ರಾಮಾಯಣ ೮೦
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೦
*ಏಕೋ ಹಿ ಕುರುತೇ ಪಾಪಂ ಕಾಲಪಾಶವಶಂ ಗತಃ ನೀಚೇನಾತ್ಮಾಪಚಾರೇಣ ಕುಲಂ ತೇನ ವಿನಶ್ಯತಿ*
_ರಾಮ ಸುಗ್ರೀವಾದಿಗಳ ಬಳಿ ಹೇಳುವ ಮಾತು. ಕಾಲಪಾಶಕ್ಕೆ ಸಿಕ್ಕಿದ ಒಬ್ಬನು ಪಾಪಕಾರ್ಯ ಮಾಡಿದರೆ ಅವನ ನೀಚತನದಿಂದ ಕುಲವೆಲ್ಲವೂ ನಷ್ಟವಾಗುತ್ತದೆ. ಈ ರಾವಣನು ವಿನಾಶಕಾಲಕ್ಕೆ ಸಿದ್ಧನಾಗಿ ಪರದಾರಾಪಹರಣವೆಂಬ ನೀಚ ಕರ್ಮದಲ್ಲಿ ತೊಡಗಿ ಸಮರ್ಥಿಸುತ್ತಿದ್ದಾನೆ. ಇವನ ದೆಸೆಯಿಂದಾಗಿ ಜೊತೆಗಿರುವ ರಾಕ್ಷಸ ಸಮೂಹವೂ ನಷ್ಟವಾಗುತ್ತಿದೆ. ಹಾಗಾಗಿ ಕುಲದಲ್ಲಿ ಯಾರಾದರೂ ಕುಕೃತ್ಯ ಎಸಗುವುದನ್ನು ಕಂಡರೆ ಒಡನೆ ವಿರೋಧಿಸಬೇಕು ಅಥವಾ ಪ್ರಬಲನಾದರೆ ದೂರ ಸರಿಯಬೇಕು. ಹಾಗೆ ಮಾಡದೆ ತಟಸ್ಥನಾಗಿದ್ದರೆ ನಾವೂ ವಿನಾಶ ಕಾಣಬೇಕಾಗುತ್ತದೆ. ಯಾರದೋ ಪಾಪದ ಫಲ ಅನುಭವಿಸಬೇಕಾಗುತ್ತದೆ. ಪಾಪಿಗಳನ್ನು ಬೆಂಬಲಿಸುವುದು,ಅವರ ಜೊತೆಯಲ್ಲಿರುವುದು, ಅವರನ್ನು ಸಮರ್ಥಿಸುವುದು ಎಂದಿಗೂ ಸಲ್ಲದು, ಅದು ನಮ್ಮನ್ನೇ ಬಲಿ ತೆಗೆದುಕೊಳ್ಳಬಹುದು ಎಂಬ ಎಚ್ಚರಿಕೆ ರಾಮನ ನುಡಿಯಲ್ಲಿದೆ.ಸುಭಾಷಿತದಲ್ಲಿ ಇದನ್ನೇ ಹೇಳಿದ್ದು *ತ್ಯಜೇದೇಕಂ ಕುಲಸ್ಯಾರ್ಥೇ* ಎಂದು. ಕುಲದ ಒಳಿತಿಗಾಗಿ ಒಬ್ಬ ದುಷ್ಟನನ್ನು ಹೊರಗಿಡಬೇಕು. ಕುಲವೇ ದುಷ್ಟತನಕ್ಕೆ ಬೆಂಬಲವಿತ್ತಾಗ ಕುಲವನ್ನೇ ತ್ಯಜಿಸಬೇಕು._
*ತತೋಸ್ತಮಗಮತ್ಸೂರ್ಯಃ ಸಂಧ್ಯಯಾ ಪ್ರತಿರಂಜಿತಃ ಪೂರ್ಣಚಂದ್ರಪ್ರದೀಪ್ತಾ ಚ ಕ್ಷಪಾ ಸಮಭಿವರ್ತತೇ*
_ವಾಲ್ಮೀಕಿ ಮಹರ್ಷಿಗಳು ಗಂಭೀರ ಸನ್ನಿವೇಶಗಳಲ್ಲೂ ಪ್ರಕೃತಿ ರಮಣೀಯತೆಯನ್ನು ಕಾವ್ಯದ ಓದುಗನಿಗೆ ಉಣಬಡಿಸುವುದನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ರಾಮಾದಿಗಳು ಸುವೇಲ ಪರ್ವತ ಏರಿ ಆ ರಾತ್ರಿ ಅಲ್ಲೇ ಕಳೆದರು.ಮರುದಿನ ಯುದ್ಧ ಪ್ರಾರಂಭ. ಆ ಸಂಜೆ ಸಂಧ್ಯೆಯು ಸೂರ್ಯನಿಗೆ ರಕ್ತಚಂದನವನ್ನು ಬಳಿದು ರಮಿಸಿದಳು. ಅವಳ ವಿಲಾಸಕ್ಕೆ ಮರುಳಾದ ರವಿಯು ಅವಳೊಡನೆ ಹೊರಟುಹೋದನು. ಇತ್ತ ಪೂರ್ಣಚಂದ್ರನು ಯಾಮಿನಿಯೊಡನೆ ವಿರಾಜಿಸುತ್ತ ವಿಹರಿಸಲು ಅಂಬರವನ್ನು ಏರಿದನು. ಸಹಜವಾದ ಪ್ರಕ್ರಿಯೆ ಕವಿಗೆ ರಮಣೀಯವಾಗಿ ಕಾಣುತ್ತದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ