ರಾಮಾಯಣ ೧೫೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೨🏝📖
*ನಾಲ್ಪಸನ್ನಿಚಯಃ ಕಶ್ಚಿದಾಸೀತ್ತಸ್ಮಿನ್ಪುರೋತ್ತಮೇ | ಕುಟುಂಬೀ ಯೋ ಹ್ಯಸಿದ್ಧಾರ್ಥೋ ಗವಾಶ್ವಧನಧಾನ್ಯವಾನ್ || ಕಾಮೀ ವಾ ನ ಕದರ್ಯೋ ವಾ ನೃಶಂಸಃ ಪುರುಷಃ ಕ್ವಚಿತ್ | ದ್ರಷ್ಟುಂ ಶಕ್ಯಮಯೋಧ್ಯಾಯಾಂ ನಾವಿದ್ವಾನ್ನ ಚ ನಾಸ್ತಿಕಃ ||*
_ಅಯೋಧ್ಯೆಯಲ್ಲಿ ಎಂತಹ ಜನರಿದ್ದರೆಂಬ ವರ್ಣನೆ ಇಲ್ಲಿದೆ. ಆ ನಗರದಲ್ಲಿ ಅಲ್ಪಧನದಿಂದ ಕಷ್ಟಪಟ್ಟು ಜೀವನ ಸಾಗಿಸುವ ಒಬ್ಬರೂ ಇರಲಿಲ್ಲ. ಸಾಕಷ್ಟು ಧನಸಂಪತ್ತು ಜನರ ಬಳಿಯಲ್ಲಿತ್ತು. ಧನವೇ ಮುಖ್ಯವಾಗಿ ತೃಪ್ತಿ ಹೇತು. ಅದೇ ಸಾಕಷ್ಟಿದ್ದರೆ ಜನರು ಸದಾ ಸುಖಿಗಳು. ಬಹುಶಃ ಬಡಬ್ರಾಹ್ಮಣರು ಅಥವಾ ದೀನರು ಎಂಬ ಪದ ಅಯೋಧ್ಯೆಯಲ್ಲಿ ಮಾಯವಾಗಿತ್ತು. ಧರ್ಮ-ಅರ್ಥ-ಕಾಮಗಳನ್ನು ಸಾಧಿಸದ, ಗೋ-ಅಶ್ವ-ಧನ-ಧಾನ್ಯ ಮೊದಲಾದ ಸಂಪತ್ತಿಲ್ಲದ ಕುಟುಂಬಿ ಒಬ್ಬರೂ ಇರಲಿಲ್ಲ. ಕುಟುಂಬಿ ಎಂದರೆ *ಮಾತಾ ಪಿತಾ ಸ್ನುಷೇ ಪುತ್ರೌ ಪುತ್ರೀ ಪತ್ನ್ಯತಿಥಿಃ ಸ್ವಯಮ್ |ದಶಸಂಖ್ಯಃ ಕುಟುಂಬೀ* ಎಂಬಂತೆ ತಾಯಿ-ತಂದೆ-ಇಬ್ಬರು ಸೊಸೆಯರು-ಇಬ್ಬರು ಗಂಡುಮಕ್ಕಳು-ಮಗಳು-ಪತ್ನಿ- ಅತಿಥಿ ಮತ್ತು ಯಜಮಾನ. ಇವರು ಸಮೃದ್ಧವಾಗಿ ಬದುಕಲು ಬೇಕಾದ ಎಲ್ಲಾ ಸೌಕರ್ಯಗಳು ಅಯೋಧ್ಯೆಯಲ್ಲಿ ಬಹುಕಾಲದಿಂದ ನೆಲೆಸಿದ್ದವು. ಹಿಂದೆ ಗೋವನ್ನೂ ಮುಖ್ಯ ಸಂಪತ್ತಾಗಿ ಪರಿಗಣಿಸುತ್ತಿದ್ದರು. ಯುದ್ಧದ ದೃಷ್ಟಿಯಿಂದ ಅಶ್ವಗಳು ಒಂದು ಸಂಪತ್ತು. ಧನ ಧಾನ್ಯ ಸಾರ್ವಕಾಲಿಕ ಸಾರ್ವದೇಶಿಕ ಸಂಪತ್ತು. ಇವಿಷ್ಟಿದ್ದರೂ ಧರ್ಮ ಮಾರ್ಗ ಬಿಡದ, ಅನ್ಯಾಯದಿಂದ ಅರ್ಜನೆ ಮಾಡದ, ಅಲ್ಪಕಾಮದಿಂದ ತೃಪ್ತಿ ಪಡುವ ಜನರಿದ್ದರು. ಅಯೋಧ್ಯೆಯಲ್ಲಿ ಕೇವಲ ಕಾಮಾಸಕ್ತನಾದ ಮನುಷ್ಯನು ಇರಲಿಲ್ಲ. ಆಹಾರ-ನಿದ್ರಾ-ಮೈಥುನ ಇವನ್ನೇ ಬದುಕೆಂದು ತಿಳಿದ ಕೆಲವು ಪಾಶ್ಚಾತ್ಯರ ಬದುಕು ಕೇವಲ ಕಾಮಾಸಕ್ತವಾದುದು. ಅಂತಹ ಜನರು ಇರಲಿಲ್ಲ. ಕದರ್ಯರು ಒಬ್ಬರೂ ಇರಲಿಲ್ಲ. *ಆತ್ಮಾನಂ ಧರ್ಮಕೃತ್ಯಂ ಚ ಪುತ್ರದಾರಾಂಶ್ಚ ಪೀಡಯೇತ್ | ಲೋಭಾದ್ಯಃ ಪಿತರೌ ಭ್ರಾತೃನ್ ಸ ಕದರ್ಯ ಇತಿ ಸ್ಮೃತಃ* ಎಂಬಂತೆ ಲೋಭದ ಕಾರಣದಿಂದ ಧರ್ಮವನ್ನು ಬಿಟ್ಟು ಕುಟುಂಬದ ಸದಸ್ಯರನ್ನು ಹಿಂಸಿಸಿ ಸಂಪಾದಿಸಿದ್ದನ್ನು ತಾನೂ ಭೋಗಿಸದೇ ಅವನೇ ಕದರ್ಯ. ಸ್ವಿಸ್, ಮಾರಿಷಸ್, ಪನಾಮಾ ಮೊದಲಾದ ದೇಶಗಳಲ್ಲಿ ಧನ ಸಂಗ್ರಹಿಸುವ ಈಗಿನ ಕೆಲವು ಜನರು ಕದರ್ಯರೇ ಸರಿ. ಅಂತಹ ಜನರು ಅಯೋಧ್ಯೆಯಲ್ಲಿ ಹುಡುಕಿದರೂ ಸಿಗುತ್ತಿರಲಿಲ್ಲ. ಕ್ರೂರಿಯಾಗಲೀ, ಏನೂ ವಿದ್ಯೆ ಗೊತ್ತಿಲ್ಲದವನಾಗಲೀ, ಪರಲೋಕ ಹಾಗೂ ಅದಕ್ಕೆ ಕಾರಣವಾದ ಪಾಪ- ಪುಣ್ಯಗಳು ಇಲ್ಲ, ಮನಸ್ಸಿಗೆ ಬಂದಂತೆ ಜೀವಿಸಿ ಎಂದು ಬೋಧಿಸುವ ನಾಸ್ತಿಕನು ಒಬ್ಬನೂ ಇರಲಿಲ್ಲ. ಜನರು ಸರಿಯಾದ ದಾರಿಯಲ್ಲಿ ಸಾಗಲು ಧರ್ಮ ಪಾಪ ಪುಣ್ಯ ಮೊದಲಾದ ವ್ಯವಸ್ಥೆ ಬೇಕು. ಇಲ್ಲದಿದ್ದರೆ ಅತ್ಯಾಚಾರ ಅನಾಚಾರ ಕೊಲೆ ದರೋಡೆ ಸುಲಿಗೆ ಮೊದಲಾದವು ನಿತ್ಯಕರ್ಮಗಳಾಗುತ್ತವೆ. ಅದೇ ನಾಸ್ತಿಕ್ಯದ ದುಷ್ಪರಿಣಾಮ. ಅಂತಹ ನಾಸ್ತಿಕತೆ ಎಂದೂ ಕಂಡುಬರುತ್ತಿರಲಿಲ್ಲ. ಇದು ಅಯೋಧ್ಯೆಯಲ್ಲಿ ಬಹುಶಃ ಮನುವಿನ ಕಾಲದಿಂದಲೇ ನಡೆದುಬಂದ ವ್ಯವಸ್ಥೆ ಯಾವ ರಾಜರೂ ಇದನ್ನು ಮುರಿಯದೇ ಇನ್ನೂ ಬಲಿಷ್ಠವಾಗಿಸುತ್ತಾ ಪ್ರಜಾರಂಜಕರಾಗಿ ಬಾಳಿದರು._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ