ರಾಮಾಯಣ ೧೪೯
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೯🏝📖
*ಹ್ಲಾದಯನ್ಸರ್ವಗಾತ್ರಾಣಿ ಮನಾಂಸಿ ಹೃದಯಾನಿ ಚ | ಶ್ರೋತ್ರಾಶ್ರಯಸುಖಂ ಗೇಯಂ ತದ್ಬಭೌ ಜನಸಂಸದಿ || ತತಸ್ತು ತೌ ರಾಮವಚಃಪ್ರಚೋದಿತಾವಗಾಯತಾಂ ಮಾರ್ಗವಿಧಾನಸಂಪದಾ | ಸ ಚಾಪಿ ರಾಮಃ ಪರಿಷದ್ಗತಃ ಶನೈರ್ಬುಭೂಷಯಾ ಸಕ್ತಮನಾ ಬಭೂವ ಹ ||*
_ಲವಕುಶರು ಆಸ್ಥಾನದಲ್ಲಿ ರಾಮನ ಇಚ್ಛೆಯಂತೆ ಗಾನವನ್ನು ಆರಂಭಿಸದರು. ಅವರ ದಿವ್ಯಗಾಯನವು ಎಲ್ಲರ ಶರೀರಕ್ಕೆ- ಮನಸ್ಸಿಗೆ- ಹೃದಯಕ್ಕೆ ಆಹ್ಲಾದವನ್ನು ತಂದುಕೊಟ್ಟಿತು. ಅರ್ಥವಾಗುವಂತಹ ಭಾಷೆ ಹಾಗೂ ಮಧುರಧ್ವನಿಯಲ್ಲಿ ರಾಮಚರಿತೆಯನ್ನು ಹಾಡುತ್ತಿದ್ದಾಗ ಕೇಳುಗರ ಹೃದಯ ತುಂಬಿಬಂತು. ಮನಸ್ಸು ಆನಂದದ ಅಲೆಯಲ್ಲಿ ತೇಲಲಾರಂಭಿಸಿತು. ಶರೀರವೂ ಆಯಾಸ ಹೊಂದದೇ ಬಹಳ ಹೊತ್ತು ಕೇಳುವ ಅವಕಾಶವನ್ನು ಒದಗಿಸಿತು. ಆ ಗಾನವು ಕಿವಿಗಳಿಗೆ ಅತ್ಯಂತ ಸುಖದಾಯಕವಾದ ಕಾರಣ ಜನರು ಸ್ವಲ್ಪವೂ ಶಬ್ದವಾಗದಂತೆ ಮೈಯೆಲ್ಲ ಕಿವಿಯಾಗಿ ಆಲಿಸಿ ಆನಂದಿಸಿದರು. ಹಿಂದಿನ ದಿನದ ಜನರ ಆಸಕ್ತಿ ಕಂಡ ರಾಮನು ಮತ್ತೆ ಅವರ ಗಾಯನವನ್ನು ಮುಂದುವರೆಸುವಂತೆ ವಿನಂತಿಸಿದನು. ಆ ಮಕ್ಕಳು *ಮಾರ್ಗ* ಎಂಬ ಸಂಗೀತ ಸಂಪ್ರದಾಯವನ್ನು ಅನುಸರಿಸಿ ಹೃದಯಮುಟ್ಟುವಂತೆ ಹಾಡಿದರು. ಸಂಗೀತದಲ್ಲಿ ಎರಡು ಪ್ರಕಾರದ ಸಂಪ್ರದಾಯಗಳು ಹಿಂದೆ ಇದ್ದವು- ದೇಶೀ ಹಾಗೂ ಮಾರ್ಗ. ಪ್ರಾಕೃತಗೀತೆಗಳನ್ನು ದೇಶೀ ಸಂಪ್ರದಾಯದಲ್ಲಿ ಹಾಡಿದರೆ, ಸಂಸ್ಕೃತ ಗೀತೆಗಳನ್ನು ಮಾರ್ಗ ಪದ್ಧತಿಯಲ್ಲಿ ಹಾಡುತ್ತಿದ್ದರು. ಇಲ್ಲಿ ರಾಮಾಯಣವು ಪೂರ್ಣ ಸಂಸ್ಕೃತ ಕಾವ್ಯವಾದ್ದರಿಂದ ಮಾರ್ಗವನ್ನು ಆಶ್ರಯಿಸಿದರು. ಆ ಗಾನವನ್ನು ತಾನೂ ಕೇಳುವ ಇಚ್ಛೆಯಿಂದ ಸದ್ದುಗದ್ದಲವಾಗದಂತೆ ಕೇಳುಗರ ಆಸಕ್ತಿಗೆ ಭಂಗ ಬರದಂತೆ ರಾಮನೂ ಸಭೆಯನ್ನು ಪ್ರವೇಶಿಸಿ ಆಲಿಸುತ್ತಾ ಆನಂದಿಸಿದನು._
*ಯೇಷಾಂ ಸ ಸಗರೋ ನಾಮ ಸಾಗರೋ ಯೇನ ಖಾನಿತಃ | ಷಷ್ಟಿಃ ಪುತ್ರಸಹಸ್ರಾಣಿ ಯಂ ಯಾಂತಂ ಪರ್ಯವಾರಯನ್ || ತದಿದಂ ವರ್ತಯಿಷ್ಯಾಮಿ ಸರ್ವಂ ನಿಖಿಲಮಾದಿತಃ | ಧರ್ಮಕಾಮಾರ್ಥಸಹಿತಂ ಶ್ರೋತವ್ಯಮನಸೂಯಯಾ ||*
_ಮನುವಿನಿಂದ ಆರಂಭವಾದ ಈ ವಂಶದಲ್ಲಿ ಮೊದಲಿಗೆ ಸಗರನೆಂಬ ಅರಸನಿದ್ದನು. ಸೂರ್ಯವಂಶದ ಬಾಹು ಎಂಬ ಅರಸನಿಗೆ ಯಾದವೀಯಲ್ಲಿ ಜನಿಸಿದ ವೀರ. ಹೈಹಯರು ಇವನನ್ನು ರಾಜ್ಯಭ್ರಷ್ಟನನ್ನಾಗಿಸಿದ್ದರು. ಈ ಸಮಯದಲ್ಲಿ ಯಾದವಿಯು ಗರ್ಭಿಣಿಯಾದಾಗ ಅವಳ ಸವತಿಯು ಮಾತ್ಸರ್ಯದಿಂದ ವಿಷ ತಿನ್ನಿಸಿದಳು. ಆದರೆ ಯಾದವಿಯ ತಪಃಪ್ರಭಾವವು ಅವಳಿಗೆ ಹಾಗೂ ಗರ್ಭಕ್ಕೆ ಯಾವ ಕೆಡುಕನ್ನೂ ಉಂಟುಮಾಡಲಿಲ್ಲ. ಮುಂದೆ ಬಾಹು ಅಸುನೀಗಲು ಔರ್ವನ ಆಶ್ರಮದಲ್ಲಿ ಯಾದವಿಯು ವಿಷಸಹಿತವಾಗಿ ಮಗುವಿಗೆ ಜನ್ಮನೀಡಿದಳು. ವಿಷ ಅವಳ ಗರ್ಭದಿಂದ ಮಗುವಿನ ಜೊತೆಗೆ ಹೊರಬಂತು. ಹಾಗಾಗಿ ಗರದ ಜೊತೆಗೆ ಜನಿಸಿದ ಇವನಿಗೆ *ಸಗರ* ಎಂಬ ಹೆಸರಾಯಿತು. ಅವನು ತನ್ನ ಪರಾಕ್ರಮದಿಂದ ಹೈಹಯರನ್ನು, ಪಹ್ಲವರನ್ನು, ಕಾಂಭೋಜರನ್ನು ಕೊಂದು ರಾಜ್ಯ ಪಡೆದನು. ಅವನ ಮಡದಿ ಭಾನುಮತಿ ಔರ್ವರನ್ನು ಆರಾಧಿಸಿ ಅರವತ್ತು ಸಾವಿರದ ಒಂದು ಮಕ್ಕಳನ್ನು ಪಡೆದಳು. ಈ ಅರವತ್ತು ಸಾವಿರ ಮಕ್ಕಳು ಸಗರನ ಅಶ್ವಮೇಧದ ಅಶ್ವವನ್ನು ಹುಡುಕಲು ಪಾತಾಳ ಸೇರಿ ಕಪಿಲನನ್ನು ಕೆಣಕಿ ಭಸ್ಮವಾದರು. ಇನ್ನೊಬ್ಬ ಮಗ ಅಸಮಂಜನು ತನ್ನ ಅಸಮಂಜಸ ನಡವಳಿಕೆಯಿಂದ ರಾಜನಿಂದ ಪರಿತ್ಯಕ್ತನಾದನು. ಆ ಅರವತ್ತು ಸಾವಿರ ಮಕ್ಕಳು ಭೂಮಿ ಅಗೆದಾಗ ಈ ವಿಶಾಲ ಸಾಗರ ಉಂಟಾಯಿತು. ಹೀಗೆ ವಿಸ್ತಾರವಾದ ಎಲ್ಲಾ ಕಥಾನಕವನ್ನು ಹೇಳುತ್ತೇವೆ- ಧರ್ಮ, ಅರ್ಥ, ಕಾಮಗಳ ಪ್ರಾಪ್ತಿಗೆ ಸಾಧಕವಾದ ಈ ಕಥೆಯನ್ನು ಕೇಳಿ ಎನ್ನುತ್ತಾ ಹಾಡಿದರು ಕುಶೀಲವರು. ರಾಮಾಯಣವು ಧರ್ಮವನ್ನು ಸರಳವಾಗಿ ನಿರೂಪಿಸುತ್ತದೆ. ಅರ್ಥದ ಸಂಗ್ರಹ ಹೇಗೆ ಮಾಡಬೇಕು, ಹೇಗೆ ಮಾಡಬಾರದು ಎಂಬುದನ್ನು ನಿರೂಪಿಸುತ್ತದೆ. ಕಾಮದ ಪ್ರವೃತ್ತಿ ಎಷ್ಟಿರಬೇಕು ಎಂಬುದನ್ನೂ ನಿರೂಪಿಸುತ್ತದೆ. ಈ ಮೂರರ ಸರಿಯಾದ ತಿಳುವಳಿಕೆ ಅಥವಾ ಪ್ರಾಪ್ತಿಯು ಮೋಕ್ಷಕ್ಕೆ ದಾರಿಯನ್ನು ತೋರಿಸುತ್ತದೆ. ಹೀಗೆ ರಾಮಾಯಣವು ಪುರುಷಾರ್ಥಪ್ರದಾಯಕ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ