ಮಹಾಭಾರತ ೫೪

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೫೪

*ಆಗಮೇ ಚ ಪ್ರಯೋಗೇ ಚ ಚಕ್ರೇ ತುಲ್ಯಮಿವಾತ್ಮನಃ ತುತೋಷ ಪುತ್ರಂ ಸೌಭದ್ರಂ ಪ್ರೇಕ್ಷಮಾಣೋ ಧನಂಜಯಃ*

_ಅರ್ಜುನನಿಗೆ ಸುಭದ್ರೆಯಲ್ಲಿ ಅಭಿಮನ್ಯು ಜನಿಸಿದನು. ಕೃಷ್ಣನೇ ಮುಂದೆ ನಿಂತು ಜಾತಕರ್ಮಾದಿ ಸಂಸ್ಕಾರಗಳನ್ನೆಲ್ಲಾ ನೆರವೇರಿಸಿದನು. ಅನಂತರ ಅರ್ಜುನನು ಅವನಿಗೆ ಶಾಸ್ತ್ರವನ್ನೂ ಶಸ್ತ್ರವಿದ್ಯೆಯನ್ನೂ ಉತ್ತಮವಾಗಿ ಬೋಧಿಸಿದನು. ಎರಡರಲ್ಲೂ ತನಗೆ ಸರಿಸಮಾನನಾಗುವಂತೆ ಪಾಠ ಹೇಳಿ ಮಗನನ್ನು ತಯಾರು ಮಾಡಿದನು. ಇವನ‌ ಜನನದ ತರುವಾಯ ಉಪಪಾಂಡವರು ಜನಿಸುತ್ತಾರೆ._

*ಯುಧಿಷ್ಠಿರಾತ್ರ್ಪತಿವಿಂಧ್ಯಂ ಸುತಸೋಮಂ ವೃಕೋದರಾತ್ ಅರ್ಜುನಾಚ್ಛ್ರುತಕರ್ಮಾಣಂ ಶತಾನೀಕಂ ಚ ನಾಕುಲಿಮ್ ಸಹದೇವಾಚ್ಛ್ರುತಸೇನಮೇತಾನ್ಪಂಚ ಮಹಾರಥಾನ್*

_ಅನಂತರ ದ್ರೌಪದಿ ಐದು ಜನ ಉಪಪಾಂಡವರಿಗೆ ಜನ್ಮ ನೀಡುತ್ತಾಳೆ. ಯುಧಿಷ್ಠಿರನಿಂದ ಪ್ರತಿವಿಂಧ್ಯನೂ, ಭೀಮನಿಂದ ಸುತಸೋಮನೂ, ಅರ್ಜುನನಿಂದ ಶ್ರುತಕರ್ಮನೂ, ನಕುಲನಿಂದ ಶತಾನೀಕನೂ, ಸಹದೇವನಿಂದ ಶ್ರುತಸೇನರೂ ಜನಿಸುತ್ತಾರೆ. ಶತ್ರುಗಳ ಪ್ರಹಾರ ತಿಳಿಯುವದರಲ್ಲಿ ವಿಂಧ್ಯಪರ್ವತಕ್ಕೆ ಸಮಾನನಾಗಿರಲಿ ಎಂಬ ಕಾರಣದಿಂದ ಪ್ರತಿವಿಂಧ್ಯ ಎಂದು ಹೆಸರಿಟ್ಟರು. ಸಾವಿರ ಸೋಮಯಾಗಗಳನ್ನು ಆಚರಿಸಿದ ಮೇಲೆ ಹುಟ್ಟಿದ ಕಾರಣ ಸುತಸೋಮನೆಂದೂ, ಮಹಾಕಾರ್ಯ ನಡೆಸಿ ಬಂದ ಮೇಲೆ ಜನಿಸಿದ ಕಾರಣ ಶ್ರುತಕರ್ಮನೆಂದೂ, ರಾಜರ್ಷಿಯಾದ ಶತಾನೀಕನಂತೆ ಕೀರ್ತಿ ಪಡೆಯಲೆಂದು ಶತಾನೀಕನೆಂದೂ, ಅಗ್ನಿ ದೇವತಾಕವಾದ ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದ ಕಾರಣ ಶ್ರುತಸೇನ ಎಂದು ನಾಮಕರಣ ಮಾಡಿದರು. ಯಜ್ಞದ ಒಡೆಯನಿಂದ ಕೂಡಿರುವವನು ಎಂಬ ಅರ್ಥದಲ್ಲಿ ಆ ಹೆಸರು ಬಂದಿತು. ಇವರೆಲ್ಲರೂ ಒಂದೊಂದು ವರ್ಷ ಅಂತರವುಳ್ಳವರಾಗಿ ತಮ್ಮ ಅಪ್ಪಂದಿರಂತೆಯೇ ಹುಟ್ಟಿದರು‌._

*ಇಂದ್ರಪ್ರಸ್ಥೇ ವಸಂತಸ್ತೇ ಜಘ್ನುರನ್ಯಾನ್ನರಾಧಿಪಾನ್ ಶಾಸನಾದ್ಧೃತರಾಷ್ಟ್ರಸ್ಯ ರಾಜ್ಞಃ ಶಾಂತನವಸ್ಯ ಚ*

_ವ್ಯಾಸರ ಈ ಉಲ್ಲೇಖ ಗಮನಿಸಿದರೆ ಭೀಷ್ಮನು ಇನ್ನೂ ಅಧಿಕಾರ ನಡೆಸುತ್ತಿದ್ದುದು ಸ್ಪಷ್ಟವಾಗುತ್ತದೆ. ಪಾಂಡವರು ರಾಜನಾದ ಧೃತರಾಷ್ಟ್ರನ ಹಾಗೂ ಶಾಂತನುವಿನ ಆಜ್ಞೆಯಂತೆ ಇತರ ರಾಜರನ್ನು ನಿಗ್ರಹಿಸಿದರು. ಧೃತರಾಷ್ಟ್ರನಿಗೆ ಬೆಂಬಲವಾಗಿ ಭೀಷ್ಮನು ಇದ್ದುದು ಸ್ಪಷ್ಟವಾಗುತ್ತದೆ ಇಲ್ಲಿ. ಭೀಷ್ಮನು ಕೆಲವೊಮ್ಮೆ ಸಂಬಂಧ ಇಲ್ಲದಿರುವವರಂತೆ ಕೆಲವೊಮ್ಮೆ ಸಂಬಂಧ ಇರುವವರಂತೆ ಮಾಡುವ ವರ್ತನೆ ವಿಚಿತ್ರವಾಗಿದೆ._

*ಆಶ್ರಿತ್ಯ ಧರ್ಮರಾಜಾನಂ ಸರ್ವಲೋಕೇವಸತ್ಸುಖಮ್ ಪುಣ್ಯಲಕ್ಷಣಕರ್ಮಾಣಂ ಸ್ವದೇಹಮಿವ ದೇಹಿನಃ*

_ವ್ಯಾಸರ ಈ ಉಪಮೆ ಬಹಳ ಚೆನ್ನಾಗಿದೆ. ಶುಭಲಕ್ಷಣಗಳೊಂದ  ಕೂಡಿ ಪುಣ್ಯಕರ್ಮಗಳನ್ನು ಮಾಡುವ ತಮ್ಮ ದೇಹಗಳನ್ನಾಶ್ರಯಿಸಿದ ಜೀವಗಳಂತೆ ಧರ್ಮರಾಜನನ್ನು ಆಶ್ರಯಿಸಿ ಸಮಸ್ತ ಜನರೂ ಸುಖದಿಂದ ವಾಸಿಸುತ್ತಿದ್ದರು. ಉತ್ತಮ ಕರ್ಮಗಳನ್ನು ಮಾಡಿದರೆ ಅದಕ್ಕನುಗುಣವಾಗಿ ಉತ್ತಮ ಶರೀರವೂ ದೊರಕುತ್ತದೆ. ಬುದ್ಧಿಯೂ ನೇರವಾಗಿರುತ್ತದೆ‌. ಇಲ್ಲಿ ದೇಹದಂತೆ ಜನರು, ಜೀವನಂತೆ ಧರ್ಮರಾಜನಿದ್ದನು._

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩