ರಾಮಾಯಣ ೧೪೬
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೪೬ 🏝📖
*ಕೃತ್ವಾಪಿ ತನ್ಮಹಾಪ್ರಾಜ್ಞಃ ಸಭವಿಷ್ಯಂ ಸಹೋತ್ತರಮ್ | ಚಿಂತಯಾಮಾಸ ಕೋನ್ವೇತತ್ಪ್ರಯುಂಜೀಯಾದಿತಿ ಪ್ರಭುಃ||*
_ವಾಲ್ಮೀಕಿ ಮಹರ್ಷಿಗಳು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳುಳ್ಳ, ಐದುನೂರು ಸರ್ಗಗಳಿಂದ ಕೂಡಿದ, ಏಳು ಕಾಂಡರೂಪದ ಮಹಾಕೃತಿಯನ್ನು ರಚಿಸಿ ಹೀಗೆ ಚಿಂತಿಸಿದರು- ಇನ್ನು ಯಾರು ಇದನ್ನು ಚೆನ್ನಾಗಿ ಕಲಿಯುವರು? ಅರಿತು ಪ್ರಚುರಪಡಿಸುವವರು ಯಾರಿರುವರು ಲೋಕದಲ್ಲಿ? ಕೃತಿ ರಚನೆ ಮಾಡಿ ಶಿಷ್ಯರಿಗೆ ಬೋಧಿಸದಿದ್ದರೆ ಅದು ಲೋಕಮುಖದಲ್ಲಿ ಹೇಗೆ ಬೆಳಕು ಕಂಡೀತು. ಹಿಂದೆ ಲಿಪಿಕಾರರು ಹಾಗೂ ಓದುಗರು ಕಡಿಮೆ ಇದ್ದರು. ಲಿಪಿ ಗೊತ್ತಿದ್ದ ಬರಹಗಾರರು ಹಾಗೂ ಬರೆದದ್ದನ್ನು ಓದಲು ಅರಿತವರ ಸಂಖ್ಯೆ ವಿರಳ. ಕೇವಲ ಶ್ರುತವಾಗಿ ಅಂದರೆ ಕಿವಿಯಿಂದ ಕಿವಿಗೆ ಗುರುಮುಖೇನ ಕೇಳಿ ಪ್ರಸಾರವಾಗುತ್ತಿತ್ತು. ವೇದ ಶಾಸ್ತ್ರಗಳ ಪಾಠ ಎಷ್ಟು ಸ್ಪಷ್ಟ ಹಾಗೂ ಶುದ್ಧವಾಗಿತ್ತೆಂದರೆ ಒಂದೊಂದು ಊರಿಗೆ ಒಂದೊಂದು ಶಾಸ್ತ್ರ ವೇದ ಹಿಂದೆಯೂ ಇರಲಿಲ್ಲ, ಇಂದೂ ಇಲ್ಲ. ಪುಸ್ತಕ ಅಥವಾ ತಾಳೆಗರಿಯಲ್ಲಿ ಬರೆದು ಓದುವ ಜನರು ಇಲ್ಲದಿದ್ದಾಗ ಹೇಗೆ ರಾಮನ ಚರಿತೆ ಜನರಿಗೆ ಮಾರ್ಗದರ್ಶಕವಾದೀತು ಎಂಬ ಚಿಂತೆ ಮುನಿಗಳನ್ನು ಬಾಧಿಸಿತು. ಗುರುವಿನ ಲಕ್ಷಣವೇ ಅದು. ತಾನು ಕಲಿತದ್ದನ್ನು, ತಾನು ಅರಿತಿದ್ದನ್ನು ಮತ್ತೊಬ್ಬನಿಗೆ ತಿಳಿಸದೇ ಅವನು ಎಂದಿಗೂ ಸಮಾಧಾನ ಹೊಂದಲಾರ. ಯೋಗ್ಯ ವ್ಯಕ್ತಿ ಸಿಕ್ಕಾಗಲೂ ಗೊತ್ತಿರುವುದನ್ನು ತಿಳಿಸದೇ ಹೊರತು ಅವನು ಗುರುವಾಗಲಾರ ಲಘುವಾಗುವನು._
*ಸ ತು ಮೇಧಾವಿನೌ ದೃಷ್ಟ್ವಾ ವೇದೇಷು ಪರಿನಿಷ್ಠಿತೌ | ವೇದೋಪಬೃಂಹಣಾರ್ಥಾಯ ತಾವಗ್ರಾಹಯತ ಪ್ರಭುಃ||*
_ಆ ಸಮಯದಲ್ಲಿ ಶಿಷ್ಯರಾದ ಲವಕುಶರನ್ನು ಕಂಡು ಮುದಗೊಂಡಿತು ಮುನಿಮಾನಸ. ವೇದ-ವೇದಾಂಗಗಳನ್ನು ಅರಿತ ಈರ್ವರು ವೇದಾರ್ಥವೆನಿಸಿದ ಈ ರಾಮಾಯಣವನ್ನು ಅರಿತು ಹಾಡಬಲ್ಲರು ಎಂಬುದನ್ನು ಕಂಡು ಸಂತೋಷಗೊಂಡರು. ವೇದದ ಸಾರ ಲೋಕದಲ್ಲಿ ಹರಡಿದಾಗ ಜ್ಞಾನವಂತರಾದ ಜನರು ಉದ್ಧಾರದ ದಾರಿ ಹಿಡಿಯುವರು. ಯಾರೊಬ್ಬ ವರ್ಣದವರೂ ಸುಲಭದಲ್ಲಿ ಅರಿಯಬಹುದಾದ ಈ ಮಹಾಕೃತಿಯನ್ನು ಅರಿತರ ವೇದವನ್ನೇ ಅರಿತಂತೆ ಎಂದು ಚಿಂತಿಸಿದರು ಮಹರ್ಷಿಗಳು. ಹಿಂದೆ ಭಾರತೀಯರಿಗೆ ಅದರಲ್ಲೂ ಬ್ರಾಹ್ಮಣೇತರರಿಗೆ ಶಿಕ್ಷಣ ಇರಲಿಲ್ಲ, ಬ್ರಾಹ್ಮಣರು ಅವರನ್ನು ಕಲಿಯಲು ಬಿಡುತ್ತಿರಲಿಲ್ಲ ಇತ್ಯಾದಿ ಸಾವಿರಾರು ಸುಳ್ಳುಗಳನ್ನು ಮೇಲಿಂದ ಮೇಲೆ ಹೇಳಿ ಸತ್ಯವಾಗಿಸುವ ಮಂದಿ ಈ ಸತ್ಯವನ್ನು ಏಕೆ ಓದಿಲ್ಲವೋ? ರಾಮಾಯಣ ಆ ಕಾಲದಲ್ಲೇ ಲೋಕದ ಹೆಚ್ಚಿನ ಜನರನ್ನು ಕುಶಲವರ ಮೂಲಕ ತಲುಪಿತ್ತು. ಆಗ ಪ್ರಚಲಿತವಾಗಿದ್ದ ಭಾಷೆ ಬಹುಶಃ ಎರಡು ಸಂಸ್ಕೃತ ಹಾಗೂ ಸಂಸ್ಕೃತದ ಗ್ರಾಮೀಣ ಅವತರಣಿಕೆ ಪ್ರಾಕೃತ. ಹಳ್ಳಿಯ ಕೃಷಿಕರೂ ಕೂಡ ರಾಮಾಯಣದ ಪಾತ್ರಗಳನ್ನು ಕುರಿತು ಮಾತನಾಡುತ್ತಿದ್ದರು ಎಂದರೆ ಆ ಕಾವ್ಯದ ಶಕ್ತಿ ನಮ್ಮ ಪರಂಪರೆಯ ಶಿಕ್ಷಣದ ರೀತಿಯ ಅರಿವಾಗುತ್ತದೆ._
ಮುಂದುವರಿಯುತ್ತದೆ.....
ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ