ರಾಮಾಯಣ ೧೪೮

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೮ 🏝📖    

*ಅಹೋ ಗೀತಸ್ಯ ಮಾಧುರ್ಯಂ ಶ್ಲೋಕಾನಾಂ ತು ವಿಶೇಷತಃ| ಚಿರನಿರ್ವೃತ್ತಮಪ್ಯೇತತ್ಪ್ರತ್ಯಕ್ಷಮಿವ ದರ್ಶಿತಮ್ || ಪ್ರವಿಶ್ಯ ತಾವುಭೌ ಸುಷ್ಠು ಭಾವಂ ಸಮ್ಯಗಗಾಯತಾಮ್ | ಸಹಿತೌ ಮಧುರಂ ರಕ್ತಂ ಸ್ವರಸಂಪದಾ ||*

_ವಾಲ್ಮೀಕಿ ಮಹರ್ಷಿಗಳ ಆಜ್ಞೆಯಂತೆ ರಾಮಾಯಣವನ್ನು ಸುಮಧುರಕಂಠದಿಂದ ಹಾಡಿದರು. ಅದನ್ನು ಕೇಳಿ ಸ್ವತಃ ಮಹರ್ಷಿಗಳೇ ಬೆರಗಾಗಿ ಮಾಡಿದ ಉದ್ಗಾರ- ನಿಸ್ಚಯವಾಗಿಯೂ ಇವರ ಗಾಯನ ಎಷ್ಟು ಮಧುರ, ಶ್ಲೋಕಗಳಂತೂ ಬಹಳ ಇಂಪಾಗಿವೆ, ಇವರ ಕೋಕಿಲದನಿಯಲ್ಲಿ ಹೊರಟ ಈ ಆಖ್ಯಾನ ಬಹಳ ಕಾಲದವರೆಗೂ ಆ ಕಥೆ ನಮ್ಮ ಕಣ್ಣಮುಂದೆಯೇ ನಡೆದಂತೆ ತೋರುತ್ತಿದೆ. ಷಡ್ಜ ಮೊದಲಾದ ಸಪ್ತಸ್ವರಗಳಿಂದ ಪೂರ್ಣವಾದ ಇವರ ಗಾಯನವು ಪೂರ್ಣವಾಗಿ ಶೋಭಿಸುತ್ತಿದೆ. ಶೃಂಗಾರ- ವೀರ ಮೊದಲಾದ ರಸಗಳನ್ನು ಆಯಾ ಶ್ಲೋಕದಲ್ಲಿ ಯಥಾವತ್ತಾಗಿ ಒಡಮೂಡುವಂತೆ ಹಾಡುತ್ತಿದ್ದಾರೆ. ಒಮ್ಮೆಯೂ ಅಪಸಬ್ದಗಳು ಇವರ ಮೊಗದಿಂದ ಹೊರಹೊಮ್ಮಲಿಲ್ಲ. ಭಾವಪರವಶರಾಗಿ ತಮ್ಮನ್ನೇ ಮರೆತುಹೋದವರಂತೆ ಹಾಡುತ್ತಿರುವರಲ್ಲ ಈ ಮಕ್ಕಳು. ಏನಿದು ಆಶ್ಚರ್ಯ! ಗುರುವೊಬ್ಬ ಶಿಷ್ಯರ ಏಳ್ಗೆ ಅಥವಾ ಸಾಧನೆ ಕಂಡು ಮನದುಂಬಿ ಪ್ರಶಂಸಿಸುವ ಸಾಲುಗಳಿವು. ಸ್ವತಃ ಕರ್ತೃವಿಗೆ ಆನಂದಾಶ್ರು ಉಕ್ಕುವಂತೆ ಮಾಡುವ ರಾಮಾಯಣದ ಶ್ಲೋಕಗಳ ಮಹಿಮೆ ಇದು._

*ಪ್ರೀತಃ ಕಶ್ಚಿನ್ಮುನಿಸ್ತಾಭ್ಯಾಂ ಸಸ್ಮಿತಃ ಕಲಶಂ ದದೌ | ಪ್ರಸನ್ನೋ ವಲ್ಕಲಂ ಕಶ್ಚಿದ್ದದೌ ತಾಭ್ಯಾಂ ಮಹಾತಪಾಃ|| ಅನ್ಯಃ ಕೃಷ್ಣಾಜಿನಂ ಪ್ರಾದಾನ್ಮೌಂಜೀಮನ್ಯೋ ಮಹಾಮುನಿಃ | ಕಶ್ಚಿತ್ಕಮಂಡಲುಂ ಪ್ರಾದಾದ್ಯಜ್ಞಸೂತ್ರಂ ತಥಾಪರಃ ||*

_ಲವಕುಶರ ಆ ರಾಮಕಥಾಗಾಯನವನ್ನು ಕೇಳಿ ಮುನಿಗಳು ತುಂಬಾ ಸಂತೋಷಪಟ್ಟರು. ತಮ್ಮಲ್ಲಿ ಆ ಮುನಿಬಾಲಕರಿಗೆ ಕೊಡಲು ಯಾವ ಅಮೂಲ್ಯ ವಸ್ತು ಇಲ್ಲದ ಕಾರಣ ಅವರಲ್ಲಿ ಕೆಲವರು ಕಲಶವನ್ನು, ಕೆಲವರು ನಾರುಮಡಿಯನ್ನು, ಕೆಲವರು ಯಜ್ಞೋಪವೀತವನ್ನು, ಕೆಲವರು ಕಮಂಡಲು- ಮೌಂಜಿ- ದರ್ಭೆಯ ಆಸನ- ಕೌಪೀನ - ಜಪಮಾಲೆ- ಕಾಷಾಯವಸ್ತ್ರ- ಜಟೆಕಟ್ಟುವ ಹಗ್ಗ- ಯಜ್ಞ ಪಾತ್ರೆ- ಒಣಗಿದ ಸೌದೆ- ಅತ್ತಿ ಮರದ ಪಾತ್ರೆ ಮುಂತಾದವುಗಳನ್ನು ಬಹುಮಾನವಾಗಿ ನೀಡಿದರು. ರಾಮನಾಮದ ಮಹಿಮೆಯೇ ಅಂತಹದು. ಕೇಳಿ ಸಂತೋಷಗೊಳ್ಳದ ಮನುಜನಿಲ್ಲ. ಪುನೀತನಾಗದ ಜೀವಿಯಿಲ್ಲ. ಇಲ್ಲಿ ಋಷಿಜೀವನದ ಪರಿಚಯವೂ ಇದೆ. ಋಷಿಗಳು ಯಾವ ವಸ್ತುಗಳನ್ನು ಬಳಸುತ್ತಿದ್ದರು ಎಂದು ಕೊಟ್ಟ ಉಡುಗೊರೆಗಳಿಂದಲೇ ತಿಳಿಯುತ್ತದೆ. ಬಂಗಾರ- ಮುತ್ತು- ರತ್ನ- ಬೆಳ್ಳಿ ಮುಂತಾದ ಯಾವ ಆಡಂಬರದ ಹೆಚ್ಚಿನ ಮೌಲ್ಯದ ವಸ್ತುಗಳು ಇಲ್ಲದೆ ಕೇವಲ ಕಾಡಿನಲ್ಲಿ ಸಿಗುವ ವಸ್ತುಗಳಿಂದಲೇ ಯಜ್ಞ ಪ್ರಕ್ರಿಯೆಯನ್ನೂ ತಪಶ್ಚರ್ಯೆಯನ್ನೂ ನಡೆಸುತ್ತಿದ್ದರು ಋಷಿಗಳು. ಕಾಷಾಯ ವಸ್ತ್ರ ಹಾಗೂ ಜನಿವಾರ, ಕಮಂಡಲು ಬಹುಶಃ ಯಾರೋ ತಯಾರಿ ಮಾಡಿಕೊಡುತ್ತಿದ್ದರೇನೋ! ಇನ್ನುಳಿದ ವಸ್ತುಗಳೆಲ್ಲ ಕಾಡಿನಲ್ಲೇ ತಯಾರಿ ಮಾಡಿಕೊಂಡವು. ನಿಜವಾದ ಸರಳ ಜೀವನವೆಂದರೆ ಅದು ಋಷಿ ಜೀವನ. ನಾವು ಈ ಆದುನಿಕ ಕಾಲದಲ್ಲಿ ಯಾರೋ ತಯಾರಿಸಿದ ವಸ್ತುಗಳನ್ನೇ ನಾವು ನೂರರಷ್ಟು ಬಳಸುವುದು ಹಾಗೂ ಅದಕ್ಕಾಗಿ ಬೆಲೆ ಕೊಡುವುದು, ಬೆಲೆಯ ಸೌಕರ್ಯಕ್ಕೆ ಧನಸಂಗ್ರಹ, ಅದಕ್ಕೆ ಕೆಲವೊಮ್ಮೆ ಅಸತ್ಯದ ದಾರಿ ಹೀಗೆ ಅನರ್ಥಪರಂಪರೆಗೆ ಹೇತುವೇ ನಮ್ಮಯ ಆಡಂಬರದ ಬದುಕು. ಇದೂ ಇಲ್ಲದಿದ್ದ ಕೆಲವು ಋಷಿಗಳು ಮನಸಾರೆ ದೀರ್ಘಾಯುಷಿಗಳಾಗಿರೆಂದು ಹರಸಿದರು, ಶುಭವಾಗಲೆಂದರು ಮತ್ತೆ ಕೆಲವರು. ಮುಂದೆ ಕವಿಗಳಿಗೆ ಈ ಕಾವ್ಯವೇ ಮೂಲಾಧಾರವಾಯಿತು._



ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩