ಪದಶಕ್ತಿ‌ ೩೩

🏹*ಪದಶಕ್ತಿ* ---೩೩🌄

*ವಿಮಾನ*

_ಸ್ವರ್ಗದ ಯಾನದ ಹೆಸರೇ ವಿಮಾನ. *ವಿಶಿಷ್ಟಂ ಮಾನಯಂತಿ ಅನೇನ* ಎಂಬಂತೆ ಇದರಿಂದಾಗಿ ಒಳಗಿರುವವರ ಅಥವಾ ಪ್ರಯಾಣಿಕರ ಗೌರವ ಹೆಚ್ಚಾಗುವುದು ಅಥವಾ ಅವರಿಗೆ ಸುಖ ದೊರಕುವುದು ಅಥವಾ ಇದರೊಳಗೆ ಸೇರಿದರೆ ಗೌರವಿಸುವುದು ಇತ್ಯಾದಿ ಅರ್ಥದಲ್ಲಿ ಆಕಾಶವಾಹಕ ವಿಮಾನ. ಇನ್ನೊಂದು ಅರ್ಥದಲ್ಲಿ ನೋಡುವುದಾದರೆ *ವಿಶೇಷೇಣ ಮಾಂತಿ* ವಿಶಿಷ್ಟವಾಗಿ ಶೋಭಿಸುತ್ತದೆ ಅಥವಾ ವಿಶಿಷ್ಠವಾದ ಸತ್ಕಾರ ನೀಡುತ್ತದೆ ವಿಮಾನ. ಮತ್ತೊಂದು ಅರ್ಥದಲ್ಲಿ *ವಿಗತಂ ಮಾನಂ ಅಸ್ಯ* ಎಂದರೆ ಮಾನ ಹೋಯ್ತು ಎಂದಲ್ಲ. ಇದಕ್ಕೆ ಸಮನಾದ ಹೋಲಿಕೆ ಅಥವಾ ಉಪಮೆ ಇಲ್ಲ ಎಂಬ ಅರ್ಥದಲ್ಲಿ ಅಸದೃಶವಾದುದು ವಿಮಾನ. ಇದರಿಂದಾಗಿ ರಥಾದಿಗಳ ಮಾನ ಹೋಯ್ತು ಎಂದು ಕಲ್ಪನೆಯನ್ನು ಮಾಡಬಹುದು. ಇವೆಲ್ಲ ಅರ್ಥಕಲ್ಪನೆ ಕುಬೇರನ ಬಳಕೆಯಲ್ಲಿದ್ದ ಅನಂತರ ರಾವಣ ಕಿತ್ತುಕೊಂಡ ಸದ್ಯಕ್ಕೆ ದೇವಲೋಕದಲ್ಲಿರುವ ಪುಷ್ಪಕ ವಿಮಾನದ್ದು. ಏಕೆಂದರೆ ಅದು ಪ್ರಯಾಣಿಕನ ಮನಸ್ಸಿನ ವೇಗಕ್ಕೆ ಹೊಂದಿಕೊಂಡು ಯಾವ ಪ್ರದೇಶಕ್ಕೆ ಬೇಕಾದರೂ ಕೊಂಡೊಯ್ಯುವ ಮಹಿಮೆ ಹೊಂದಿದೆ. ರಾಕ್ಷಸ- ದೇವತೆ ಇತ್ಯಾದಿ ಯಾವ ಭೇದವೂ ಇಲ್ಲದೆ ಯಾವತ್ತಿಗೂ ಕೈಕೊಡದೇ ಒಡೆಯನ  ಸೇವೆ ಮಾಡುವ ಹಾಗೂ ಮನೆಯ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಅತ್ಯಾಧುನಿಕ ವಿಮಾನವದು. ಈ ವಿಮಾನ ಶಬ್ದವು ಇನ್ನೊಂದು ಅರ್ಥದಲ್ಲೂ ಬಳಕೆಯಲ್ಲಿ ಇದೆ. ಏಳು ಮಹಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರದ ಗಗನಚುಂಬಿ ಕಟ್ಟಡಗಳನ್ನು ವಿಮಾನ ಎನ್ನುತ್ತಾರೆ‌ ಸಂಸ್ಕೃತ ಸಾಹಿತ್ಯದಲ್ಲಿ. ಮೇದಿನೀ ಕೋಶದಲ್ಲಿ ಈ ಮಾತಿದೆ- *ವಿಮಾನೋ ವ್ಯೋಮಯಾನೇಚ ಸಾರ್ವಭೌಮಗೃಹೇಪಿ ಚ* ಇದರ ಪ್ರಕಾರ ರಾಜರ ಅರಮನೆಯೂ ಅಷ್ಟೆತ್ತರಕ್ಕೆ ಚಾಚಿದ ಕಾರಣ ವಿಮಾನವೇ ಸರಿ. ಹಿಂದೆ ಏಳು ಮಹಡಿ ಮನೆ ಅನ್ನುವುದು ಒಂದು ಅದ್ಭುತ ಹಾಗೂ ಶ್ರೀಮಂತಿಕೆಯ ಸಂಕೇತವಾಗಿತ್ತೋ ಏನೋ?_

ಸಾಹಿತ್ಯದ ಹಲವೆಡೆ ಈ ಪದ ಬಳಕೆಯಲ್ಲಿದೆ.
ಸಪ್ತಶತಿಯ ಈ ಶ್ಲೋಕದಲ್ಲಿ ಹಂಸದಿಂದ ಕೂಡಿರುವ ವಿಮಾನದ ಉಲ್ಲೇಖ ಇದೆ.
*ವಿಮಾನಂ ಹಂಸಸಂಯುಕ್ತಂ ಏತತ್ತಿಷ್ಠತಿ ತೇಂಗಣೇ*

ಕನ್ನಡದ ಸಾಹಿತ್ಯ ನೋಡುವುದಾದರೆ 

*ಲಾಗಾಯ್ತಿನಿಂದೆ ಹೊತ್ತುoಲೋಗರ ಸಾಗಿರ್ಪುದಂತರಿಕ್ಷದಯಾನಂಭೂ ಗೋಲ ವಿಮಾನಂ ಮೇಣ್
ವೇಗಾವೇಗಮದು ಸೂರ್ಯಚಂದ್ರಾಧೀನಂ*

ಉಷಾ ಎಂಬುವರು ಪದ್ಯಪಾನ ಎಂಬ ಅಂತರ್ಜಾಲ ಪುಟದಲ್ಲಿ ವಿಮಾನದ ಬಗೆಗೆ ಸುಂದರವಾಗಿ ಹೆಣೆದಿದ್ದಾರೆ. 

ನಮಗೂ ವಿಮಾನದ ಮಾನ ಬರಲಿ, ನಾವೂ ವಿಮಾನದೆತ್ತರಕ್ಕೆ ಕೀರ್ತಿದಿಗಂತದಲ್ಲಿ ಹಾರೋಣ ಎಂದು ಆಶಿಸುತ್ತಾ 🙏  


ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩