ರಾಮಾಯಣ ೧೫೦
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೦🏝📖
*ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ | ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ || ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ | ಮುಕ್ತಪುಷ್ಪಾವಕೀರ್ಣೇನ ಜಲಸಿಕ್ತೇನ ನಿತ್ಯಶಃ ||*
_ಐದನೇ ಸರ್ಗದಲ್ಲಿ ಅಯೋಧ್ಯೆಯ ಪರಿಚಯ ಇದೆ. ಅಯೋಧ್ಯೆ ಎಷ್ಟು ವಿಸ್ತಾರವಾಗಿತ್ತು ಎಂದರೆ ಹನ್ನೆರಡು ಯೋಜನಗಳಷ್ಟು ಉದ್ದ = ಸುಮಾರು ೧೫೬ ಕಿಲೋಮೀಟರ್, ಹಾಗೂ ಮೂರು ಯೋಜನಗಳಷ್ಟು ಅಗಲ= ೩೯ ಕಿಲೋಮೀಟರ್ ವಿಶಾಲವಾಗಿತ್ತು. ಮನು ಚಕ್ರವರ್ತಿಯಿಂದ ನಿರ್ಮಿಸಲ್ಪಟ್ಟ ಆ ನಗರದಲ್ಲಿ ಬೀದಿಗಳು ಬಹಳ ಅಗಲವಾಗಿಯೂ ಸಾಲುಮರಗಳಿಂದ ಅಲಂಕೃತವಾಗಿಯೂ ಇತ್ತು. ನೇರವಾದ ಹಾಗೂ ಅಗಲವಾದ ಹಳ್ಳ ತಿಟ್ಟುಗಳಿಲ್ಲದ ರಾಜಮಾರ್ಗಗಳಿದ್ದವು ಆ ನಗರದಲ್ಲಿ. ಎಲ್ಲಾ ಸಮಯದಲ್ಲಿ ಹೂವು ಬಿಡುವ ಮರಗಳಿಂದಾಗಿ ಯಾವಾಗಲೂ ಉದುರಿದ ಹೂಗಳಿಂದ ಸದಾ ಸುಗಂಧಭರಿತವಾಗಿದ್ದವು ಆ ವೀಥಿಗಳು. ನಿತ್ಯವೂ ಮಣ್ಣು ಎದ್ದು ಧೂಳಾಗದಂತೆ ನೀರು ಸಿಂಪಡಿಸುವ ವ್ಯವಸ್ಥೆಯೂ ಅಲ್ಲಿತ್ತು. ರಾಮಾಯಣದ ಈ ವರ್ಣನೆ ನೋಡಿದರೆ ನಗರ ರಚನೆ ಎಷ್ಟು ವ್ಯವಸ್ಥಿತವಾಗಿತ್ತು ಹಿಂದೆ ಎಂಬುದು ಅರಿವಿಗೆ ಬರುತ್ತದೆ. ಜನಸಂಖ್ಯೆ ಈಗಿನಷ್ಟು ಇಲ್ಲದಿದ್ದರೂ ಜನರು ಸುಖವಾಗಿ ಇರಲೆಂದು ವಿಶಾಲ ನಗರಗಳನ್ನು ನಿರ್ಮಿಸುತ್ತಿದ್ದರು. ಬೀದಿಯಲ್ಲಿ ಸಂಚರಿಸುವವರಿಗೆ ನೆರಳಿಗೆ ಮರಗಳನ್ನು ಬೆಳೆಸುವ ಪರಂಪರೆ ಅಂದೇ ಚಾಲ್ತಿಯಲ್ಲಿತ್ತು. ರಾಜಬೀದಿಯಲ್ಲಿ ಸದಾ ಗಿಜಿಗಿಡುವ ಓಡಾಟದಿಂದಾಗಿ ಜನರಿಗೆ ತೊಂದರೆಯಾಗದಿರಲೆಂದು ಅಗಲವಾದ ರಸ್ತೆಗಳನ್ನೂ, ರಥಗಳ ರಭಸದಿಂದ ಮುಗಿಲೆತ್ತರಕ್ಕೆ ಏಳುವ ಧೂಳಿನ ತೊಂದರೆ ನಿವಾರಿಸಲು ನಿತ್ಯವೂ ನೀರು ಸಿಂಪಡಿಸುವ ಅತ್ಯಾಧುನಿಕ ವ್ಯವಸ್ಥೆಯೂ ಆಗಲೇ ಚಾಲ್ತಿಯಲ್ಲಿತ್ತು._
*ಕವಾಟತೋರಣವತೀಂ ಸುವಿಭಕ್ತಾಂತರಾಪಣಾಮ್ | ಸರ್ವಯಂತ್ರಾಯುಧವತೀಂ ಉಪೇತಾಂ ಸರ್ವಶಿಲ್ಪಿಭಿಃ || ಉಚ್ಚಾಟ್ಟಾಲಧ್ವಜವತೀಂ ಶತಘ್ನೀ ಶತಸಂಕುಲಾಮ್ ||*
_ಆ ಪಟ್ಟಣವು ಪ್ರಶಸ್ತವಾದ ಬಾಗಿಲುಗಳಿಂದಲೂ, ಹೊರ ಬಾಗಿಲುಗಳಿಂದಲೂ ಅಲಂಕೃತವಾಗಿತ್ತು. ಅಂಗಡಿಗಳು ಒಂದೇ ರೀತಿಯಿಂದ ರಚಿಸಲ್ಪಟ್ಟು ಒಂದಕ್ಕೊಂದು ಸೇರಿಕೊಂಡಿರದೇ ವ್ಯವಸ್ಥಿತವಾಗಿದ್ದವು.ನಾನಾ ವಿಧವಾದ ಯಂತ್ರಗಳಿಂದಲೂ, ಆಯುಧಗಳಿಂದಲೂ ಈ ನಗರವು ಸಮೃದ್ಧವಾಗಿದ್ದಿತು. ಕೈಗಾರಿಕಾ ಅಥವಾ ಯಾಂತ್ರಿಕ ಬೆಳವಣಿಗೆ ಎನ್ನುವುದು ರಾಷ್ಟ್ರಗಳ ಸಮೃದ್ಧಿಯ ಸಂಕೇತ ಎನ್ನುವುದು ಬಹುಶಃ ಆ ಕಾಲದಿಂದಲೂ ಚಾಲ್ತಿಯಲ್ಲಿದೆ. ಆ ನಗರಿಯಲ್ಲಿ ಎತ್ತರವಾದ ನೂರಾರು ಮಹಡಿಗಳಿದ್ದು ಅವುಗಳ ಮೇಲೆ ವಿಧವಿಧವಾದ ಧ್ವಜ ಪತಾಕೆಗಳು ಹಾರಾಡುತ್ತಿದ್ದವು. ಹಿಂದೆ ತಮ್ಮ ತಮ್ಮ ಮನೆಯ ಅಥವಾ ಭವನದ ಗುರುತಿಗೆ ಪತಾಕೆಗಳನ್ನು ಹಾರಿಸುತ್ತಿದ್ದರು. ಈಗಿನಂತೆ ಹೆಸರು ಅಥವಾ ಗೇಟುಗಲು ಇರಲಿಲ್ಲವೇನೋ! ನಗರದ ಸುತ್ತಲೂ ಅಭೇದ್ಯವಾದ ಕೋಟೆ ಇತ್ತು. ಅದರಲ್ಲಿ ನೂರಾರು *ಶತಘ್ನಿ* ಎಂಬ ಶಸ್ತ್ರಗಳನ್ನು ವೇಗವಾಗಿ ಹೊರಚೆಲ್ಲುವ ಯಂತ್ರಗಳನ್ನು ಸ್ಥಾಪಿಸಿದ್ದರು. ಅಯೋಧ್ಯೆ ಹೆಸರಿಗೆ ತಕ್ಕಂತೆ ಜಯಿಸಲು ಅಸಾಧ್ಯವಾಗಿರಲು ಇಂತಹ ಸುವ್ಯವಸ್ಥೇಯೂ ಒಂದು ಕಾರಣವಾಗಿತ್ತು._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ