಾಂಗದೆ, ಉಲೂಪಿ, ಸುಭದ್ರೆಯರನ್ನು ವರಿಸಿದ)_
*ಉಷಿತ್ವಾ ತತ್ರ ಕೌಂತೇಯಃ ಸಂವತ್ಸರಪರಾಃ ಕ್ಷಪಾಃ ಪುಷ್ಕರೇಷು ತತಃ ಶಿಷ್ಟಂ ಕಾಲಂ ವರ್ತಿತವಾನ್ಪ್ರಭುಃ*
_ಅನಂತರ ಒಂದು ವರ್ಷ ಪೂರ್ತಿ ಸುಭದ್ರೆಯೊಡನೆ ಅಲ್ಲಿಯೇ ವಾಸ ಮಾಡಿ ಮುಂದೆ ಉಳಿದ ವರ್ಷಗಳನ್ನು ಪವಿತ್ರವಾದ ಪುಷ್ಕರ ತೀರ್ಥದಲ್ಲಿ ಕಳೆದನು. ಹನ್ನೆರಡು ವರ್ಷಗಳು ಕಳೆದ ಮೇಲೆ ಇಂದ್ರಪ್ರಸ್ಥ ಅಥವಾ ಖಾಂಡವಪ್ರಸ್ಥವನ್ನು ಮತ್ತೆ ಸೇರಿದನು.ಪುಷ್ಕರ ಎಂಬ ರಾಜ ಇಲ್ಲಿ ಸಿದ್ಧಿಯನ್ನು ಪಡೆದ ಶ್ರೇಷ್ಠ ಸ್ಥಳ. ಏಳು ಪವಿತ್ರ ದ್ವೀಪಗಳಲ್ಲಿ ಪುಷ್ಕರದ್ವೀಪವೂ ಒಂದೆಂದು ಕೂರ್ಮಪುರಾಣ ಇದರ ಮಹತ್ವವನ್ನು ಸಾರಿದೆ. ಅಲ್ಲಿ ಅರ್ಜುನನು ಬಹುಕಾಲ ತಪಸ್ಸನ್ನು ಆಚರಿಸಿದನು._
*ತತ್ರೈವ ಗಚ್ಛ ಕೌಂತೇಯ ಯತ್ರ ಸಾ ಸಾತ್ವತಾತ್ಮಜಾ ಸುಬದ್ಧಸ್ಯಾಪಿ ಭಾರಸ್ಯ ಪೂರ್ವಬಂಧಃ ಶ್ಲಥಾಯತೇ*
_ದ್ರೌಪದಿಯ ಹುಸಿಮುನಿಸಿನ ಮಾತಿದು. ಸುಭದ್ರೆಯೊಡನೆ ಪಾರ್ಥನು ಹಿಂತಿರುಗಿದಾಗ ಪ್ರಣಯ ಕೋಪವನ್ನು ತೋರುತ್ತಾ ದ್ರೌಪದಿ ಹೀಗೆ ಹೇಳುವಳು-ಅರ್ಜುನ, ಆ ಸಾತ್ವತ ವಂಶದ ಪುತ್ರಿ ಇರುವೆಡೆಯೇ ಹೋಗು. ಚೆನ್ನಾಗಿ ಕಟ್ಟು ಹಾಕಿದರೂ ಭಾರದ ಮೊದಲನೆಯ ಗಂಟು ಶಿಥಿಲವಾಗುತ್ತದೆ. ಎರಡನೆಯ ಮಾತಂತೂ ಸಾರ್ವಕಾಲಿಕ ಸತ್ಯ. ಹಿಂದೆ ಹನುಮನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದಾಗ ತಿಳಿಗೇಡಿಗಳಾದ ರಾಕ್ಷಸರು ಅದರ ಮೇಲೆ ಮತ್ತೆ ಹಗ್ಗದಿಂದ ಬಿಗಿಯುತ್ತಾರೆ. ಆಗ ಬ್ರಹ್ಮಾಸ್ತ್ರದ ಪ್ರಭಾವ ತಾನೇ ತಾನಾಗಿ ದೂರವಾಗುತ್ತದೆ. ಯಾವ ವಿಷಯದಲ್ಲಾದರೂ ಒಂದೇ ಗಂಟು ಅಥವಾ ನಿರ್ಧಾರ ಇರಬೇಕು. ಚಂಚಲವಾದರೆ ಮೊದಲನೆಯ ನಿರ್ಣಯ ಎರಡನೆಯ ನಿರ್ಣಯದೆದುರು ಬಿದ್ದು ಹೋಗುತ್ತದೆ. ಕಟ್ಟಿಗೆಯ ಕಟ್ಟನ್ನು ಕಟ್ಟುವಾಗ ಒಮ್ಮೆ ಮಾತ್ರ ಗಟ್ಟಿ ಗಂಟನ್ನು ಕಟ್ಟಬೇಕು. ಒಮ್ಮೆ ಕಟ್ಟಿ ಅದರ ಮೇಲೆ ಮತ್ತೆ ಕಟ್ಟಿದಾಗ ಹಿಂದಿನ ಗಂಟು ಸಹಜವಾಗಿ ಸಡಿಲವಾಗುತ್ತದೆ. ದೂರದೂರಕ್ಕೆ ಭಾರ ವಸ್ತುಗಳನ್ನು ಸಾಗಿಸುವಾಗ ಇದರ ಅರಿವು ಸರಿಯಾಗಿ ಅನುಭವಕ್ಕೆ ಬರುತ್ತದೆ. ಪ್ರಕೃತ ಮೊದಲು ದ್ರೌಪದಿಯನ್ನು ವರಿಸಿದ ಪಾರ್ಥ ಈಗ ಸಾತ್ವತಿಯನ್ನು ವರಿಸಿದ್ದಾನೆ. ಹಾಗಾಗಿ ಮೊದಲಿದ್ದ ಪ್ರೀತಿ ಈಗ ಕಡಿಮೆಯಾಗಿದೆ ಎಂಬ ಭಾವ ಪಾಂಚಾಲಿಯದ್ದು._
*ತಥಾ ಬಹುವಿಧಾಂ ಕೃಷ್ಣಾಂ ವಿಲಪಂತೀಂ ಧನಂಜಯಃ ಸಾಂತ್ವಯಾಮಾಸ ಭೂಯಶ್ಚ ಕ್ಷಮಯಾಮಾಸ ಚಾಸಕೃತ್*
_ಹಿಂದಿನವರಿಗೆ ವಿಶಿಷ್ಟವಾಗಿ ಇದ್ದ ಗುಣ ತಪ್ಪು ಮಾಡಿದಾಗ ಹಿಂದೆ ಮುಂದೆ ಯೋಚಿಸದೇ ಕ್ಷಮೆ ಕೇಳುವುದು. ಇದೇ ಅವರ ಸಾವಿರಾರು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುತ್ತಿತ್ತು. ಈಗಿನ ನಮಗೆ ಕ್ಷಮೆ ಕೇಳುವುದೆಂದರೆ ಅಲರ್ಜಿ. ತಪ್ಪು ಮಾಡಿದರೂ ಕ್ಷಮೆ ಕೇಳೆಂದಾಗ ಮೈಯೆಲ್ಲಾ ತುರಿಸಿದಂತೆ ಮಾಡುವೆವು. ಮಡದಿಯ ಮಾತಿಗೆ ಕೋಪಗೊಳ್ಳದ ರಸಿಕನಾದ ಪಾಂಡವ ಬಹಳವಾಗಿ ಅವಳನ್ನು ಸಾಂತ್ವನ ಮಾಡಿ ತನ್ನ ಕೃತ್ಯಕ್ಕೆ ಮತ್ತೆ ಮತ್ತೆ ಕ್ಷಮೆ ಕೇಳಿದನು. ಕೊನೆಗೆ ದ್ರೌಪದಿಗೆ ಸ್ವಲ್ಪ ಸಮಾಧಾನವಾದಾಗ ಗೊಲ್ಲತಿಯ ವೇಷ ಹಾಕಿಸಿ ಸುಭದ್ರೆಯನ್ನು ಕರೆತಂದು ಕುಂತಿಯ ಬಳಿ ಕಳುಹಿಸಿದನು. ಮುಂದಿನ ಕಥಾಭಾಗ...._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ