ರಾಮಾಯಣ ೭೭

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೭

*ವಿವರ್ಧಯತಿ ಪಕ್ಷಂ ಚ ಸುರಾಣಾಂ ಸುರಭಾವನಃ ವಿಷಯೇಷು ಪ್ರಸಕ್ತೇನ ಯತ್ಕಿಂಚಿತ್ಕಾರಿಣಾ ತ್ವಯಾ*

_ಮಾಲ್ಯವಂತ ಮೊಮ್ಮಗ ರಾವಣನಿಗೆ ಮತ್ತೆ ಉಪದೇಶಿಸುತ್ತಿದ್ದಾನೆ. ರಾವಣ, ನಿನ್ನ ಅಧರ್ಮವು ದೇವತೆಗಳಿಗೆ ಅನುಕೂಲಕರವಾಗಿ ಅವರ ಪಕ್ಷದ ಶಕ್ತಿಯನ್ನು ಹೆಚ್ಚಿಸಿದೆ. ವಿಷಯಸುಖಗಳಲ್ಲಿ ಆಸಕ್ತನಾದ ನೀನು ಅನೇಕ ತೇಜಸ್ವಿ ಋಷಿಗಳಿಗೂ ಅಸಮಾಧಾನ ಉಂಟುಮಾಡಿದ್ದಿ. ಅವರ ತಪೋಮಹಿಮೆ ತುಂಬಾ ತೀಕ್ಷ್ಣವಾದುದು. ಅಧರ್ಮವನ್ನು ಆಶ್ರಯಿಸಿದರೆ ನಾವು ಒಮ್ಮೆ ಆರ್ಥಿಕವಾಗಿಯೋ ಸಾಮಾಜಿಕವಾಗಿಯೋ ಬೆಳೆಯಬಹುದೇ ಹೊರತು ಶಾಶ್ವತವಾಗಿ ಅಲ್ಲ. ಇದು ನಮ್ಮ ಶತ್ರುಗಳ ಶಕ್ತಿಯನ್ನು ಹೆಚ್ಚಿಸಲೂ ಸಹಕಾರಿ ಆಗುತ್ತದೆ. ಯಾವೊಂದು ಆಪಾದನೆ ಇಲ್ಲದವನ ಬಗೆಗೆ ಟೀಕೆ ಮಾಡಲು ವಿಷಯವೇ ಇರುವುದಿಲ್ಲ. ಅದೇ ಸಣ್ಣದಾದರೂ ಮಾಡಿದ ಎಡವಟ್ಟು ಯಾವತ್ತಿಗೂ ಬಾಧಿಸುತ್ತದೆ. ವಿಷಯಗಳಲ್ಲಿ ಅಂದರೆ ಇಂದ್ರಿಯಕ್ಕೆ ಅತಿಯಾದ ಸುಖ ಕೊಡುವ ಕಾರ್ಯ ಯಾವಾಗಲೂ ಬಯಸುವುದು ಒಳ್ಳೆಯದಲ್ಲ ಎಂಬ ಪಾಠವನ್ನೂ ರಾವಣನ ಅವಸ್ಥೆಯಿಂದ ಕಲಿಯಬಹುದು._

*ದೇವದಾನವ ಯಕ್ಷೇಭ್ಯೋ ಗೃಹೀತಶ್ಚ ವರಸ್ತ್ವಯಾ ಮಾನುಷಾ ವಾನರಾ ಯಕ್ಷಾ ಗೋಲಾಂಗೂಲಾ ಮಹಾಬಲಾಃ ಬಲವಂತ ಇಹಾಗಮ್ಯ ಗರ್ಜಂತಿ ದೃಢವಿಕ್ರಮಾಃ*

_ರಾವಣ ನೀನು ದೇವ ದಾನವ ಯಕ್ಷಾದಿಗಳಿಂದ ಮರಣವಿಲ್ಲದಂತೆ ವರ ಪಡೆದಿರುವುದು ಹೌದು. ಆದರೆ ಈಗ ದಂಡೆತ್ತಿ ಬಂದಿರುವವರು ಮನುಷ್ಯರು ವಾನರರು ಸಿಂಗಳೀಕಗಳು ಭಲ್ಲೂಕಗಳು. ಹಾಗಾಗಿ ಒಮ್ಮೆ ಯೋಚಿಸು. ಋಷಿಗಳ ತೀವ್ರವಾದ ತಪಸ್ಸು ರಾಕ್ಷಸರ ತೇಜಸ್ಸನ್ನು ಹೀರುತ್ತಿದೆ. ಎಲ್ಲೆಡೆ ದುಃಶಕುನಗಳು ಕಂಡುಬರುತ್ತಿವೆ. ರಾವಣ, ಋಷಿಗಳು ತಪಸ್ಸು ಮಾಡಿ ಪರಿಶುದ್ಧರಾದವರು. ಧರ್ಮಪ್ರಸಾರದಲ್ಲಿ ನಿರತರು. ಧ್ಯಾನಯಜ್ಞದಲ್ಲಿ ಸದಾ ಪ್ರಸಕ್ತರು. ಅವರ ಅಗ್ನಿಹೋತ್ರದ ಹೊಗೆ ದಿಕ್ಕುಗಳಲ್ಲಿ ವ್ಯಾಪಿಸಿ ದುಷ್ಟರನ್ನು ಕೊನೆಗೊಳಿಸುತ್ತದೆ. ನೀನಾದರೋ ಋಷಿಗಳಿಗೆ ನಾನಾವಿಧದಲ್ಲಿ ತೊಂದರೆ ಕೊಟ್ಟವನು. ಅವರ ತಪವು ನಿನ್ನ ಶಕ್ತಿಯನ್ನು ಈಗಾಗಲೇ ಕುಂಠಿತಗೊಳಿಸಿದೆ. ಹಾಗಾಗಿ ನಿನಗೀಗ ಸಂಧಿಯೇ ಲೇಸೆಂದನು ಮಾಲ್ಯವಂತ. ಇಲ್ಲಿ ಋಷಿಗಳ ಪರಿಚಯ ಚೆನ್ನಾಗಿ ಕೊಟ್ಟಿದ್ದಾರೆ. ನಾವು ಹೊಗಳುವ ಭರದಲ್ಲಿ ಅಥವಾ ಅತಿಯಾದ ಅಭಿಮಾನ,ಗೌರವದಿಂದ ಯಾರು ಯಾರನ್ನೋ ಋಷಿಗಳೆನ್ನುತ್ತೇವೆ. ಆದರೆ ಋಷಿಗಳಾಗಲು ಚಿತ್ತ ಶುದ್ಧತೆ, ಧ್ಯಾನಮಗ್ನತೆ, ಧರ್ಮಪ್ರಸಾರ ಕಾರ್ಯ ಈ ಮೂರು ಮುಖ್ಯವಾಗಿರಬೇಕು. ಎಷ್ಟು ಆಚಾರ ಇದ್ದರೂ ಚಿತ್ತ ಸ್ವಚ್ಛವಾಗದಿದ್ದರೆ ಆಚಾರದ ನೆಲೆಯೇ ಕುಸಿದು ಹೋಗುತ್ತದೆ. ಉಳಿದ ಯಜ್ಞಗಳ ಪರಿಣಾಮ ಅಲ್ಪ ಪ್ರಭಾವ ಕಂಡುಬಂದರೆ ಧ್ಯಾನದ ಜಪದ ಪ್ರಭಾವ ಮಹತ್ತರವಾದದ್ದು. ಇನ್ನು ಎಲ್ಲ ತಿಳಿದಿದ್ದೂ ಧರ್ಮವನ್ನು ಯಾರಿಗೂ ಹೇಳದೇ ಉಳಿದರೆ ಅದೂ ವ್ಯರ್ಥ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು