ಧಾರ್ಮಿಕ ಆಚರಣೆಗಳು ೫

🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೫

*ಸ್ನಾನ*

*ನಾತುರೋ ನ ಭುಕ್ತ್ವಾ ನ ಜೀರ್ಣವಾಸಾ ನ ಬಹುವಾಸಾ ನ ನಗ್ನೀ ನ ನಾಶ್ನನ್ ನಾವಸಕ್ಥಿಕೋ ನಾಲಂಕೃತೋ ನಾಜಸ್ರಂ ನಾಜ್ಞಾತೇ ಜಲೇ ನಾಕುಲೇ ನಾಶುಚೌ ನ ಪ್ರಭೂತಜಲೇ ನ ನಾಭ್ರಲ್ಪಜಲೇ  ನ ಚತ್ವರೇ ನೋಪದ್ವಾರೇ ನ ಸಂಧ್ಯಾಯಾಂ ನ ನಿಶಾಯಾಂ ಸ್ನಾಯಾತ್*

_ಯಾವ ಯಾವ ಕಡೆ ಯಾವ ಬಗೆಯಲ್ಲಿ ಮಾತ್ರ ಸ್ನಾನ ವಿಹಿತ ಎಂಬುದನ್ನು ವಿವರಿಸುತ್ತಿದ್ದಾರೆ. ದೇಹವು ಸ್ವಸ್ಥವಾಗಿಲ್ಲದಾಗ ಅಥವಾ ಸೊಂಟದ ಭಾಗ ಗಟ್ಟಿ ಇಲ್ಲದಾಗ ಇಡೀ ದೇಹಕ್ಕೆ ಸ್ನಾನ ಒಳ್ಳೆಯದಲ್ಲ. ಊಟ ಮಾಡಿ ಕೂಡಲೇ ಸ್ನಾನ ತರವಲ್ಲ. ಅದು ಜೀರ್ಣಕ್ರಿಯೆಗೂ ಮಾರಕ. ಹರಿದ ಬಟ್ಟೆ ಉಟ್ಟು ಸ್ನಾನ ಸರಿಯಲ್ಲ. ಮಾನರಕ್ಷಣೆ ಮುಖ್ಯ ಹಾಗೂ ಸ್ನಾನವೂ ಒಂದು ಉತ್ತಮ ಕರ್ಮ ಎಂಬ ಚಿಂತನೆ, ಹಾಗಂತ ತುಂಬಾ ಬಟ್ಟೆ ಧರಿಸಿಯೂ ಸ್ನಾನ ಸರಿಯಲ್ಲ, ಏಕೆಂದರೆ ಸ್ನಾನಕ್ಕೆಂದು ಎರಡು ಬಟ್ಟೆ ಮಾತ್ರ ಹೇಳಿದ್ದಾರೆ.ಹಾಗೆಯೇ ನಗ್ನವಾಗಿಯೂ ಸ್ನಾನ ಮಾಡಬಾರದು. ಇದನ್ನು ವೇದವೂ ಹೇಳಿದೆ *ನ ವಿವಸನಸ್ನಾಯಾತ್* ಎಂದು. ವಿದೇಶಿ ಪ್ರಭಾವದ ಫಲ ಈಗ ನಗ್ನತೆ ಬಹಿರಂಗವಾಗುತ್ತಿದೆ. ಆದರೆ ನಮ್ಮಲ್ಲಿ ಅದಕ್ಕೆ ನಿಷೇಧ ಇದೆ‌. ಅಲಂಕರಿಸಿಕೊಂಡು ಸ್ನಾನ ಮಾಡಬಾರದು. ಅಲಂಕಾರ ಮಾಡಿಕೊಳ್ಳುವ ಉದ್ದೇಶಕ್ಕೆ ಧಕ್ಕೆ ತರುತ್ತದೆ. ಅಜ್ಞಾತ ಸ್ಥಳದಲ್ಲಿ ಸ್ನಾನ ಮಾಡಬಾರದು. ಏಕೆಂದರೆ ಪ್ರಾಣಿಗಳು ಅಥವಾ ಕೀಟಗಳು ನಮ್ಮನ್ನು ಬಲಿ ಪಡೆದಾವು. ತುಂಬಾ ಚಂಚಲವಾದ ನೀರಲ್ಲಿ ಅಥವಾ ನಿಂತಂತೆ ಕಾಣುವ ನೀರಲ್ಲಿ ( ಸುಳಿ ಇರುವೆಡೆ) ಮುಳುಗಬಾರದು. ಎರಡೂ ತಡೆಯುವುದು ಕಷ್ಟ. ಹೆಚ್ಚು ನೀರಿದ್ದಲ್ಲಿ ಸ್ನಾನ ತರವಲ್ಲ. ಹುಚ್ಚು ಸಾಹಸ ಮಾಡಲು ಹೋಗಿ ಪ್ರಾಣ ಹೋದೀತು.ಅದರಂತೆ ತುಂಬಾ ಕಡಿಮೆ ನೀರಿರುವಲ್ಲೂ ಒಳ್ಳೆಯದಲ್ಲ. ಇತ್ತೀಚೆಗೆ ಅನೇಕ ತೀರ್ಥಗಳಲ್ಲಿ ತುಂಬಾ ಕಡಿಮೆ ನೀರಿರುತ್ತದೆ. ಅಂತಹ ಕಡೆ ಸ್ನಾನಕ್ಕಿಂತ ಪ್ರೋಕ್ಷಣೆ ಒಳ್ಳೆಯದು. ಆಗ ನೀರಿನ ಮಲಿನತೆಯೂ ಆಗದು, ಪುಣ್ಯವೂ ದೊರಕೀತು. ಎಲ್ಲರೂ ಅದೇ ನೀರಲ್ಲಿ ಮುಳುಗಿದಾಗ ನೀರಿನ ಮಾಲಿನ್ಯ ಮಿತಿ ಮೀರುತ್ತದೆ. ಇನ್ನು ಚಪ್ಪರ ಅಥವಾ ಸಭಾಂಗಣ ಮೊದಲಾದೆಡೆ ಸ್ನಾನ ಸರಿಯಲ್ಲ. ಅಲ್ಲಿ ಪಕ್ಷಿಗಳು ಹಿಕ್ಕೆ ಹಾಕಬಹುದು ಅಥವಾ ತುಂಬಾ ಕೊಳಕೂ ಇರಬಹುದು ಅಲ್ಲದೆ ಸರಿಯಾದ ಗೋಪ್ಯತೆ ಇಲ್ಲದೆ ಸ್ನಾನವು ಸರ್ವದರ್ಶನವಾದೀತು. ಇನ್ನು ಬಾಗಿಲ ಬಳಿ ಸ್ನಾನ ಮಾಡಬಾರದು. ಅಂದರೆ ಬಾಗಿಲಿಗೆ ತಾಗಿಕೊಂಡ ನಲ್ಲಿಯ ಬಳಿ ಅಥವಾ ನೀರುಕೊಳವೆ ಬಳಿ ಸರಿಯಲ್ಲ. ಬಾಗಿಲು ತೆಗೆದಾಗ ಅವಿತುಕೊಳ್ಳುವ ಅಥವಾ ಬೇಗ ಮುಗಿಸುವ ಅವಶ್ಯಕತೆ ಬಂದೀತು. ಸಂಧ್ಯಾ ಸಮಯದಲ್ಲಿ ನದಿ ಅಥವಾ ಸಮುದ್ರದಲ್ಲಿ ಸ್ನಾನ ಒಳ್ಳೆಯದಲ್ಲ. ಆ ಸಮಯದಲ್ಲಿ ವಾತಾವರಣದ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುವ ಕಾರಣ ನಮ್ಮ ಮೇಲೂ ಅದು ಪ್ರಭಾವ ಬೀರಬಹುದು. ಹಾಗಾಗಿಯೇ ಸಂಧ್ಯಾ ಸಮಯದಲ್ಲಿ ದೇವ ಧ್ಯಾನ ಪೂಜೆ ಭಜನೆ ಮೊದಲಾದವುಗಳ ಆಚರಣೆ. ಮಧ್ಯರಾತ್ರಿ ಅಥವಾ ಕಾಣದಿರುವ ರಾತ್ರಿಯಲ್ಲಿ ಸ್ನಾನ ಸರಿಯಲ್ಲ. ವಾತಾವರಣ ತಂಪಿದ್ದಾಗ ಅಥವಾ ಅಲೆಗಳು ರಭಸವಾಗಿದ್ದಾಗ ಅಥವಾ ಜನರು ಸುತ್ತಲಿಲ್ಲದಿದ್ದಾಗ ಮಾಡುವ ಸ್ನಾನ ಅಪಾಯಕ್ಕೆ ಆಹ್ವಾನ. ಈ ನಿಯಮಗಳು ಹೊರಗಿನ ಕೆರೆ-ಕೊಳ-ನದಿ-ಸಮುದ್ರಗಳಿಗೆ ಹೆಚ್ಚು ಅನ್ವಯಿಸುತ್ತವೆ. ಮನೆಯಲ್ಲಿ ಬಾಗಿಲು ಹಾಕಿಕೊಂಡು ಮಾಡುವ ಸ್ನಾನಕ್ಕೆ  ಸರಿಯಾದ ಸಮಯ ಹಾಗೂ ನೀರು ಬರುವ ಸಮಯ ಇದೇ ಮುಖ್ಯ._

_ನೀರಲ್ಲಿದ್ದಾಗ ಅಲ್ಲೇ ಬಟ್ಟೆಯನ್ನು ಹಿಂಡಬಾರದು. ಹಾಗೆಯೇ ಉಟ್ಟ ಬಟ್ಟೆಯಿಂದ ಒರೆಸಿಕೊಳ್ಳುವುದೂ ಸರಿಯಲ್ಲ. ಇನ್ನು ಒಂದೇ ಬಟ್ಟೆ ಉಟ್ಟು ಮಾಡುವ ಸ್ನಾನ ತರ್ಪಣಗಳು ಪಿತೃಕಾರ್ಯ ಮಾಡುವ ಸಮಯದಲ್ಲಿ ಮಾತ್ರ‌. ಉಳಿದೆಲ್ಲಾ ಸಮಯದಲ್ಲಿ ಎರಡು ಬಟ್ಟೆ ಶಾಸ್ತ್ರ ವಿಹಿತ._


ಇದರ ವಿಷಯದಲ್ಲಿ ಇನ್ನೊಂದಷ್ಟು ವಿಷಯ ಮುಂದೆ ನೋಡೋಣ.......

http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩