ಸ್ವಪ್ನವಾಸವದತ್ತ ೫

🌼 ಸ್ವಪ್ನವಾಸವದತ್ತ ಎಸಳು-೫🌼

*सुखमर्थो भवेत् दातुं सुखं प्राणा: सुखं तप: । सुखमन्यद् भवेत् सर्वं दु:खं न्यासस्य रक्षणम् ।।*

_ಕಂಚುಕಿಯ ಮಾತು. ರಾಜ ದರ್ಶಕನ ಮಗಳಾದ ಪದ್ಮಾವತಿ ತಪಸ್ವಿಗಳ ಆಶ್ರಮಕ್ಕೆ ಬಂದು ಧರ್ಮವೆಂದು ದಾನ ಮಾಡುತ್ತಿದ್ದಾಳೆ. ಆದರೆ ತಪಸ್ವಿಗಳು ಇದ್ದುದರಲ್ಲೇ ತೃಪ್ತರಾದ ಕಾರಣ ಪ್ರತಿಗ್ರಹಕ್ಕೆ ಯಾರೂ ಬರುವುದಿಲ್ಲ. ಆಗ ಯೌಗಂಧರಾಯಣನು ನಾನು ಒಂದನ್ನು ಕೇಳುವೆನೆಂದು ಮುಂದೆ ಬಂದು ವತ್ಸನ ಪತ್ನಿಯಾದ ವಾಸವದತ್ತೆಯನ್ನು ಅವಳ ಪತಿ ಹಿಂತಿರುಗುವ ತನಕ ನಿನ್ನ ಬಳಿ ನ್ಯಾಸವಾಗಿ ಅಥವಾ ರಕ್ಷಣೆಗಾಗಿ ಇಡುವೆನು ಎನ್ನುತ್ತಾನೆ. ಆಗ ಕಂಚುಕಿ ಆಡುವ ಮಾತು. ಲೋಕದಲ್ಲಿ ಏನನ್ನು ಬೇಕಾದರೂ ಕೊಡಬಹುದು. ನಮ್ಮ ಬಳಿ ಧನವಿದ್ದಾಗ ಯಾರಾದರೂ ಬಂದು ಕೇಳಿದರೆ ಉದಾರವಾಗಿ ನೀಡಬಹುದು. ಯಾರನ್ನೋ ರಕ್ಷಿಸಲು ಅಥವಾ ಲೋಕದ ಹಿತಕ್ಕಾಗಿ ಪ್ರಾಣವನ್ನು ಬೇಕಾದರೆ ನೀಡಬಹುದು. ಪರೋಪಕಾರಕ್ಕಾಗಿ ಅನೇಕ ಮಹಾತ್ಮರು ದಧೀಚಿ ಅಂತಹ ವ್ಯಕ್ತಿಗಳು ಪ್ರಾಣವನ್ನೇ ಬಿಟ್ಟಿದ್ದಾರೆ. ಬಹುಕಾಲದ ತಪದ ಫಲವನ್ನು ಬೇಕಾದರೆ ಸಂದರ್ಭ ಒದಗಿದಾಗ ಕೊಡಬಹುದು. ಪರಶುರಾಮ ರಾಮನಿಗೆ ತನ್ನ ತಪದ ಫಲವನ್ನು ಧಾರೆ ಎರೆಯುತ್ತಾನೆ. ಇವೆಲ್ಲವೂ ಸ್ವಲ್ಪ ಮಟ್ಟಿಗಾದರೂ ಸುಖ. ಆದರೆ ಒಂದು ಸಂಗತಿ ಬಹಳ ಕಷ್ಟವಾದುದು. ಯಾರಾದರೂ ನಮ್ಮ ಬಳಿ ವಸ್ತುವೊಂದನ್ನು ಇರಿಸಿದಾಗ ಅದನ್ನು ನೋಡಿಕೊಳ್ಳುವ ಜವಾಬ್ದಾರಿ ಬಹಳ ಕಷ್ಟಕರ. ಏಕೆಂದರೆ ಮುಂದೊಂದು ದಿನ ಆ ವಸ್ತುವನ್ನು ವ್ಯತ್ಯಾಸವಿಲ್ಲದೆ ಹಿಂತಿರುಗಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಪರರಿಂದ ಇಟ್ಟ ನ್ಯಾಸವನ್ನು ನಮ್ಮ ವಸ್ತುಗಳಿಗಿಂತ ಹೆಚ್ಚಿನ ಆಸ್ಥೆಯಲ್ಲಿ ನೋಡಿಕೊಳ್ಳಬೇಕು. ಹೆಚ್ಚು ಕಮ್ಮಿ ಆದರೆ ನ್ಯಾಸಿಗೆ ನಾವೇ ಉತ್ತರ ನೀಡಬೇಕು. ಹಾಳಾದರೆ ಹೇಳಿದ್ದನ್ನೆಲ್ಲಾ ಸುಮ್ಮನೆ ಕೇಳಿಸಿಕೊಳ್ಳಬೇಕು. ವಾಸವದತ್ತೆ ಸುಖವಾಗಿಯೇ ಇದ್ದರೆ ಚಿಂತೆ ಇಲ್ಲ. ಒಂದೊಮ್ಮೆ ಅವಳಿಗೆ ದುಃಖವಾದರೆ, ಅನಾರೋಗ್ಯವಾದರೆ, ಪ್ರಾಣ ಹೋದರೆ ಉತ್ತರದಾಯಿತ್ವ ನಮ್ಮಲ್ಲೇ ಇರುತ್ತದೆ. ಹಾಗಾಗಿ ಲೋಕದಲ್ಲಿ ಏನನ್ನು ಬೇಕಾದರೂ ಕೊಡುವುದು ಸುಲಭ. ಆದರೆ ನಮ್ಮಲ್ಲಿ ನೋಡಿಕೊಳ್ಳಲು ಕೊಟ್ಟಿರುವ ವಸ್ತು ಅಥವಾ ವ್ಯಕ್ತಿಗಳ ರಕ್ಷಣೆ ಮಾತ್ರ ಬಹಳ ಕಷ್ಟ. ಇಲ್ಲಿ ಮೊದಲು ಸುಲಭವೆಂದಿರುವ ದಾನಗಳು ನಿಜಕ್ಕೂ ಕಷ್ಟವಾದುದು. ಧನ ಕೊಡಲು ಉದಾರತೆ, ಪ್ರಾಣ ಕೊಡಲು ಮಹಾತ್ಯಾಗದ ಬುದ್ಧಿ, ತಪದ ಫಲ ಕೊಡಲು ಸರ್ವಸಮರ್ಪಣಾ ಭಾವ ಇವೆಲ್ಲವೂ ಇರಬೇಕು. ಇವೆಲ್ಲ ಇರುವುದೇ ಕಷ್ಟ. ಇವೆಲ್ಲವುಗಳಿಗಿಂತ ನ್ಯಾಸದ ಸಂರಕ್ಷಣೆ ಇನ್ನೂ ಕಷ್ಟ ಎಂಬ ಭಾವ. ನಮಗೂ ಅನೇಕ ಬಾರಿ ಪರರ ವಸ್ತುಗಳನ್ನು ಜತನದಿಂದ ಕಾಪಾಡುವ ಕೆಲಸ ಬಹಳ ಕಿರಿಕಿರಿಯನ್ನು ತಂದುಕೊಡುತ್ತದೆ. ಕಂಚುಕಿ ಅದನ್ನೇ ವಾಸವದತ್ತೆಯ ವಿಷಯದಲ್ಲಿ ಪ್ರಕಟಿಸುತ್ತಿದ್ದಾನೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩