ಧಾರ್ಮಿಕ ಆಚರಣೆಗಳು ೪
🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೪
*ಸ್ನಾನ*
_ಸ್ನಾನದ ಬಗ್ಗೆ ತುಂಬಾ ಮಾಹಿತಿ ನಾನಾ ಪುರಾಣಗಳಲ್ಲಿದೆ. ಸ್ನಾನದ ಪ್ರಯೋಜನಗಳು ಮುಖ್ಯವಾಗಿ ಎರಡು- *ದೃಷ್ಟಂ ಮಲಾಪಕರ್ಷಾದಿ ಅದೃಷ್ಟಂ ಪ್ರತ್ಯವಾಯ ಪರಿಹಾರಾದಿ* ಕಣ್ಣಿಗೆ ಕಾಣುವುದು ಸರಿಯಾಗಿ ಮೈ ಕೈ ಉಜ್ಜಿ ಸ್ನಾನ ಮಾಡಿದಾಗ ನಮ್ಮ ದೇಹದ ಮಲ ಅಥವಾ ಕೊಳೆ ಹೊರಟುಹೋಗುತ್ತದೆ. ಕೆಲವರು ಕಾಕಸ್ನಾನ ಮಾಡುತ್ತಾರೆ. ಕಾಗೆಯಂತೆ ಸುಮ್ಮನೆ ಮುಳುಗಿ ಬರುವುದು ಅಥವಾ ನಾಲ್ಕು ಚೊಂಬು ನೀರು ಹುಯ್ದುಕೊಂಡು ಓಡಿಬರುವುದು. ಅಲ್ಲಿ ಈ ಪ್ರಯೋಜನ ಇಲ್ಲ. ಎರಡನೆಯದು ನೀರಿನ ಅಭಿಮಾನಿ ದೇವತೆಯನ್ನು ಸ್ಮರಿಸಿ ಅಥವಾ ಜಲದ ಉಪಕಾರವನ್ನು ಸ್ಮರಿಸುತ್ತಾ ಅಗತ್ಯವಿದ್ದಷ್ಟು ನೀರು ಬಳಸಿ ಸ್ನಾನ ಮಾಡಿದಾಗ ನಮ್ಮ ಪಾಪಗಳು ಪರಿಹಾರವಾಗುತ್ತವೆ. ನಮ್ಮ ಪ್ರತಿಯೊಂದು ಕೃತಿಯಲ್ಲಿ ಭಗವಂತನ ಸ್ಮರಣೆ ಹಾಗೂ ಕೃತಜ್ಞತೆ ಇದ್ದಾಗ ಪಾಪಕ್ಕೆ ಅವಕಾಶ ಸಾಧ್ಯವೇ ಇಲ್ಲ._
_ *ಅತ್ಯಂತ ಮಲಿನಃ ಕಾಯೋ ನವಚ್ಛಿದ್ರ ಸಮನ್ವಿತಃ ಸ್ರವತ್ಯೇವ ದಿವಾರಾತ್ರೋ ಪ್ರಾತಸ್ನಾನಂ ವಿಶೋಧನಮ್* _ವಾಮನ ಪುರಾಣದ ಮಾತಿದು. ನಾವು ಎಷ್ಟೇ ಜಾಗೃತೆ ವಹಿಸಿದರೂ ಒಂಭತ್ತು ರಂಧ್ರಗಳಿಂದ ಕೂಡಿದ ನಮ್ಮ ಕಾಯವು ದಿನವೂ ತನಗೆ ಬೇಡದ ರಸಗಳನ್ನು ಹೊರಗೆ ಹಾಕುತ್ತಲೇ ಇರುತ್ತದೆ. ಹಾಗಾಗಿ ಮಲಿನವಾದ ಕಾಯದ ಶುದ್ಧಿಗಾಗಿ ಪ್ರಾತಃಕಾಲದ ಸ್ನಾನ ಅತ್ಯಂತ ಅವಶ್ಯ ಮಾಡಬೇಕು. ಕೆಲವರಿಗೆ ಮಧ್ಯಾಹ್ನ ಕೆಲವರಿಗೆ ಸಂಜೆ ಸ್ನಾನ ಮಾಡುವ ಅಭ್ಯಾಸ ಇರುತ್ತದೆ. ಅಂತಹ ಪದ್ಧತಿಗಿಂತ ಬೆಳಗ್ಗೆಯೂ ಅನಂತರ ನಮಗೆ ಇಷ್ಟವಿದ್ದ ಸಮಯದಲ್ಲೂ ಮಾಡುವುದು ಉಚಿತ._
*ಸ್ನಾತುಸ್ತು ವರುಣಸ್ತೇಜೋ ಜುಹ್ವತೋಗ್ನಿಃ ಶ್ರಿಯಂ ಹರೇತ್ ಭುಂಜಾನಸ್ಯ ಯಮಸ್ತ್ವಾಯುಸ್ತಸ್ಮಾನ್ನ ವ್ಯಾಹರೇತ್ ತ್ರಿಷು* _ಮೂರು ಸಂದರ್ಭಗಳಲ್ಲಿ ಮಾತನಾಡಬಾರದು. ಸ್ನಾನ ಮಾಡುವಾಗ ಮಾತನಾಡಿದರೆ ವರುಣನು ನಮ್ಮ ದೇಹದ ಕಾಂತಿಯನ್ನು ನಾಶಮಾಡುವನು, ಯಜ್ಞ ಮಾಡುವಾಗ ಮಾತನಾಡಿದರೆ ಅಗ್ನಿಯು ನಮ್ಮ ಸಂಪತ್ತನ್ನು ಸೂರೆಗೊಳ್ಳುವನು, ಊಟ ಮಾಡುವಾಗ ಮಾತನಾಡಿದರೆ ಯಮನು ಆಯುಸ್ಸನ್ನು ಅಪಹರಿಸುತ್ತಾನೆ. ಹೀಗಾಗಿ ಮೂರನ್ನು ಯಜ್ಞವೆಂದು ಭಾವಿಸಿ ಸಮಾಧಾನಚಿತ್ತದಿಂದ ನಡೆಸಬೇಕು. ಮರಾಠಿಯಲ್ಲಿ ಒಂದು ಮಾತಿದೆ- *ಉದರಭರಣ ನೋಹೇ ಜಾಣಿಜೇ ಯಜ್ಞ ಕರ್ಮ* ಊಟದ ಬಗೆಗಿನ ಮಾತು. ಸ್ನಾನವೂ ಒಂದು ಬಗೆಯ ಯಜ್ಞವೇ ಸರಿ._
_ನಾವು ಅಶುಚಿಯಾಗಿದ್ದಾಗ ಅಂದರೆ ಮಲ ಮೂತ್ರಾದಿಗಳನ್ನು ವಿಸರ್ಜಿಸಿ ಬಂದಾಗ ಅಥವಾ ಇನ್ನಾವುದೋ ಬಗೆಯ ಅಶುಚಿತ್ವ ಆವರಿಸಿದಾಗ ಮೌನವಾಗಿ ಮುಳುಗುಹಾಕಬೇಕು. *ತೂಷ್ಣೀಮೇವಾವಗಾಹೇತ್ ಯದಾಚೇದಶುಚಿರ್ನರಃ ಆಚಮ್ಯ ತು ತತ್ ಪಶ್ಚಾತ್ ಸ್ನಾನಂ ವಿಧಿವದಾಚರೇತ್* ಮೊದಲು ಕ್ಷೇತ್ರದಲ್ಲೋ ತೀರ್ಥದಲ್ಲೋ ಸುಮ್ಮನೆ ಮುಳುಗಿ ಅನಂತರ ಆಚಮನ ಮಾಡಿ ಆಮೇಲೆ ಸಂಕಲ್ಪ ಮಾಡಿ ಅಂದರೆ ಅಲ್ಲಿಯ ಮಹತ್ವವನ್ನು ನೆನೆಸಿಕೊಂಡು ಆ ತೀರ್ಥವು ಅಥವಾ ನದಿಯು ನನ್ನನ್ನು ಪಾವನಗೊಳಿಸಲಿ ಎಂದು ಸ್ನಾನ ಮಾಡಬೇಕು._
_ಸ್ತ್ರೀಯರಿಗೆ ಅಭಿಮುಖವಾಗಿ ಎಂದೂ ಸ್ನಾನ ಪುರುಷರು ಮಾಡಬಾರದು. ಹಾಗೆಯೇ ಸ್ತ್ರೀಯರೂ ಪುರುಷರಿರುವ ಸ್ಥಳ ಬಿಟ್ಟು ಸ್ವಲ್ಪ ದೂರದಲ್ಲಿ ಸ್ನಾನ ಮಾಡಬೇಕು. ತೀರ್ಥವಿರಲಿ ಕ್ಷೇತ್ರವಿರಲಿ ಸಾಮಾಜಿಕ ಸ್ವಾಸ್ಥ್ಯ ಕದಡದಿರುವುದು ಸ್ಮೃತಿಗಳ ಚಿಂತನೆ. *ಸ್ಥಾವರೇಷು ಗೃಹೇ ಚೈವ ಸೂರ್ಯಸಮ್ಮುಖ ಆಪ್ಲವೇತ್* ನದಿ ಮೊದಲಾದ ಕಡೆಗಳಲ್ಲಿ ಸೂರ್ಯನ ಕಡೆಗೆ ತಿರುಗಿ, ಮನೆಯಲ್ಲಾದರೆ ಸೂರ್ಯನು ಉದಯಿಸುವ ದಿಕ್ಕಿನೆಡೆಗೆ ತಿರುಗಿ ಸ್ನಾನ ಮಾಡುವುದು ಶ್ರೇಯಸ್ಕರ. ಸ್ನಾನದ ಕೋಣೆ ಯಾವ ದಿಕ್ಕಿಗಿದ್ದರೂ ನಮ್ಮ ದೇಹವನ್ನು ತಿರುಗಿಸಿ ಪೂರ್ವದ ಕಡೆಗೆ ಮಾಡಿಕೊಳ್ಳಲು ಸಾಧ್ಯವಿದೆ._
ಇದರ ವಿಷಯದಲ್ಲಿ ಇನ್ನೊಂದಷ್ಟು ವಿಷಯ ಮುಂದೆ ನೋಡೋಣ.......
http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ