ಮಹಾಭಾರತ ೫೬

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೬

*ನಹ್ಯಯುಕ್ತಂ ನ ಚಾಸತ್ಯಂ ನಾನೃತಂ ನ ಚ ವಿಪ್ರಿಯಮ್ ಭಾಷಿತಂ ಚಾರುಭಾಷಸ್ಯ ಜಜ್ಞೇ ಪಾರ್ಥಸ್ಯ ಧೀಮತಃ*

_ಧರ್ಮಜನ ಮಾತಿನ ವಿಶೇಷತೆಯನ್ನು ವರ್ಣಿಸುತ್ತಿದ್ದಾರೆ. ಧರ್ಮಜನು ಅಯುಕ್ತವಾದ ಮಾತನ್ನು, ಅಸತ್ಯ ಮಾತನ್ನು, ಅನೃತವಾದ ಮಾತನ್ನು, ಅಪ್ರಿಯವಾದ ಮಾತನ್ನು ಎಂದಿಗೂ ಆಡುತ್ತಿರಲಿಲ್ಲ. ಇದು ತುಂಬಾ ಕಷ್ಟವಾದುದು. ಯಾವ ಸಮಯದಲ್ಲಿ ಯಾವುದು ಮಾತಾಡುವುದು ಎಂಬ ಜ್ಞಾನವೇ ಯುಕ್ತತೆ. ನಾವು ದಿನವೂ ಮಾತನಾಡುವ ನೂರಾರು ವಾಕ್ಯಗಳಲ್ಲಿ ಕೆಲವಾದರೂ ಅಯಕ್ತವಾಗಿರುತ್ತವೆ. ಸುಮ್ಮನೆ ಮಾತನಾಡುವುದು ಅಥವಾ ಮನ ನೋಯುವಂತೆ ಅಥವಾ ತಿರಸ್ಕರಿಸುವಂತಹ ಮಾತುಗಳೂ ಅಯುಕ್ತವೇ ಆಗಿವೆ. ಎರಡನೆಯದು ಅಸತ್ಯ. ಇದಂತೂ ಸಾರಾಸಗಟಾಗಿ ನುಡಿಯುತ್ತೇವೆ. ನಮ್ಮನ್ನು ಹೊಗಳಿಕೊಳ್ಳುವ ಅಥವಾ ನಮ್ಮ ಬಗ್ಗೆ ಹೇಳಿಕೊಳ್ಳುವ ಮಾತುಗಳು ಹೆಚ್ಚಾನೆಚ್ಚು ಸುಳ್ಳೇ ಆಗಿರುತ್ತವೆ. ಉಳಿದಂತೆ ತಮಾಷೆಗೋ ಅಥವಾ ತಪ್ಪಿಸಿಕೊಳ್ಳಲೆಂದೋ ಆಡುವ ಮಾತುಗಳನೇಕ ಅಸತ್ಯವಾಗಿರುತ್ತವೆ. ಮೂರನೆಯದು ಅನೃತ. ಋತ ಎಂದರೆ ಮಾನಸಿಕ ಸತ್ಯ. ಮನಸ್ಸಿನಲ್ಲಿ ಇದ್ದುದನ್ನೇ ಅಥವಾ ಆಲೋಚಿಸಿದ್ದನ್ನೇ ನುಡಿಯುವುದು ಋತ. ಇದೂ ಬಹಳ ಬಾರಿ ನಮಗೆ ಸಾಧ್ಯವಾಗುವುದಿಲ್ಲ. ಸತ್ಯ ಎರಡು ಬಗೆ ಋತ ಹಾಗೂ ಸತ್ಯ ಎಂದು. ಒಂದು ಮಾನಸಿಕ, ಇನ್ನೊಂದು ವಾಚಿಕ. ಇದರ ನಡುವಿನ ಅಂತರ ತೆಳುಗೆರೆಯಷ್ಟು‌. ನಾಲ್ಕನೆಯದು ಅಪ್ರಿಯ‌. ಒಬ್ಬರಿಗೆ ನೇರವಾಗಿರಲಿ, ಹಿಂದಿನಿಂದ ಇರಲಿ ನಮ್ಮ ಮಾತು ಅನೇಕ ಬಾರಿ ಅಪ್ರಿಯವಾಗುತ್ತವೆ. ಎಷ್ಟು ಜಾಗರೂಕತೆಯಿಂದ ಆಡಿದರೂ ಸತ್ಯ ನುಡಿಯಲು ಹೋಗಿ ಅಥವಾ ನಮ್ಮ ಅಹಂಕಾರ ತೋರಿಸಲು ಹೋಗಿ ಅಪ್ರಿಯ ಭಾಷಣ ನಡೆಯುತ್ತದೆ. ಈ ನಾಲ್ಕು ಬಗೆಯ ದೋಷಗಳನ್ನು ದೂರವಿಟ್ಟರೆ ನಾವೂ ಒಳ್ಳೆಯ ಮಾತುಗಾರರಾಗುತ್ತೇವೆ. ಮಾತಿಗೆ ಧರ್ಮಜನೆಂದು ಹೇಳಬಹುದೇ ಹೊರತು ಅವನನ್ನು ಅನುಸರಿಸುವುದು ಕಷ್ಟ._

*ನಾಹಮನ್ನಂ ಬುಭುಕ್ಷೇ ವೈ ಪಾವಕಂ ಮಾಂ ನಿಬೋಧತಮ್ ಯದನ್ನಮನುರೂಪಂ ಮೇ ತದ್ಯುವಾಂ ಸಂಪ್ರಯಚ್ಛತಮ್*

_ಕೃಷ್ಣಾರ್ಜುನರು ಬೇಸಿಗೆಯ ಸಮಯದಲ್ಲಿ ಉಪವನವೊಂದರಲ್ಲಿ ವಿಹರಿಸುತ್ತಿದ್ದಾಗ ಕೃಷ್ಣ ವಸ್ತ್ರ ಧಾರಿ ಬ್ರಾಹ್ಮಣನೊಬ್ಬ ಅವರಿಗೆ ಎದುರಾಗುತ್ತಾನೆ. ಅವನು ಅವರ ಬಳಿ ತನ್ನ ಸಮಸ್ಯೆ ಹೇಳಿಕೊಳ್ಳುವನು. ನಾನೊಬ್ಬ ಬಹಳ ಭೋಜನ ಮಾಡುವ ಬ್ರಾಹ್ಮಣ. ನೀವು ನನಗೆ ಪೂರ್ಣ ತೃಪ್ತಿಯಾಗುವಂತೆ ಆಹಾರ ಕೊಡಿ ಎನ್ನುತ್ತಾನೆ. ಆಗ ಅವರೀರ್ವರೂ ಯಾವ ವಿಧದ ಆಹಾರದಿಂದ ನಿನಗೆ ತೃಪ್ತಿಯಾಗುವುದೆಂದಾಗ ಅವನು ನನಗೆ ಅನ್ನ ಆಗದು. ಅಗ್ನಿ ಎಂಬ ಹೆಸರಿನ ನನಗೆ ಅನುರೂಪವಾದ ಆಹಾರ ಕೊಡಿ ಎನ್ನುತ್ತಾನೆ. ದೇವತೆಗಳಿಗೆ ಯಜ್ಞದಲ್ಲಿ ನಾವು ತಿನ್ನುವ ವಸ್ತುಗಳನ್ನೇಕೆ ಅರ್ಪಿಸಬಾರದೆನ್ನುವುದಕ್ಕೆ ಇಲ್ಲಿ ಉತ್ತರವಿದೆ. ಅವರವರ ಆಹಾರ ಪದ್ಧತಿಗೆ ತಕ್ಕಂತೆ ಕೊಟ್ಟಾಗ ಮಾತ್ರ ತೃಪ್ತಿ ಆಗುತ್ತದೆ ಹೊರತು ನಮ್ಮ ಮನಕ್ಕೆ ಸರಿಯೆನಿಸಿದ್ದನ್ನು ಕೊಟ್ಟಾಗ ಅಲ್ಲ. ಇಂದ್ರನ ಅಧೀನದಲ್ಲಿ ಈ ವನವಿದೆ. ಅವನ ಸ್ನೇಹಿತನಾದ ತಕ್ಷಕನು ತನ್ನ ಪರಿವಾರದೊಡನೆ ಇಲ್ಲಿ ವಾಸಿಸುತ್ತಿದ್ದಾನೆ. ನನಗೆ ಇದನ್ನು ದಹಿಸುವ ಅಪೇಕ್ಷೆ ಇದ್ದರೂ ಇಂದ್ರನ ತೇಜಸ್ಸಿನಿಂದಾಗಿ ಅದು ಸಾಧ್ಯವಾಗಿಲ್ಲ. ನಾನು ಜ್ವಲಿತನಾದರೆ ಅವನು ಮಳೆ ಸುರಿಸಿಬಿಡುವನು. ನೀವು ಸಹಯಕರಾದರೆ ನಾನು ಇಚ್ಛೆಪಟ್ಟ ಆಹಾರ ತಿಂದು ತೃಪ್ತಿ ಹೊಂದುವೆ ಎಂದನು. ಇಲ್ಲಿ ಅಗ್ನಿ ಬ್ರಾಹ್ಮಣ ವೇಷದಲ್ಲಿ ಬರಲೂ ಇದೇ ಕಾರಣ. ಕ್ಷತ್ರಿಯನಾದರೆ ತಾನೇ ಸಂಪಾದಿಸಿ ಉಣ್ಣಬೇಕು. ಪ್ರತಿಗ್ರಹ ಅವನ ಕರ್ಮವಲ್ಲ. ಬ್ರಾಹ್ಮಣನಿಗಾದರೆ ಭಿಕ್ಷೆ ಅಥವಾ  ಇನ್ನೊಬ್ಬರು ಕೊಟ್ಟಿದ್ದನ್ನು ತೆಗೆದುಕೊಳ್ಳುವುದು ವಿಹಿತ. ಹಾಗಾಗಿ ಅಗ್ನಿಯ ವೇಷ ಈ ತರಹದ್ದು._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩