ಮಹಾಭಾರತ ೫೭
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೭
*ಧನುರ್ಮೇ ನಾಸ್ತಿ ಭಗವಾನ್ಬಾಹುವೀರ್ಯೇಣ ಸಂಮಿತಮ್ ಕುರ್ವತಃ ಸಮರೇ ಯತ್ನಂ ವೇಗಂ ಯದ್ವಿಷಹೇತ ಮೇ*
_ಅಗ್ನಿಯ ಕೋರಿಕೆಯನ್ನು ಒಪ್ಪಿದ ಅರ್ಜುನನು ಹೀಗೆ ಹೇಳುತ್ತಾನೆ. ಪೂಜ್ಯನೇ, ನನ್ನ ಬಾಹುಬಲಕ್ಕೆ ಸಮನಾದ, ಯುದ್ಧದಲ್ಲಿ ನನ್ನ ವೇಗ ಸಹಿಸಿಕೊಳ್ಳುವ ಧನುಸ್ಸು ನನ್ನ ಬಳಿ ಇಲ್ಲ. ಅಕ್ಷಯವಾದ ಬಾಣಗಳೂ ಇಲ್ಲ. ವಾಯುವೇಗವುಳ್ಳ ದಿವ್ಯವಾದ ಬಿಳಿಯ ಕುದುರೆಗಳಿರುವ ಸೂರ್ಯನಿಗೆ ಸಮವಾದ ತೇಜಸ್ಸಿನಿಂದ ಕೂಡಿದ ರಥವನ್ನೂ ಅಪೇಕ್ಷಿಸುತ್ತೇನೆ. ಅದರಂತೆ ಕೃಷ್ಣನ ಪರಾಕ್ರಮಕ್ಕೆ ಸಮನಾದ ಮತ್ತು ಯುದ್ಧದಲ್ಲಿ ನಾಗರರ, ಪಿಶಾಚರ ಸಂಹಾರ ಮಾಡಲು ಯೋಗ್ಯವಾದ ಆಯುಧ ಅವನ ಬಳಿ ಇಲ್ಲ. ನೀನು ಇವುಗಳನ್ನೆಲ್ಲ ಒದಗಿಸಿದರೆ ನಾವಿಬ್ಬರು ಸೇರಿ ನಿನ್ನ ಬಯಕೆಯನ್ನು ಈಡೇರಿಸುತ್ತೇವೆ ಎಂದನು. ಇಲ್ಲಿ ಅರ್ಜುನನ ಸಮಯಸ್ಫೂರ್ತಿಯನ್ನು ಗಮನಿಸಬೇಕು. ಮಹಾತ್ಮರ ದರ್ಶನ ಎಂದಿಗೂ ವ್ಯರ್ಥವಾಗದು. ಅಗ್ನಿಯಂತಹ ಒಬ್ಬ ಮಹಿಮ ಸಿಕ್ಕಿರುವುದೇ ಅದೃಷ್ಟ. ಅವನ ಬಳಿ ತನಗೆ ಬೇಕಾದ ಸಂಗತಿಗಳನ್ನು ಪಡೆದುಕೊಂಡರೆ ಮುಂದೆಂದಾದರೂ ಸಾರ್ಥಕವಾಗಬಹುದೆಂಬ ಉತ್ತಮ ಆಲೋಚನೆ. ಸಾಮಾನ್ಯ ಸಂಗತಿಗಳಾವುದನ್ನೂ ಕೇಳದೇ ವಿಶಿಷ್ಟವಾದ ಕ್ಷತ್ರಿಯೋಚಿತವಾದ ವಸ್ತುಗಳನ್ನೇ ಕೇಳಿ ಪಡೆಯುತ್ತಾನೆ. ತನಗೆ ಮಾತ್ರವಲ್ಲದೆ ಕೃಷ್ಣನಿಗೂ ಕೇಳುವುದು ಅವನ ಔದಾರ್ಯತೆಯನ್ನು ತೋರಿಸುತ್ತದೆ. ಅವರ ನಡುವಿನ ಆತ್ಮೀಯತೆಯೂ ಅಂತಹದ್ದು. ನಾವೂ ಯಾರಾದರೂ ಮಹಿಮರು ಭೇಟಿಯಾದರೆ ಕ್ಷುಲ್ಲಕ ಸಂಗತಿ ಅವರೆದುರು ಅರುಹದೇ ವಿಶಿಷ್ಟ ವಿಷಯಗಳನ್ನು ಸಂಪಾದಿಸುವ ಪದ್ಧತಿ ಬೆಳೆಸಿಕೊಳ್ಳಬೇಕು._
*ಸೋಮೇನ ರಾಜ್ಞಾ ಯದ್ದತ್ತಂ ಧನುಶ್ಚೈವೇಷುಧೀ ಚ ತೇ ತತ್ಪ್ರಯಚ್ಛೋಭಯಂ ಶೀಘ್ರಂ ರಥಂ ಚ ಕಪಿಲಕ್ಷಣಮ್*
_ಅರ್ಜುನನ ಕೋರಿಕೆಯಂತೆ ಒಡನೆಯೇ ಅಗ್ನಿಯು ವರುಣನನ್ನು ಸ್ಮರಿಸಿ ಅವನನ್ನು ಪೂಜಿಸಿ ಅವನನ್ನು ಕುರಿತು ಹೇಳಿದನು- ರಾಜನಾದ ಸೋಮನು ಹಿಂದೆ ನಿನಗೆ ಕೊಟ್ಟ ಬಿಲ್ಲು ಮತ್ತು ಎರಡು ಬತ್ತಳಿಕೆಗಳು ಹಾಗೂ ಕಪಿಚಿಹ್ನೆಯ ರಥವನ್ನೂ ನನಗೆ ಕೊಡು. ಅನಂತರ ವರುಣ ಆ ವಿಶಿಷ್ಟವಾದ ಧನುಸ್ಸನ್ನು ನೀಡಿದನು. ಎಲ್ಲಾ ಆಯುಧಗಳ ಪೈಕಿ ದೊಡ್ಡ ಅಳತೆಯುಳ್ಳ ಹಾಗೂ ಶಸ್ತ್ರಗಳನ್ನು ಭೇದಿಸುವ ಹಾಗೂ ಶತ್ರುಸೇನೆಯನ್ನು ಹಿಮ್ಮೆಟ್ಟಿಸುವ ಅಪಾರ ಸಾಮರ್ಥ್ಯವನ್ನು ಅದು ಹೊಂದಿತ್ತು. ದೇವ-ದಾನವ-ಗಂಧರ್ವರಿಂದ ಬಹುಕಾಲ ಅದು ಪೂಜಿತವಾಗಿತ್ತು. ವರುಣ ನೀಡಿದ ರಥದಲ್ಲಿ ಕುಳಿತು ಯುದ್ಧ ಮಾಡಿದರೆ ದೇವ ದಾನವರೂ ರಥಿಕನನ್ನು ಜಯಿಸಲು ಅಸಾಧ್ಯವಾಗಿತ್ತು. ಅದು ಸಾಕ್ಷಾತ್ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟಿತ್ತು. ಹಿಂದೆ ಸೋಮನು ಅ ರಥದಲ್ಲಿ ದಾನವರನ್ನು ಜಯಿಸಿದ್ದನು. ವಜ್ರಾಯುಧದಂತಹ ಒಂದು ದಿವ್ಯವಾದ ಧ್ವಜದಂಡ ಅದಕ್ಕಿತ್ತು. ಮೇಲೆ ಸಿಂಹ ಹಾಗೂ ಹುಲಿಗಳ ಲಕ್ಷಣೋಪೇತವಾದ ವಾನರನು ಪ್ರಕಾಶಿಸುತ್ತಿದ್ದನು. ಧ್ವಜದಲ್ಲಿ ಬೇರೆ ಬೇರೆ ಪ್ರಾಣಿಗಳ ಚಿತ್ರವೂ ಇದ್ದಿತು. ಯುದ್ಧದಲ್ಲಿ ಅವುಗಳೂ ಗರ್ಜಿಸಿ ಶತ್ರುಗಳನ್ನು ಹೆದರಿಸುವುದು ಆ ರಥದ ವೈಶಿಷ್ಟ್ಯವಾಗಿತ್ತು. ಅರ್ಜುನನು ಪ್ರದಕ್ಷಿಣೆ ಮಾಡಿ ದೇವತೆಗಳಿಗೆ ನಮಸ್ಕರಿಸಿ ಪುಣ್ಯಶಾಲಿಯಾದವನು ವಿಮಾನ ಏರಿ ( ದೇವಲೋಕಕ್ಕೆ ಅಂತ್ಯದಲ್ಲಿ ಹೋಗುವವನು) ಹೋಗುವಂತೆ ಹತ್ತಿದನು. ಬ್ರಹ್ಮ ನಿರ್ಮಿತ ಗಾಂಡೀವವೂ ಅವನಿಗೆ ದೊರಕಿತು. ಇಲ್ಲಿ ಅರ್ಜುನನ ನಡೆ ನಮಗೂ ಮರ್ಗದರ್ಶಕ.ನಾವು ನಮ್ಮ ನಮ್ಮ ವಾಹನಗಳ ಬಗೆಗೆ ಎಂದಾದರೂ ಇಂತಹ ಭಾವನೆ ತೋರುವೆಯೇ? ವಾಹನದಲ್ಲೂ ಭಗವಂತ ನೆಲೆಸಿದ್ದಾನೆ ಎಂದು ಅರಿತು ಅದಕ್ಕೊಂದು ಮನದಲ್ಲಾದರೂ ನಮಸ್ಕರಿಸಿ ಹೊರಡುವುದು ಶ್ರೇಷ್ಠವಾದೀತು. ನಮ್ಮ ವಾಹನಗಳು ಮಾನವ ನಿರ್ಮಿತವಾದರೂ ದೈವತ್ವ ಅಲ್ಲಿ ಬರಬಾರದೆಂದೇನಿಲ್ಲ. ಆಯಾ ವಸ್ತುಗಳಿಗೆ ಅದರದ್ದೇ ಅದ ಮಹತ್ವ ಇರುತ್ತದೆ. ಅನಂತರ ಕೃಷ್ಣನಿಗೆ ಅಗ್ನಿಯು ಆಗ್ನೇಯಾಸ್ತ್ರವನ್ನೂ *ವಜ್ರನಾಭ* ಎಂಬ ಚಕ್ರವನ್ನೂ ನೀಡಿದನು. ಕೃಷ್ಣನು ಶಿಶುಪಾಲನನ್ನು ಸಂಹರಿಸಿದ್ದು ಇದೇ ಚಕ್ರದಿಂದ. ಕೆಲವರು ಹೇಳುವಂತೆ ಸುದರ್ಶನನನ್ನು ಸ್ಮರಿಸಿ ತರಿಸಿದ್ದಲ್ಲ. ಇದೂ ಸುದರ್ಶನನ ಒಂದು ರೂಪವೂ ಇರಬಹುದು. ಶತ್ರುಗಳನ್ನು ಕೊಂದು ಪುನಃ ನಿನ್ನ ಕೈ ಸೇರುವುದು ಎಂದೂ ಅಗ್ನಿಯು ನುಡಿಯುತ್ತಾನೆ. ಇದರ ಜೊತೆಗೆ ಕೌಮೋದಕೀ ಎನ್ನುವ ಗದೆಯನ್ನೂ ವರುಣನು ಕೃಷ್ಣನಿಗೆ ಕೊಟ್ಟನು._
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ