ಧಾರ್ಮಿಕ ಆಚರಣೆಗಳು ೨
🌹📝 ಧಾರ್ಮಿಕ ಆಚರಣೆಗಳು 📗🌺
ಭಾಗ-೨
*ಆಸನ*
_*ಆಸ್ಯತೇ ಅಸ್ಮಿನ್ ಇತಿ* ಎಂಬಂತೆ ನಾವು ಯಾವುದರಲ್ಲಿ ಕುಳಿತುಕೊಳ್ಳುವೆವೋ ಅದೇ ಆಸನ. ದೇವರ ಪೂಜೆ,ಧ್ಯಾನ, ಪಾರಾಯಣ, ಯೋಗ, ಸಂಧ್ಯಾವಂದನೆ, ಊಟ ಹೀಗೆ ಪ್ರತಿಯೊಂದು ಕರ್ಮದಲ್ಲಿಯೂ ಆಸನಕ್ಕೆ ತುಂಬಾ ಮಹತ್ವವಿದೆ. ಆಸನಗಳು ಮುಖ್ಯವಾಗಿ ಎರಡು ಬಗೆ. ಶಾರೀರ ಹಾಗೂ ಬಾಹ್ಯ ಎಂದು. ಶರೀರದ ಅವಯವಗಳ ವ್ಯತ್ಯಾಸದಿಂದ ಕುಳಿತುಕೊಳ್ಳುವ ಆಸನಗಳು ಶಾರೀರ. ಕುಳಿತುಕೊಳ್ಳಲು ಬಳಸುವ ಮಣೆ ಇತ್ಯಾದಿಗಳು ಬಾಹ್ಯ._
_ಯೋಗದಲ್ಲಿ ಮೂರನೆಯ ಅಂಗವೇ ಆಸನ. ಯಮ, ನಿಯಮ, ಆಸನ ಹೀಗೆ ಅಷ್ಟಾಂಗಗಳ ನಿರೂಪಣೆ ಸಾಗುತ್ತದೆ. ಅವರ ಪ್ರಕಾರ ಎಂಭತ್ತನಾಲ್ಕು ಲಕ್ಷ ಜೀವಿಗಳಿಗೆ ಅನುಗುಣವಾಗಿ ಅಷ್ಟೇ ಸಂಖ್ಯೆಯ ಆಸನಗಳಿವೆ. ಅದರಲ್ಲಿ ಪ್ರಮುಖವಾಗಿ ಸಾಧನೆಗೆ ಅನುಕೂಲವಾಗುವ ಆಸನಗಳು ಅರವತ್ತನಾಲ್ಕು. ಶೀರ್ಷಾಸನ, ಭುಜಂಗಾಸನ ಇತ್ಯಾದಿ._
_ಶಾರೀರ ಆಸನಗಳು ನಮ್ಮ ದಿನಬಳಕೆಯಲ್ಲಿ ಅಂದರೆ ಪೂಜಾದಿಗಳಲ್ಲಿ ಐದು ಬಗೆ. *ಪದ್ಮ, ಸ್ವಸ್ತಿಕ, ಭದ್ರ, ವಜ್ರ, ವೀರ* ಪದ್ಮಾಸನವು ಎರಡು ಕಾಲುಗಳನ್ನು ಎತ್ತಿ ತೊಡೆಯ ಮೇಲೆ ಇಟ್ಟು ನೆಟ್ಟಗೆ ಕುಳಿತುಕೊಳ್ಳುವುದು. ಸ್ವಸ್ತಿಕ ಎಂದರೆ ಗುಣಿಸು ಆಕಾರದಲ್ಲಿ ನಮ್ಮ ಕಾಲುಗಳನ್ನು ನೆಲದ ಮೇಲೆ ಪೃಷ್ಠದ ಅಡಿಗೆ ಬರುವಂತೆ ಇಟ್ಟುಕೊಳ್ಳುವುದು. ಈ ಆಸನ ಎಲ್ಲರೂ ಸಾಮಾನ್ಯ ಊಟ ಪೂಜೆ ಹೀಗೆ ಎಲ್ಲೆಡೆ ಅನುಸರಿಸುತ್ತಾರೆ. ದೇಹ ಮಾತನ್ನು ಕೇಳದಿದ್ದಾಗ ಮಾತ್ರ ಈ ಆಸನವೂ ಸಾಧ್ಯವಾಗುವುದಿಲ್ಲ._
_ಮೂರನೆಯದು ಭದ್ರ. ಎರಡು ಕಾಲುಗಳ ತುದಿಯನ್ನು ವೃಷಣಗಳ ಹತ್ತಿರ ಬರುವಂತೆ ಜೋಡಿಸಿ ಅದರ ಮೇಲೆ ಕೈಗಳನ್ನು ಇಟ್ಟರೆ ಅದು ಭದ್ರಾಸನ. ಅಯ್ಯಪ್ಪನ ಮೂರ್ತಿಗೆ ಈ ಆಸನ ಸ್ವಲ್ಪ ಮಟ್ಟಿಗೆ ಹೋಲುತ್ತದೆ. ನಾಲ್ಕನೆಯ ಆಸನ ವಜ್ರಾಸನ. ಎರಡು ಕಾಲುಗಳನ್ನು ಹಿಂದಕ್ಕೆ ಬರುವಂತೆ ಜೋಡಿಸಿ ತೊಡೆಗಳ ಮೇಲೆ ಕೈಗಳನ್ನು ಧ್ಯಾನ ಮುದ್ರೆಯಲ್ಲಿ ಇಟ್ಟು ಕುಳಿತುಕೊಳ್ಳುವುದು. ಕೊನೆಯದಾಗಿ ವೀರಾಸನ. ಎಡ ಅಥವಾ ಬಲ ಗಾಲನ್ನು ಎತ್ತಿ ಒಂದು ತೊಡೆಯ ಮೇಲೆ ಇಟ್ಟು ಕುಳಿತುಕೊಳ್ಳುವುದು. ಬ್ರಹ್ಮಯಜ್ಞಕ್ಕೆ ವಿಶೇಷವಾಗಿ ಈ ಆಸನ ಅವಶ್ಯಕ._
*ನ ಯಥೇಷ್ಟಾಸನೋ ಭೂಯಾತ್ ಪೂಜಾಕರ್ಮಣಿ ಸಾಧಕಃ ಕಾಷ್ಠಾದಿಕಾಸನಂ ಕುರ್ಯಾತ್ ಮಿತಮೇವ ಸದಾ ಬುಧಃ*
_ಹೇಗಾದರೂ ಕೂತು ಮಾಡಿದರಾಯಿತು ಎಂದರೆ ಶಾಸ್ತ್ರ ಅದನ್ನು ಒಪ್ಪುವುದಿಲ್ಲ. ಇಷ್ಟಬಂದಂತೆ ಯಾವ ಕಾರ್ಯವನ್ನು ಮಾಡಬಾರದು. ಎಲ್ಲಾ ವಸ್ತುಗಳನ್ನು ಆಸನವಾಗಿ ಬಳಸಲು ಸಾಧ್ಯವಿಲ್ಲ. ಮರ, ದರ್ಭೆ, ಲೋಹ ಮುಂತಾದವನ್ನು ಮಾತ್ರ ಬಳಸಬೇಕು._
_ಗೀತೆಯಲ್ಲಿ ಕೃಷ್ಣ ಹೇಳಿದಂತೆ *ಶುಚೌ ದೇಶೇ ಪ್ರತಿಷ್ಠಾಪ್ಯ ಸ್ಥಿರಮಾಸನ ಮಾತ್ಮನಃ ನಾತ್ಯುಚ್ಛ್ರಿತಂ ನಾತಿನೀಚಂ ಚೈಲಾಜಿನಕುಶೋತ್ತರಮ್ ಉಪವಿಶ್ಯಾಸನೇ ಯುಂಜ್ಯಾತ್ ಯೋಗಮಾತ್ಮವಿಶುದ್ಧಯೇ* ಎಂದು ಆಸನವು ಹೀಗೆ ಇರಬೇಕು. ಸ್ವಚ್ಛವಾದ ಪ್ರದೇಶದಲ್ಲಿ ಕುಳಿತು ಮನಸ್ಸನ್ನು ಏಕಾಗ್ರಗೊಳಿಸಿ ಧ್ಯಾನಾದಿಗಳನ್ನು ಮಾಡಬೇಕು. ಆಸನ ಹೆಚ್ಚು ಎತ್ತರವೂ ಹೆಚ್ಚು ತಗ್ಗೂ ಇರಬಾರದು. ಮನಸ್ಸಿನ ಏಕಾಗ್ರತೆಗೆ, ಮಾಡುವ ಕೆಲಸ ಯಶಸ್ಸು ಕಾಣಲು, ದೇಹ ಸಹಕರಿಸಲು ನಿಶ್ಚಿತವಾದ ಆಸನ ಅತ್ಯಂತ ಅವಶ್ಯಕ._
_*ಕಾಷ್ಠಂ ಚತುರ್ವಿಂಶತ್ಯಂಗುಲೇನ ದೀರ್ಘಂ ವಾ ಷೋಡಶ ವಾ ಷಟ್* ಹೀಗೆ ಮರದ ಆಸನ ತಯಾರಿಸುವಾಗ ೨೪ ಅಂಗುಲ ಅಳತೆಯದ್ದಾದರೆ ಶ್ರೇಷ್ಠ. ಅದಿಲ್ಲದಿದ್ದರೆ ೧೬ ಅಥವಾ ಕಡೇ ಪಕ್ಷ ಆರು ಅಂಗುಲ. ಇದಕ್ಕಿಂತ ಚಿಕ್ಕದಾದ ಮಣೆಯಲ್ಲಿ ಮಗುವನ್ನು ಕುಳ್ಳಿರುಸುವುದು ಸ್ವಲ್ಪ ಕಷ್ಟವಾದೀತು._
*ವಾಸ್ತ್ರಂ ದ್ವಿಹಸ್ತಾನ್ನೋ ದೀರ್ಘಂ ಸಾರ್ಧಹಸ್ತಾನ್ನವಿಸ್ತೃತಮ್*
_ಬಟ್ಟೆಯ ಆಸನ ಎರಡು ಕೈಗಳಿಗಿಂತ ಉದ್ದ ಮೀರಬಾರದು. ಅರ್ಧ ಕೈಗಿಂತ ಅಗಲ ಮೀರಬಾರದು. ಹೆಚ್ಚು ಉದ್ದ ಇದ್ದಷ್ಟು ವಸ್ತ್ರದ ಆಸನ ನಿದ್ದೆಗೆ ಸಹಕಾರಿ ಹೊರತು ಸಾಧನೆಗಲ್ಲ. ಚರ್ಮದ ಆಸನ ನಮಗೆ ಇಷ್ಟ ಬಂದ ಹಾಗೆ ಮಾಡಬಹುದೆನ್ನುವುದು ಶಾಸ್ತ್ರ. ಆದರೂ ಅಲ್ಲೂ ಒಂದು ಮಿತಿ ಅವಶ್ಯಕ._
*ಐಣಂ ಚಾರ್ಮಣಂ ವಸ್ತ್ರಂ ತೈಜಸಂಚ ಚತುಷ್ಟಯಮ್*
_ಆಸನಗಳು ಮರ, ಚರ್ಮ, ಬಟ್ಟೆ,ಲೋಹ, ದರ್ಭೆ ಹೀಗೆ ಐದು ಬಗೆ._ *ಕಾಂಬಲಂ ಚಾರ್ಮಣಂ ಚೈಲಂ ಮಹಾಮಾಯಾ ಪ್ರಪೂಜನೇ ವಿಷ್ಣೋಶ್ಚಾಪಿ ಕುಶಾಸನಮ್*
_ಕಂಬಳಿಯದ್ದು,ಚರ್ಮಾಸನ, ವಸ್ತ್ರಾಸನ ದೇವಿಯ ಪೂಜೆಗೆ ಶ್ರೇಷ್ಠ. ವಿಷ್ಣುವಿನ ಪೂಜೆಗೆ ದರ್ಭಾಸನ ಶ್ರೇಷ್ಠವಾದುದು._
*ದಾರುಭೂಮಿಸಮಂ ಪ್ರೋಕ್ತಂ ಅಶ್ಮಾಪಿ ಸರ್ವಕರ್ಮಣಿ* _ಮರ ಹಾಗೂ ನೆಲಕ್ಕೆ ಸಮನಾದ ಅಂದರೆ ಸಮತಟ್ಟಾದ ಕಲ್ಲನ್ನೂ ಆಸನವನ್ನಾಗಿ ಮಾಡಿಕೊಳ್ಳಬಹುದು._ *ನ ಪತ್ರಮಾಸನಂ ಕುರ್ಯಾತ್ ಕದಾಚಿದಪಿ ಪೂಜನೇ*_ಪತ್ರವನ್ನು ಎಂದಿಗೂ ಆಸನದಂತೆ ಉಪಯೋಗಿಸಬಾರದು. ಪತ್ರ, ಕಡ್ಡಿ, ಟೊಂಗೆ ಇತ್ಯಾದಿ ಆಸನಗಳಾಗುವುದಿಲ್ಲ._ *ನ ಪ್ರಾಣ್ಯಂಗಸಸಮುದ್ಭೂತಮಾಸ್ಥಿಜಂ ದ್ವಿರದಾದೃತೇ* _ಆನೆಯ ದಂತದಿಂದ ಆಸನ ಮಾಡಬಹುದು. ಬೇರೆ ಪ್ರಾಣಿಗಳ ಚರ್ಮ ಬಿಟ್ಟು ಮೂಳೆ ಕೋಡು ಇತ್ಯಾದಿಗಳಿಂದ ಆಸನ ಮಾಡಿಕೊಳ್ಳಬಾರದು._
*ತೋಯೇ ಶಿಲಾಮಯಂ ಕುರ್ಯಾತ್ ಆಸನಂ ಕೌಶಲೇವ ವಾ ದಾರವಂ ತೈಜಸಂ ವಾಪಿ ನಾನ್ಯದಾಸನಮಾಚರೇತ್*_ನೀರಲ್ಲಿ ಇದ್ದಾಗಲೂ ಮರ, ಲೋಹ, ದರ್ಭಾಸನ ಅಥವಾ ಕಲ್ಲನ್ನೇ ಆಸನವನ್ನಾಗಿ ಬಳಸಬೇಕು. ಉಳಿದ ಆಸನ ನೀರಲ್ಲಿ ಬಳಸಲು ಅಯೋಗ್ಯ. ಹಾಳಾಗುವುದೆಂಬ ಅಭಿಪ್ರಾಯವೂ ಇರಬಹುದು._
*ಆಸನಂ ವಸನಂ ಶಯ್ಯಾ ದಾರಾಮನ್ನಂ ಕಮಂಡಲುಃ ಆತ್ಮನಸ್ತು ಶುಚಿ ಪ್ರೋಕ್ತಂ ನ ಪರೇಷಾಂ ಕದಾಚನ*_ಎಂಬಂತೆ ನಾವು ಕುಳಿತುಕೊಳ್ಳುವ ಆಸನ, ಉಟ್ಟುಕೊಳ್ಳುವ ವಸ್ತ್ರ, ಮಲಗುವ ಹಾಸಿಗೆ, ಪತ್ನಿ, ಉಣ್ಣುತ್ತಿರುವ ಅನ್ನ, ಉಪಯೋಗಿಸುವ ಪೂಜಾ ಪಾತ್ರಗಳು ನಮ್ಮ ಮಟ್ಟಿಗೆ ಶುದ್ಧವಾಗಿರುತ್ತವೆ. ಉಳಿದವರಿಗೆ ಅಶುದ್ಧ. ಹಾಗಾಗಿ ಆಸನವೇ ಮೊದಲಾದಂತೆ ಪ್ರತ್ಯೇಕ ಬಳಕೆ ವಿಹಿತ. ಉಂಡ ಅನ್ನ ಎಂಜಲಾಗುವುದು. ಉಟ್ಟ ಬಟ್ಟೆಗೆ ಪ್ರತ್ಯೇಕ ವ್ಯಕ್ತಿಯ ವಾಸನೆ ಇರುತ್ತದೆ. ಹಾಗಾಗಿ ಅನಿವಾರ್ಯ ಸಮಯ ಬಿಟ್ಟು ಕೆಲವನ್ನು ಉಪಯೋಗಿಸಬಹುದೇ ಹೊರತು ಕೆಲವು ( ಪತ್ನಿ, ಅನ್ನ ) ಎಂದಿಗೂ ಸಲ್ಲದು._
_ಹೀಗೆ ಪ್ರತಿಯೊಂದು ಕಾರ್ಯದಲ್ಲೂ ಉಚಿತ ಆಸನದ ಬಳಕೆಯಿಂದ ನಾವು ಯೋಗ್ಯ ಫಲವನ್ನು ಪಡೆಯಬಹುದು. ಮಾಡುವ ಯಾವುದೇ ಕೆಲಸ ಅರಿತು ಶಾಸ್ತ್ರೋಕ್ತವಾಗಿ ಮಾಡಿದಾಗ ನಷ್ಟ ಏನೂ ಆಗಲಾರದು. ಲಾಭ ಎದುರಿಗೆ ಕೆಲವೊಮ್ಮೆ ತೋರದಿದ್ದರೂ ಪರೋಕ್ಷವಾಗಿ ತೋರುತ್ತದೆ._
http://shreenidhiabhyankar.blogspot.in/ ಎಲ್ಲಾ ಲೇಖನಗಳು ಇಲ್ಲೇ ಲಭ್ಯವಿದೆ. ಆಕರ ಗ್ರಂಥಗಳ ಲೇಖಕರಿಗೆ ನಮೋನಮಃ.
ಫಾರ್ವರ್ಡ್ ಮಾಡುವವರು ಹೆಸರನ್ನು ತೆಗೆದು ಕಳಿಸಬೇಡಿ. ಹಾಗೆಯೇ ಕಳಿಸಿ. ಮೊಬೈಲಿನಲ್ಲಿ ಟೈಪ್ ಮಾಡಿದ್ದಕ್ಕಾದರೂ ಗೌರವಿಸಿ.👏
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ