ರಾಮಾಯಣ ೧೦೬

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೬

*ಪ್ರಕೃತ್ಯಾ ಹ್ಯೇಷ ತೇಜಸ್ವೀ ಕುಂಭಕರ್ಣೋ ಮಹಾಬಲಃ ಅನ್ಯೇಷಾಂ ರಾಕ್ಷಸೇಂದ್ರಾಣಾಂ ವರದಾನಕೃತಂ ಬಲಮ್*

_ವಿಭೀಷಣನು ಕುಂಭಕರ್ಣನ ಬಗ್ಗೆ ರಾಮನ ಹತ್ತಿರ ವರ್ಣಿಸುತ್ತಿದ್ದಾನೆ. ಬೇರೆ ರಾಕ್ಷಸರಂತಲ್ಲಾ ಇವನು, ಹುಟ್ಟಿನಿಂದಲೇ ಪರಾಕ್ರಮಿ. ಉಳಿದವರು ವರಬಲದಿಂದ ಪರಾಕ್ರಮಿಗಳು. ಇವನು ಹುಟ್ಟಿದೊಡನೆಯೇ ಸಾವಿರಾರು ಪ್ರಾಣಿಗಳನ್ನು ಹಿಡಿದು ಭಕ್ಷಿಸಲಾರಂಭಿಸಿದನು. ಪ್ರಜೆಗಳು ಹೆದರಿ ದೇವೇಂದ್ರನ ಮೊರೆಹೋಗಲು ಅವನು ವಜ್ರಾಯುಧದಿಂದ ಹೊಡೆದನು. ಕುಂಭಕರ್ಣನು ಕೋಪದಿಂದ ಐರಾವತದ ದಂತವನ್ನೇ ಹಿರಿದು ದೇವೇಂದ್ರನಿಗೇ ತಿರುಗಿಸಿ ಹೊಡೆದನು. ಆ ಪ್ರಹಾರದಿಂದ ನೊಂದ ಇಂದ್ರನು ಏನೂ ಮಾಡಲಾಗದೇ ಬ್ರಹ್ಮನ ಬಳಿ ದೂರಿತ್ತನು. ಪ್ರಜೆಗಳ ಭಕ್ಷಣೆ, ದೇವತೆಗಳ ಪೀಡನೆ, ಋಷ್ಯಾಶ್ರಮಗಳ ಧ್ವಂಸ, ಪರಸ್ತ್ರೀಯರ ಅಪಹಾರ ಹಾಗೂ ಅತ್ಯಾಚಾರವೇ ಮೊದಲಾದ ಅವನ ಕೃತ್ಯಗಳನ್ನು ಹೇಳಿ ಇನ್ನೂ ಕೆಲಕಾಲ ಇವನು ಬದುಕಿದ್ದರೆ ಜಗತ್ತು ಶೂನ್ಯವಾಗುವುದು ಎಂದನು. ಆಗ ಕೋಪಗೊಂಡ ಬ್ರಹ್ಮನು ಈ ದಿನದಿಂದ ನೀನು ಸತ್ತವನಂತೆ ಬಿದ್ದು ಸದಾ ನಿದ್ರಿಸುತ್ತಿರು ಎಂದು ಶಪಿಸಿದನು. ಆಗ ದುಃಖಿತನಾದ ರಾವಣನು ಬ್ರಹ್ಮನ ಬಳಿ ತನ್ನ ತಮ್ಮನನ್ನು ಮನ್ನಿಸೆಂದು ಕೇಳಿಕೊಂಡಾಗ ಆರು ತಿಂಗಳು ನಿದ್ರಿಸಿ ಒಂದು ದಿನ ಮಾತ್ರ ಜಾಗೃನಾಗಿರುವಂತೆ ವರವಿತ್ತನು. ಹಾಗೆ ಮಾಡದಿದ್ದರೆ ಭೂಮಂಡಲ ಸುತ್ತಿ ಜೀವರಾಶಿ ಕಬಳಿಸಲು ಇವನಿಗೆ ಒಂದು ದಿನ ಮಾತ್ರ ಸಾಕಾದೀತು ಎಂದೂ ನುಡಿದನು. ಇದಕ್ಕಾಗಿಯೇ ರಾವಣನು ತಮ್ಮನು ಏಳುವ ಕಾಲದಲ್ಲಿ ಸಾಕಷ್ಟು ಆಹಾರ ಕೊಟ್ಟು ಅವನೆಲ್ಲೂ ಹೋಗದಂತೆ ಎಚ್ಚರ ವಹಿಸಿದ್ದನು._

*ಉಚ್ಯಂತಾಂ ವಾನರಾಃ ಸರ್ವೇ ಯಂತ್ರಮೇತತ್ಸಮುಚ್ಛ್ರಿತಮ್ ಇತಿ ವಿಜ್ಞಾಯ ಹರಯೋ ಭವಿಷ್ಯಂತೀಹ ನಿರ್ಭಯಾಃ*

_ಇಷ್ಟು ಹೇಳಿ ವಿಭೀಷಣನು ಒಂದು ಉಪಾಯವನ್ನೂ ಹೇಳುತ್ತಾನೆ. ವಾನರರಿಗೆ ಧೈರ್ಯ ತುಂಬಬೇಕಾದರೆ ಲಂಕೆಯಲ್ಲಿ ಕಾಣುತ್ತಿರುವುದೊಂದು ಬೆದರುಬೊಂಬೆ, ಅದನ್ನು ಈಗ ಎತ್ತಿ ನಿಲ್ಲಿಸಿದ್ದಾರೆ ಎಂದು ಹೇಳಲು ಆಗ್ರಹಿಸಿದನು. ಹಾಗೆ ಮಾಡದಿದ್ದರೆ ಅವನ ಭೀಕರ ಆಕೃತಿ ನೋಡಿದ ಯಾವ ವಾನರರೂ ಯುದ್ಧದಲ್ಲಿ ಪಾಲ್ಗೊಳ್ಳಲಾರರೆಂಬ ಆತಂಕ ಅವನದಾಗಿತ್ತು. ರಾಮನು ಅದರಂತೆ ನೀಲನನ್ನು ಕರೆದು ಕಪಿಗಳನ್ನು ಸಮಾಧಾನಿಸಿ ಯುದ್ಧಕ್ಕೆ ಸನ್ನದ್ಧರಾಗುವಂತೆ ಆಜ್ಞಾಪಿಸಿದನು. ಬೆದರು ಬೊಂಬೆಯ ರಚನೆ ಬಹಳ ಪುರಾತನ ಕಾಲದ್ದೆಂದು ಇದರ ಮೂಲಕ ತಿಳಿಯುತ್ತದೆ. ಅದು ಜಾನಪದ ಮೂಲ. ವೇದ ಪುರಾಣ ಮೂಲವಲ್ಲ ಎನ್ನುವವರು ರಾಮಾಯಣದ ಈ ಭಾಗ ಒಮ್ಮೆ ಓದಿ. ಹೀಗೆ ಬೆರ್ಚಪ್ಪನನ್ನು ನಿಲ್ಲಿಸುವ ಕ್ರಮ ಆಗಲೂ ಜಾರಿಯಲ್ಲಿದ್ದಿರಬೇಕೆಂದು ಊಹಿಸಬಹುದು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩