ಧಾರ್ಮಿಕ ಆಚರಣೆ ಭಾಗ೭
🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೭
*ಸ್ನಾನ*
*ಅಶಿರಸ್ಕಂ ಭವೇತ್ ಸ್ನಾನಂ ಸ್ನಾನಾಶಕ್ತೌ ತು ಕರ್ಮಿಣಾಮ್ ಆರ್ದ್ರೇಣ ವಾಸಸಾ ವಾಪಿ ದೈಹಿಕಂ ಮಾರ್ಜನಂ ಸ್ಮೃತಮ್ ಶಿರಃ ಸ್ನಾನಸ್ತು ಕುರ್ವೀತ ದೈವಂ ಪೈತ್ರ್ಯಮಥಾಪಿ ವಾ*
_ಅನಾರೋಗ್ಯ ಕಾಡುತ್ತಿದ್ದಾಗ ಅಥವಾ ವಿಪರೀತ ಚಳಿ ಬಾಧಿಸುತ್ತಿದ್ದಾಗ ಅಥವಾ ದೇಹ ಸ್ಪಂದಿಸದಿದ್ದಾಗ ತಲೆಗೆ ಸ್ನಾನ ಮಾಡಬೇಕೆಂದಿಲ್ಲ. ಅಂತಹ ಸಮಯದಲ್ಲಿ ರುಂಡ ಅಂದರೆ ದೇಹದ ಕೆಳಗಿನ ಭಾಗವನ್ನು ಹಾಗೂ ಮುಖವನ್ನು ತೊಳೆದು ಸ್ನಾನ ಮಾಡಬಹುದು ಅಥವಾ ಒದ್ದೆ ಬಟ್ಟೆಯಿಂದ ಮೈಯನ್ನು ಒರೆಸಿಕೊಂಡರೆ ಅದೂ ಆಪತ್ಕಾಲೀನ ಸ್ನಾನತುಲ್ಯವೇ ಆಗುತ್ತದೆ. ಆದರೆ ದೇವ ಅಥವಾ ಪಿತೃ ಸಂಬಂಧಿ ಕಾರ್ಯಗಳನ್ನು ನಡೆಸುವಾಗ ಅಥವಾ ತಾನೇ ಸ್ವತಃ ಮಾಡುವಾಗ ತಲೆ ಸಹಿತ ಇಡಿಯ ದೇಹದ ಸ್ನಾನ ವಿಹಿತವಾಗಿದೆ. ವ್ರತ, ಉಪವಾಸ, ಶ್ರಾದ್ಧ, ಯಾಗ ಮೊದಲಾದ ಸಂದರ್ಭದಲ್ಲಿ ಸಂಪೂರ್ಣ ಸ್ನಾನವೇ ವಿಹಿತವಾದುದು._
*ನಿತ್ಯಂ ನೈಮಿತ್ತಿಕಂ ಕಾಮ್ಯಂ ತ್ರಿವಿಧಂ ಸ್ನಾನಮುಚ್ಯತೇ*
_ಮೂರು ವಿಧದ ಸ್ನಾನ ಹೇಳಲ್ಪಟ್ಟಿದೆ. ನಿತ್ಯಮಾಡುವ ಸ್ನಾನ ನಿತ್ಯ ಸ್ನಾನ. ಶವದರ್ಶನ ಸ್ಪರ್ಶನ ಅಥವಾ ಮಲ ಮೊದಲಾದ ಅಶುಚಿ ಸ್ಪರ್ಶವಾದಾಗ, ಗ್ರಹಣ ಮೊದಲಾದ ಸಂದರ್ಭದಲ್ಲಿ ಮಾಡುವ ಸ್ನಾನ ಒಂದು ನಿಮಿತ್ತದಿಂದಾಗಿ ಮಾಡಿದ್ದು. ಹಾಗಾಗಿ ನೈಮಿತ್ತಿಕ ಸ್ನಾನ ಅದು. ತೀರ್ಥಗಳಲ್ಲಿ, ನದಿಗಳಲ್ಲಿ, ಸಮುದ್ರದಲ್ಲಿ ಪಾಪ ಪರಿಹಾರಕ್ಕಾಗಿಯೋ ಅಥವಾ ಹರಕೆ ತೀರಿಸಲೆಂದೋ ಮಾಡುವ ಸ್ನಾನ ಕಾಮ್ಯ. ಇಲ್ಲಿ ಬಯಕೆ ಈಡೇರುವುದೇ ಮುಖ್ಯವಾಗಿರುತ್ತದೆ. ದೇಹದ ಕೂದಲುಗಳನ್ನು ಕತ್ತರಿಸಿದಾಗ, ಕಣ್ಣೀರುಗರೆದಾಗ, ಸ್ತ್ರೀ-ಪುರುಷ ಸಂಗದ ಅನಂತರ, ತಿಂದದ್ದು ವಾಂತಿ ಮಾಡಿದಾಗಲೆಲ್ಲ ಸ್ನಾನ ಅವಶ್ಯ ಮಾಡಲೇಬೇಕು. ಇದು ವೈಜ್ಞಾನಿಕವಾಗಿ ಸ್ವಚ್ಛತೆಯ ದೃಷ್ಟಿಯಿಂದಲೂ ಉಚಿತವಾದುದು._
*ದರ್ಭೋದಕಸ್ನಾನಂ ಸರ್ವಪಾಪಪ್ರಣಾಶನಮ್ ಗೋಮೂತ್ರೇಣ ಸ್ನಾನಂ ಸರ್ವೌಘ ವಿನಿಸೂದನಮ್ ಪುಷ್ಪೋದಕಸ್ನಾನಂ ಆರೋಗ್ಯ ಕಾರಕಮ್*
_ಆಯುರ್ವೇದದಲ್ಲಿ ಬಗೆಬಗೆಯ ಸ್ನಾನಗಳು ಹೇಳಲ್ಪಟ್ಟಿವೆ. ಇಲ್ಲಿ ಕೆಲವನ್ನು ಮಾತ್ರ ಉಲ್ಲೇಖಿಸಿದ್ದಾರೆ. ಗೋಮೂತ್ರವನ್ನು ಸ್ನಾನ ಮಾಡುವ ನೀರಿಗೆ ಒಂದಷ್ಟು ಹಾಕಿಕೊಂಡು ಮಾಡಿದರೆ ನಮ್ಮ ಪಾಪಗಳನ್ನು ನಾಶ ಮಾಡುತ್ತದೆ. ಇದರಂತೆ ದರ್ಭೆ ಮುಳುಗಿಸಿದ ನೀರ ಸ್ನಾನವೂ ಪಾಪಹರ._
*ಸ್ನಾನಂ ದಾನಂ ತಪಃ ಶ್ರಾದ್ಧಂ ಅನಂತಂ ರಾಹುದರ್ಶನೇ*
_ಗ್ರಹಣ ಕಾಲದಲ್ಲಿ ಮಾಡುವ ಸ್ನಾನ, ಯಥಾಶಕ್ತಿ ದಾನ, ಜಪ-ಪೂಜೆ-ಪಾರಾಯಣ ಮೊದಲಾದ ತಪಸ್ಸು, ಪಿತೃಗಳಿಗೆ ಮಾಡುವ ಶ್ರಾದ್ಧ ಮೊದಲಾದವು ಅನಂತ ಫಲವನ್ನು ಕೊಡುತ್ತವೆ. ಎಂದಿಗಿಂತ ಮಿಗಿಲಾದ ಫಲದಾಯಕ._
*ಅಮಾಸ್ನಾನಂ ಗಯಾಶ್ರಾದ್ಧಂ ದಕ್ಷಿಣಾಮುಖಭೋಜನಮ್ ನ ಜೀವತ್ಪಿತೃಕೋ ಕುರ್ಯಾತ್*
_ಅಮಾವಾಸ್ಯೆಯ ಸ್ನಾನ, ( ನಿತ್ಯ ಸ್ನಾನವಲ್ಲ) ಗಯಾಕ್ಷೇತ್ರದ ಶ್ರಾದ್ಧ ಹಾಗೂ ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡುವುದು ತಂದೆ ತಾಯಿ ಇದ್ದವರು ಎಂದಿಗೂ ಮಾಡಬಾರದು. ಅಂತಹ ಕರ್ಮಗಳು ಪಿತೃಗಳ ಸದ್ಗತಿಯನ್ನು ಉದ್ದೇಶಿಸಿ ಮಾಡುವಂತಹವು. ಬದುಕಿದ್ದಾಗಲೇ ಮಾಡಿದರೆ ಅವರನ್ನು ಕಳುಹಿಸುವ ಯೋಚನೆ ಮಾಡಿದಂತೆ ಆಗುವುದು._
*ಸ್ನಾನಂ ರಜಕತೀರ್ಥೇಷು ಭೋಜನಂ ಗಣಿಕಾಲಯೇ ಶಯನಂ ಪೂರ್ವಪಾದೇಚ ಬ್ರಹ್ಮಹತ್ಯಾ ದಿನೇದಿನೇ*
_ಪೂರ್ವಕ್ಕೆ ಕಾಲು ಹಾಕಿ ಮಲಗುವುದು, ಅಗಸರು ಬಳಸುವ ನೀರಿನಲ್ಲಿ ಮುಳುಗುವುದು, ವೇಶ್ಯೆಯರ ಮನೆಯಲ್ಲಿ ಊಟ ಮಾಡುವುದು ಇವೆಲ್ಲವೂ ಬ್ರಹ್ಮಹತ್ಯೆ ಮಾಡುವ ಪಾಪವನ್ನು ತಂದುಕೊಡುತ್ತವೆ. ಬಟ್ಟೆ ಒಗೆದ ನೀರಿನಲ್ಲಿ ಸಾಕಷ್ಟು ಕೊಳೆ ಇರುತ್ತದೆ. ಹಾಗಾಗಿ ಅಲ್ಲಿ ಸ್ನಾನ ತರವಲ್ಲ. ವೇಶ್ಯೆಯ ಮನೆಯಲ್ಲಿ ಯಾರುಯಾರೋ ಹೇಗೆಹೇಗೋ ಬಂದು ಹೋಗುತ್ತಾರೆ. ಹಾಗಾಗಿ ಅಲ್ಲಿಯ ಅನ್ನ ಸಾತ್ವಿಕವಾಗಿ ಇರಲಾರದು. ಪಶ್ಚಿಮಕ್ಕೆ ತಲೆಹಾಕಿ ಮಲಗುವುದು ಪ್ರಕೃತಿ ಸಹಜವಾದ ಧನಾತ್ಮಕತೆಯನ್ನು ಓಡಿಸಿದಂತೆ ಆಗುತ್ತದೆ. ಹಾಗಾಗಿ ಅದೂ ಸರಿಯಲ್ಲ.ಸ್ನಾನದ ಬಗ್ಗೆ ಕೆಲವಷ್ಟನ್ನು ನೋಡಿದೆವು. ಮುಂದೆ ಇನ್ನೊಂದು ಆಚರಣೆ ನೋಡೋಣ..._
http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ