ರಾಮಾಯಣ ೯೭
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೭
*ಯಶ್ಚೈಷ ನಾನಾವಿಧಘೋರರೂಪೈರ್ವ್ಯಾಘ್ರೋಷ್ಟ್ರನಾಗೇಂದ್ರ ಮೃಗಾಶ್ವ ವಕ್ತ್ರೈಃ ಭೂತೈರ್ವೃತೋ ಭಾತಿ ವಿವೃತ್ತನೇತ್ರೈಃ ಸೋಸೌ ಸುರಾಣಾಮಪಿ ದರ್ಪಹಂತಾ*
_ನೀಲನು ಪ್ರಹಸ್ತನನ್ನು ಕೊಂದಾಗ ಸಾಕ್ಷಾತ್ ರಾವಣನೇ ಸೈನ್ಯದೊಡನೆ ಯುದ್ಧಕ್ಕೆ ಬರುತ್ತಾನೆ. ಅವನ ಸೇನಾಮುಖ್ಯರಾದ ಪಿಶಾಚ,ಮಹೋದರ ಮೊದಲಾದ ವೀರರನ್ನು ಪರಿಚಯಿಸಿತ ಅನಂತರ ರಾವಣನ ಜೊತೆಗಿರುವ ಸೇನೆಯನ್ನು ವಿಭೀಷಣನು ವರ್ಣಿಸುತ್ತಿದ್ದಾನೆ. ರಾವಣನ ಸೇನೆಯಲ್ಲಿ ಬೇರೆ ಬೇರೆ ಪ್ರಾಣಿಗಳ ಮುಖದ ರಾಕ್ಷಸರು ಅನೇಕ ಇದ್ದರು. ಹಿಂದೆ ವಿಕಾರ ರೂಪದ ರಾಕ್ಷಸರ ವರ್ಣನೆ ಸುಂದರಕಾಂಡದಲ್ಲಿ ಬರುತ್ತದೆ. ಮೂರು ಕಣ್ಣು, ಮೂರು ಮುಖ ಒಕ್ಕಣ್ಣು ಇತ್ಯಾದಿ. ಇಲ್ಲಿ ಹುಲಿ , ಆನೆ, ಒಂಟೆ, ಜಿಂಕೆ, ಕುದುರೆ ಮೊದಲಾದ ಪ್ರಾಣಿಗಳ ಮುಖದ ರಾಕ್ಷಸರು ಅವನ ಜೊತೆಗಿದ್ದರು. ಇಂತಹ ರೂಪ ಅವರಿಗೆ ಹುಟ್ಟಿನಿಂದ ಬಂದದ್ದೋ ಅಥವಾ ವರಬಲದಿಂದಲೋ ಅನ್ನುವ ಅಂಶ ವಿಮರ್ಶಿಸುವಂತಹದು. ವಿಕಾರವಾದರೆ ಗರ್ಭಾದಿ ದೋಷಜನ್ಯ ಎನ್ನಬಹುದು, ಆದರೆ ಇಂತಹ ಮೊಗಗಳು ಹುಟ್ಟಲು ಏನು ಕಾರಣವೋ ಏನೋ!_
*ದೇವದಾನವವೀರಾಣಾಂ ವಪುರ್ನೈವಂವಿಧಂ ಭವೇತ್ ಯಾದೃಶಂ ರಾಕ್ಷಸೇಂದ್ರಸ್ಯ ವಪುರೇತತ್ಪ್ರಕಾಶತೇ*
_ರಾವಣನನ್ನು ನೋಡಿದ ರಾಮನ ಮಾತು. ಶತ್ರುವಿನ ಗುಣಗಳನ್ನು ಯಾರು ಮೆಚ್ಚಿಕೊಳ್ಳುವನೋ ಅವನು ನಿಜವಾದ ಗುಣಗ್ರಾಹಿ ಎನ್ನಬಹುದು. ರಾಮನಿಗೆ ಕೊಲ್ಲುವಷ್ಟು ಸಿಟ್ಟು ಇದ್ದರೂ ಅವನ ಗುಣಗಳನ್ನು ಧಾರಾಳವಾಗಿ ಹೊಗಳುತ್ತಿದ್ದಾನೆ. ವಿಭೀಷಣ, ಎಂತಹ ತೇಜಸ್ವಿ ಇವನು, ಈ ರಾಕ್ಷಸರಾಜನ ಆಕೃತಿ ದೇದೀಪ್ಯಮಾನವಾಗಿದೆ. ದೇವ-ದಾನವ ವೀರರಲ್ಲಿ ಯಾರಿಗೂ ಇಂತಹ ಆಕೃತಿ ಇರಲಾರದು. ಇವನನ್ನು ನೋಡಿದರೆ ಸೂರ್ಯನನ್ನೇ ನೋಡಿದಂತಾಗುವುದು. ಇವನ ರೂಪ ತೇಜೋವಿಶೇಷದಿಂದ ಆವೃತವಾಗಿದೆ. ಇಂತಹ ಗುಣಗ್ರಾಹಿತ್ವ ನಮ್ಮಲ್ಲೂ ಕಂಡುಬರಬೇಕು._
*ತಸ್ಯ ಛಿದ್ರಾಣಿ ಮಾರ್ಗಸ್ವ ಸ್ವಛಿದ್ರಾಣಿ ಚ ಲಕ್ಷಯ ಚಕ್ಷುಷಾ ಧನುಷಾ ಯತ್ನಾದ್ರಕ್ಷಾತ್ಮಾನಂ ಸಮಾಹಿತಃ*
_ರಾಮನ ಮಾತು. ರಾವಣನೊಡನೆ ನಾನು ಯುದ್ಧ ಮಾಡಿ ವಧಿಸುವೆನೆಂದು ಲಕ್ಷ್ಮಣನು ಹೊರಟಾಗ ರಾಮನ ಎಚ್ಚರಿಕೆಯ ಮಾತು. ಲಕ್ಷ್ಮಣ, ರಾವಣ ಸಾಮಾನ್ಯನಲ್ಲ. ಯುದ್ಧ ಮಾಡುವಾಗ ಮೈಯೆಲ್ಲಾ ಕಣ್ಣಾಗಿರು. ಯುದ್ಧದಲ್ಲಿ ಅವನ ನ್ಯೂನತೆಗಳನ್ನು ಹುಡುಕುತ್ತಿರು. ನಿನ್ನಲ್ಲಿ ನ್ಯೂನತೆಗಳು ಉಂಟಾಗದಂತೆ ಅಥವಾ ಉಂಟಾದರೂ ಶತ್ರುವಿಗೆ ತಿಳಿಯದಂತೆ ಎಚ್ಚರಿಕೆ ವಹಿಸು. ಕಣ್ಣು ತುಂಬಾ ಚುರುಕಾಗಿರಲಿ. ನಿನ್ನ ಕಣ್ಣಿನಿಂದ ಹಾಗೂ ಧನುಸ್ಸಿನಿಂದ ನಿನ್ನನ್ನು ನೀನು ಸದಾ ರಕ್ಷಿಸಿಕೊ. ಯುದ್ಧ ಮಾಡುವಾಗ ಈ ಅಂಶ ಅವಶ್ಯವಾಗಿ ಗಮನಿಸಬೇಕು. ನಮ್ಮಿಂದ ತಪ್ಪುಗಳು ಆಗದಂತೆ ಜಾಗೃತೆ ವಹಿಸುವುದು, ಶತ್ರುಗಳ ನ್ಯೂನತೆಗಳನ್ನು ಗುರುತಿಸಿ ಅವರನ್ನು ಗುರಿ ಮಾಡುವುದು ಇವೆರಡೂ ಮುಖ್ಯವಾಗಿ ಮಾಡಬೇಕಾದುದು. ಯಾವ ಕಡೆಯಿಂದ ಬಾಣ ಅಥವಾ ಬೇರೆ ಶಸ್ತ್ರಾಸ್ತ್ರ ಬರುವುದೆಂದು ಸದಾ ಗಮನ ಇಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕ್ಷಣದಲ್ಲಿ ಪ್ರಾಣ ಹೋದೀತು. ಹೀಗೆ ಯುದ್ಧ ಮಾಡಿ ರಾವಣನನ್ನು ತರಿ ಎಂದು ರಾಮ ಆಶೀರ್ವದಿಸಿ ಕಳಿಸುತ್ತಾನೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ