ರಾಮಾಯಣ ೧೪೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೭ 🏝📖    

*ಪಾಠ್ಯೇ ಗೇಯೇ ಚ ಮಧುರಂ ಪ್ರಮಾಣೈಸ್ರ್ತಿಭಿರನ್ವಿತಮ್ | ಜಾತಿಭಿಃ ಸಪ್ತಭಿರ್ಬದ್ಧಂ ತಂತ್ರೀಲಯಸಮನ್ವಿತಮ್ ||*

_ರಾಮಾಯಣ ಕಾವ್ಯದ ಮಹತ್ವ ಸಾರುವ ಶ್ಲೋಕ. ಇದರಲ್ಲಿ ಓದುಗನಿಗೆ  ಮಧುರಾನುಭೂತಿ ತರುವ ವಿಷಯಗಳು ಇವೆ. ಗಾಯನ ಮಾಡಲಂತೂ ಅಕ್ಷರವಿನ್ಯಾಸ ಸೊಗಸಾಗಿದೆ. ಸಂದರ್ಭಕ್ಕನುಗುಣವಾಗಿ ರಾಗಗಳನ್ನು ಜೋಡಿಸಿ ಮಧುರವಾಗಿ ಹಾಡಲು ಅನುಕೂಲವಾಗುವ ಗಾಯನಮಾಧುರ್ಯ ಇದೆ. ಶ್ಲೋಕಗಳು ಮೂರು ಬಗೆಯ ಪ್ರಮಾಣಗಳಿಂದ ಅಥವಾ ಲಕ್ಷಣಗಳಿಂದ ಕೂಡಿವೆ. ಗಾನ- ಧ್ವನಿ- ಪರಿಚ್ಛೇದ. ಗಾಯನ ಯೋಗ್ಯತೆ, ಪದಗಳಿಂದ ಹೊರಹೊಮ್ಮುವ ಧ್ವನಿ ( ಆಂತರಿಕ ಅರ್ಥ) , ಶಬ್ದ ಪರಿಚ್ಛೇದ ಸುಲಭವಾಗಲು ಸಂಧಿ ಸಮಾಸಗಳ ಬಳಕೆ. ಇನ್ನೊಂದು ಬಗೆಯಲ್ಲಿ ನೋಡುವುದಾದರೆ ತ್ರ್ಯಶ್ರ್ಯ- ಚತುರಶ್ರ- ಮಿಶ್ರ. ಹಾಡುವಾಗ ಯಾವ ಯಾವ ಭಾಗಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿ ರಾಗದ ಅಭಿವ್ಯಕ್ತಿಗೆ ಒದಗಿಬರುವ ಸೌಕರ್ಯ. ( ಈ ವಿಷಯದಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಕ್ಷಮಿಸಿ) . ಅಂತೆಯೇ ದ್ರುತ- ಮಧ್ಯಮ- ವಿಲಂಬಿತ ಎಂಬ ಗಾಯನದ ಮೂರು ಪ್ರಕಾರಗಳಿಗೆ ಅನುಸಾರವಾದ ಶ್ಲೋಕ ರಚನೆ ಇಲ್ಲಿದೆ.
“द्रुतामध्यमने वृत्तिं प्रयोगार्थे तु मध्यमाम् । शिष्याणामुपरोधार्थे विलम्बितां समाचरेत्||
ವೇದಾಧ್ಯಯನ ಮಾಡುವ ಸಮಯದಲ್ಲಿ ಪಾಠದ ಕ್ರಮವನ್ನು ಹೇಳುವಾಗ ಈ ಮೂರು ಲಯದ ಕ್ರಮವನ್ನು ಹೇಳುತ್ತಾರೆ. ಅಂತೆಯೇ ನಿಷಾದ- ಋಷಭ- ಗಾಂಧಾರ- ಷಡ್ಜ- ಮಧ್ಯಮ- ದೈವತ- ಪಂಚನ ಎಂಬ ಏಳು ಸ್ವರಗಳಿಂದ ಈ ಕಾವ್ಯ ಕೂಡಿದೆ. ಏಳು ಸ್ವರಗಳನ್ನು ಸಂದರ್ಭಾನುಸಾರ ಬಳಸಿ ಹಾಡಲು ಯೋಗ್ಯವಾಗಿದೆ ಎಂದು ಅರ್ಥ. ವೀಣಾದಿ ವಾದ್ಯಗಳೊಡನೆ, ತಾಳ ಮೃದಂಗ ಮೊದಲಾದ ಉಪವಾದ್ಯಗಳ ಸಹಕಾರದಲ್ಲಿ ಹಾಡಲು ಸೊಗಸಾಗಿದೆ. ಶೃಂಗಾರಾದಿ ರಸಗಳು ಇಲ್ಲಿ ಯಥೇಚ್ಛವಾಗಿ ಬಳಕೆಯಾಗಿವೆ. ಇಂತಹ ಅಮೋಘಕಾವ್ಯವನ್ನು ಲವಕುಶರು ಹಾಡಲಾರಂಭಿಸಿದರು. ಕಥನ ಕ್ರಮದ ವಿಭಿನ್ನ ಪ್ರಯೋಗಕ್ಕೆ ಈ ರಾಮಾಯಣ ಉತ್ತಮ ಸಾಕ್ಷಿ. ಕಥೆಯ ಆರಂಭದಲ್ಲೇ ಅಂತ್ಯದ ಪಾತ್ರಧಾರಿಗಳು ಕಥೆಯ ಗಾಯನ ಮಾಡುತ್ತಿದ್ದಾರೆ. ಪಾಶ್ಚಾತ್ಯರಲ್ಲಿ ಇಂತಹ ಕಥನ ಕ್ರಮ ಇತ್ತೀಚೆಗೆ ಕಂಡುಬರುತ್ತಿದೆ._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩