ರಾಮಾಯಣ ೧೪೫

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೫ 🏝📖   

*ಕಾಮಾರ್ಥಗುಣಸಂಯುಕ್ತಂ ಧರ್ಮಾರ್ಥಗುಣವಿಸ್ತರಮ್ | ಸಮುದ್ರಮಿವ ರತ್ನಾಢ್ಯಂ ಸರ್ವಶ್ರುತಿಮನೋಹರಮ್||* 

_ರಾಮಾಯಣದ ಹಿರಿಮೆ ಇಲ್ಲಿದೆ- ಕಾಮವೆಂಬ ಪುರುಷಾರ್ಥವನ್ನು ಧರ್ಮಾನುಸಾರ ಹೇಗೆ ಪಡೆಯಬಹುದೆಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಅಂತೆಯೇ ಧರ್ಮದ ಮಹತ್ವ ಹಾಗೂ ಆಚರಣೆಯ ಪ್ರತಿಪಾದನೆ ಇಲ್ಲಿದೆ. ಅನೇಕ ರತ್ನಗಳಿಂದ ಕೂಡಿದ ಸಮುದ್ರದಂತೆ ಸದ್ವಿಚಾರಗಳ ಸಮುದ್ರ ಈ ಕಾವ್ಯ. ಕೇಳುಗನಿಗೂ, ಓದುಗನಿಗೂ ಎಷ್ಟು ಬಾರಿಯೂ ಮನಸ್ಸಿಗೆ ಮುದ ಕೊಡುವ ಕಾವ್ಯವೊಂದಿದ್ದರೆ ಅದು ರಾಮಾಯಣ. ಪುರುಷಾರ್ಥಗಳ ಪ್ರತಿಪಾದಕ, ಸದ್ವಿಚಾರಗಳ ಗಣಿ, ಸದಾ ಪಠನೀಯ ಹಾಗೂ ಶ್ರವಣೀಯವಾದುದು ಈ ಆದಿಕಾವ್ಯ._

*ವಾಸ್ತುಕರ್ಮವಿಧಾನಂ ಚ ಭರತಾಗಮನಂ ತಥಾ | ಪ್ರಸಾದನಂ ಚ ರಾಮಸ್ಯ ಪಿತುಶ್ಚ ಸಲಿಲಕ್ರಿಯಾಮ್||*

_ರಾಮಾಯಣದ ಒಂದೊಂದೇ ಘಟನೆಗಳನ್ನು ಸಂಕ್ಷೇಪವಾಗಿ ಉಲ್ಲೇಖಿಸುತ್ತಾ ಹದಿನಾರನೇ ಶ್ಲೋಕ ಇದಾಗಿದೆ. ಚಿತ್ರಕೂಟಕ್ಕೆ ಭರದ್ವಾಜರ ಅಪ್ಪಣೆ ಪಡೆದು ಹೊರಟ ರಾಮ ಅಲ್ಲಿ ಪರ್ಣಕುಟಿಯನ್ನು ನಿರ್ಮಿಸಿ ಅಲ್ಲಿ ವಾಸ್ತುಪೂಜೆಯನ್ನು ನೆರವೇರಿಸಿದನು. ಇಲ್ಲಿ ಈ ಶ್ಲೋಕ ಉಲ್ಲೇಖಿಸಲು ಮುಖ್ಯ ಕಾರಣ - ವಾಸ್ತುಪೂಜೆ ಎನ್ನುವುದು ಇತ್ತೀಚೆಗೆ ಆರಂಭವಾದದ್ದಲ್ಲ. ಯುಗಯುಗಗಳ ಪೂರ್ವದಲ್ಲೂ ಅದಕ್ಕೆ ಮಾನ್ಯತೆ ಇತ್ತು. ರಾಮನಂತಹ ಅವತಾರಿಯೇ ಅರಣ್ಯದಲ್ಲಿ ಕಟ್ಟಿದ ಪರ್ಣಕುಟಿಯಲ್ಲಿ ವಾಸ್ತು ಪೂಜೆ ಮಾಡಿ ಪ್ರವೇಶಿಸುವುದಾದರೆ ನಗರಗಳಲ್ಲಿ ಅಥವಾ ಗ್ರಾಮದಲ್ಲಿ ಸದಾ ವಾಸಿಸುವ ನಮಗೆ ವಾಸ್ತುವಿನ ಹಂಗಿಲ್ಲವೇ! ರಾಮನು ತಾನು ಮಾಡುವುದರ ಮೂಲಕ ಇದು ಅವಶ್ಯ ಕರ್ತವ್ಯ ಎಂಬುದನ್ನು ಪ್ರತಿಪಾದಿಸಿದ್ದಾನೆ. ಅಲ್ಲಿಗೆ ಮುಂದೆ ಭರತನ ಆಗಮನ, ರಾಮನನ್ನು ಪ್ರಸನ್ನಗೊಳಿಸುವುದು ಹಾಗೂ ತಂದೆಯ ಪ್ರೀತಿಗೆ ಜಲಾಂಜಲಿ. ಇದೂ ಮುಖ್ಯವಾದುದು. ಈಗಿನ ಆಧುನಿಕರು ತಂದೆ ಸತ್ತರೆ ಸುಟ್ಟರಾಯಿತು, ಅನಾಥಾಶ್ರಮಕ್ಕೋ ಭಿಕ್ಷುಕರಿಗೋ ಊಟ ಹಾಕಿದರಾಯಿತು ಎನ್ನುವುದನ್ನು ಪ್ರತಿಪಾದನೆ ಮಾಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ‌. ಸತ್ತು ಬಹಳ ದಿನಗಳು ಕಳೆದಿದ್ದರೂ ರಾಮನು ತನ್ನ ತಂದೆಗೆ ತಾನು ಯಾವ ವಿಧಾನದಲ್ಲಿ ಕ್ರಿಯೆ ಮಾಡಬಹುದಿತ್ತೋ ಅದನ್ನು ಯಥಾವಿಧಿ ಆಚರಿಸಿ ತೋರಿಸಿದನು‌. ವಿದೇಶದಲ್ಲಿ ಅಥವಾ ದೂರದಲ್ಲಿ ಇರುವಾಗ ಬರಲಾಗದಿದ್ದಾಗ ಸತ್ತ ಸ್ಥಳದಲ್ಲೇ ಯಾರಾದರೂ ಮಾಡುವರು, ನಾನೇಕೆ ಎಂಬ ಮಕ್ಕಳ ಮಾತಿಗೆ ರಾಮನ ಕೃತಿಯೇ ಉತ್ತರರೂಪವಾಗಿದೆ._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩