ರಾಮಾಯಣ ೧೫೧
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೧🏝📖
*ತೇನ ಸತ್ಯಾಭಿಸಂಧೇನ ತ್ರಿವರ್ಗಮನುತಿಷ್ಠತಾ | ಪಾಲಿತಾ ಸಾ ಪುರೀ ಶ್ರೇಷ್ಠಾ ಇಂದ್ರೇಣೇವಾಮರಾವತೀ || ತಸ್ಮಿನ್ಪುರವರೇ ಹೃಷ್ಟಾ ಧರ್ಮಾತ್ಮಾನೋ ಬಹುಶ್ರುತಾಃ | ನರಾಸ್ತುಷ್ಟಾ ಧನೈಃಸ್ವೈಃ ಸ್ವೈರಲುಬ್ಧಾಃ ಸತ್ಯವಾದಿನಃ ||*
_ಆರನೇ ಸರ್ಗದಲ್ಲಿ ದಶರಥನ ಹಾಗೂ ಅವನ ಪ್ರಜೆಗಳ ವರ್ಣನೆ ಇದೆ. ದಶರಥನು ಸತ್ಯವ್ರತನಾಗಿ ಧರ್ಮ-ಅರ್ಥ-ಕಾಮಗಳೆಂಬ ಪುರುಷಾರ್ಥಗಳನ್ನು ಸಾಧನೆಮಾಡುತ್ತಾ ಇಂದ್ರನು ಅಮರಾವತಿಯನ್ನು ಪಾಲಿಸುವಂತೆ ಇಲ್ಲಿ ಆಡಳಿತ ನಡೆಸುತ್ತಿದ್ದನು. ಇಲ್ಲಿ ಸತ್ಯವೇ ಒಂದು ವ್ರತ ಮಹಾರಾಜನಿಗೆ. ರಾಮಾಯಣ ಕಥೆ ನಡೆಯಲು ಇದೂ ಒಂದು ಕಾರಣ. ಶ್ರವಣ ಕುಮಾರನನ್ನು ಕೊಂದ ಕ್ಷಣದಲ್ಲಾಗಲಿ, ಕೈಕೇಯಿ ಬೇಡಿದ ಕ್ಷಣದಲ್ಲಾಗಲಿ ದಶರಥನಿಗೆ ಸತ್ಯವೇ ವ್ರತವಾಗಿತ್ತು. ನಮಗೆಲ್ಲ ಈ ಸತ್ಯವೆಂಬ ವ್ರತ ಮಾದರಿ. ಬೇರೆಲ್ಲಾ ವ್ರತಗಳನ್ನು ಆಚರಿಸಿ ಸತ್ಯವನ್ನು ಅಥವಾ ಪರಹಿತವನ್ನು ಬಯಸದ ಬದುಕು ಎಂದಿಗೂ ಬದುಕಲ್ಲ, ಅದೊಂದು ಸತ್ವರಹಿತ ಬದುಕು. ದಶರಥನು ತ್ರಿವರ್ಗಗಳನ್ನು ಸೇವಿಸುತ್ತಿದ್ದನು ಎಂದಿದೆ. ತ್ರಿವರ್ಗಗಳ ಸರಿಯಾದ ಸೇವನೆ ನಾಲ್ಕನೆಯ ಮೋಕ್ಷಕ್ಕೆ ಹೆದ್ದಾರಿ. ಮೂರೂ ಒಂದಕ್ಕೊಂದು ಪೂರಕವಾಗಿದ್ದು ನಾಲ್ಕನೆಯದನ್ನು ಸಾಧಿಸಲು ಅನುವು ಮಾಡಿಕೊಡುವಂತಿರಬೇಕು. ಅರ್ಥ- ಕಾಮಗಳ ಸಂಪಾದನೆ ಅಥವಾ ಅನುಭವ ಧರ್ಮವನ್ನು ಬಿಟ್ಟಿರದೆ ಧರ್ಮದ ಚೌಕಟ್ಟಿನಲ್ಲಿ ಸಾಗಿದಾಗ ಅದಕ್ಕೊಂದು ಸೌಂದರ್ಯ, ಗಾಂಭೀರ್ಯ. ಇಲ್ಲದಿದ್ದರೆ ದಾರಿತಪ್ಪಿದ ಒಂಟಿಸಲಗದಂತೆ ಅದು ಸಮಾಜವನ್ನು ಕೆಡಿಸಲು ಕಾರಣವಾಗುವುದು. ನಮ್ಮ ಪರಂಪರೆಯಲ್ಲಿ ಬರೀ ಅಧ್ಯಾತ್ಮ ಅಥವಾ ದೇವಚಿಂತನೆ ನಡೆಯುತ್ತಿತ್ತು ಎಂಬ ಮೊಂಡುವಾದಿಗಳು ಈ ಶ್ಲೋಕಗಳನ್ನು ಗಮನಿಸಬೇಕು. ಎಲ್ಲವೂ ಇದ್ದೂ ಅಧ್ಯಾತ್ಮವಿರುವುದು ವಿಶೇಷ ಸಂಗತಿ. ಅದಿಲ್ಲದಿರೆ ದೇಹಾರಾಧನೆ ನಡೆದು ಕೊನೆಗೊಮ್ಮೆ ರೋಗಪೀಡಿತರಾಗಿ ನರಕವನ್ನು ಹೊಂದಬೇಕಾಗುತ್ತದೆ. ಹಾಗಾಗಿ ನಿಜಾರ್ಥದಲ್ಲಿ ಜೀವನವನ್ನು ನಡೆಸುತ್ತಿದ್ದರು ಅಲ್ಲಿಯ ಪ್ರಜೆಗಳು. ತಮ್ಮ ತಮ್ಮ ಧನದಿಂದ ಅಥವಾ ಸಂಪಾದನೆಯಿಂದ ತೃಪ್ತಿ ಹೊಂದಿ ಬೇರೆಯವರ ಬಗ್ಗೆ ಅಸೂಯೆ ಪಡದೆ ಉತ್ತಮ ಜೀವನ ನಡೆಸುತ್ತಿದ್ದರು. ಜನರೂ ರಾಜನಂತೆ ಸತ್ಯವಾದಿಗಳಾಗಿದ್ದರು. ಇಲ್ಲಿ ವಿಶಿಷ್ಟವಾದುದು ಸಂತೃಪ್ತಿ. ಈಗಿನ ನಮ್ಮ ಜಗತ್ತಿನಲ್ಲಿ ಸಂತೃಪ್ತಿಯ ಕೊರತೆಯೇ ಪ್ರತಿಯೊಂದು ಸಮಸ್ಯೆಗೆ ಮೂಲ ಕಾರಣ. ಅದಿದ್ದರೆ ಯಾವ ಸಮಸ್ಯೆಯೂ ಕಾಣದು. ದಶರಥನ ಆಳ್ವಿಕೆ ಅಷ್ಟು ಸುಖಕರವಾಗಿತ್ತು ಪ್ರಜೆಗಳ ಪಾಲಿಗೆ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ