ಮಹಾಭಾರತ ೩೦

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೦

*ಕೀರ್ತಿರಕ್ಷಣಮಾತಿಷ್ಠ ಕೀರ್ತಿರ್ಹಿ ಪರಮಂ ಬಲಮ್ ನಷ್ಟಕೀರ್ತೇರ್ಮನುಷ್ಯಸ್ಯ ಜೀವಿತಂ ಹ್ಯಫಲಂ ಸ್ಮೃತಮ್*

_ಧೃತರಾಷ್ಟ್ರನ ಬಳಿ ಭೀಷ್ಮ ಹೇಳುವ ಮಾತು. ಪಾಂಡವರು ರಾಜ್ಯದಲ್ಲಿ ಪಾಲು ಪಡೆಯಲು ಯೋಗ್ಯರಿದ್ದಾರೆ. ಅವರಿಗೆ ಯುದ್ಧವಿಲ್ಲದೆ ಕೊಟ್ಟುಬಿಡು. ಇದನ್ನು ಕೊಡದೆ ನಾವು ಬೇರೆನನ್ನಾದರೂ ಮಾಡಿದೆವೆಂದರೆ ಅಪಕೀರ್ತಿ ಉಂಟಾಗುವುದು. ಏಕೆಂದರೆ ಲೋಕದಲ್ಲಿ ಕೀರ್ತಿಯೇ ಪರಮ ಬಲ. ಕೀರ್ತಿಯನ್ನು ರಕ್ಷಿಸಿಕೊ. ಕೀರ್ತಿಯನ್ನು ಕಳೆದುಕೊಂಡ ಮನುಷ್ಯನ ಜೀವನ ನಿಷ್ಫಲವಾದುದು. ನೀನು ರಾಜ್ಯ ಕೊಡದೆ ಅಪಕೀರ್ತಿಗೆ ಭಾಜನನಾಗಬೇಡ. ನಾವೂ ಕೀರ್ತಿ ಸಂಪಾದಿಸದಿದ್ದರೂ ಅಪಕೀರ್ತಿಯನ್ನಂತೂ ಎಂದಿಗೂ ತಂದುಕೊಳ್ಳಬಾರದು. ನ್ಯಾಯ ಮಾರ್ಗವನ್ನು ತೊರೆದಾಗ ಇಂದಲ್ಲಾ ನಾಳೆ ಕೀರ್ತಿಯೆಂಬ ಪರದೆ ಕಳಚುವುದು ಖಂಡಿತ. ಕೃತಿಚೌರ್ಯ, ಧನಚೌರ್ಯ, ಮಾನಹರಣ ಮೊದಲಾದ ಕರ್ಮಗಳಿಂದ ದೂರ ಉಳಿಯುವುದೇ ಶ್ರೇಯಸ್ಕರ. ಒಂದು ಸಲ ಹೆಸರು ಹಾಳಾಯಿತೆಂದರೆ ಮತ್ತೆ ಸರಿ ಮಾಡುವುದು ಬಹಳ ಪ್ರಯಾಸದ ಕೆಲಸ.ಧೃತರಾಷ್ಟ್ರನ ದೃಷ್ಟಿಯಂತೆ._

*ನ ಚಾಪಿ ತೇಷಾಂ ವೀರಾಣಾಂ ಜೀವತಾಂ ಕುರುನಂದನ ಪಿತ್ರ್ಯೋಂಶಃ ಶಕ್ಯ ಆದಾತುಮಪಿ ವಜ್ರಭೃತಾ ಸ್ವಯಮ್*

_ಆ ವೀರರು ಬದುಕಿ ಉಳಿದಿರುವಾಗ ಅವರ ಪಿತ್ರಾರ್ಜಿತ ಭಾಗವನ್ನು ಕಿತ್ತುಕೊಳ್ಳಲು ಸಾಕ್ಷಾತ್ ವಜ್ರಧಾರಿ ಇಂದ್ರನಿಗೂ ಸಾಧ್ಯವಿಲ್ಲ. ( ಪಾಂಡು ಜೈತ್ರಯಾತ್ರೆ ಮಾಡಿ ಸಾಕಷ್ಟು ಹೊಸ ಭೂ ಭಾಗಗಳನ್ನು ಸಂಪಾದಿಸಿದ್ದನು ಹಾಗಾಗಿ ಪಿತ್ರಾರ್ಜಿತವು ಸಾಕ್ಷಾತ್ತಾಗಿಯೂ ಹೌದು. ಈಗಿನ ಕಾನೂನಿನಂತೆ.) ಅವರೊಡನೆ ಹೋರಾಡಿಯೋ ಅವರನ್ನು ವಂಚಿಸಿಯೋ ಸುಮ್ಮನಿರಿಸಬಹುದೆಂದು ಎಣಿಸಬೇಡ.ದೇವತೆಗಳಿಗೂ ಮಿಗಿಲಾದ ಪರಾಕ್ರಮ ಅವರಲ್ಲಿದೆ._

*ತೇ ಹಿ ಸರ್ವೇ ಸ್ಥಿತಾ ಧರ್ಮೇ ಸರ್ವೇ ಚೈವೈಕಚೇತಸಃ ಅಧರ್ಮೇಣ ನಿರಸ್ತಾಶ್ಚ ತುಲ್ಯೇ ರಾಜ್ಯೇ ವಿಶೇಷತಃ*

_ಅವರೆಲ್ಲರೂ ಧರ್ಮದಲ್ಲಿಯೇ ಸದಾ ರತರು. ಹಾಗಾಗಿಯೇ ಅವರ ಶ್ರೇಯಸ್ಸು ನಿಶ್ಚಿತವೆಂದು ಹೇಳುತ್ತಿದ್ದೇನೆ. ಎಲ್ಲರೂ ಒಂದೇ ಮನಸ್ಸಿನವರು. ಅವರ ಯೋಜನೆಗಳಲ್ಲಿ ಭೇದವು ಕಂಡುಬರಲು ಸಾಧ್ಯವಿಲ್ಲ. ನಿನ್ನ ಮಕ್ಕಳಿಗೆ ಸಮಾನ ಹಕ್ಕಿರುವ ಅವರನ್ನು ಅಧರ್ಮದಿಂದ ಹೊರಗಟ್ಟಲಾಗಿದೆ. ಹಾಗಾಗಿ ನೀನು ಧರ್ಮ ಆಚರಿಸುವುದಾದರೆ ನನಗೆ ಪ್ರಿಯ ಮಾಡಬೇಕೆಂದಿದ್ದರೆ ಅವರಿಗೆ ಅರ್ಧ ರಾಜ್ಯ ಕೂಡಲೇ ಕೊಡು. ನಮ್ಮ ಪರವಾಗಿ ಯಾರಾದರೂ ಮಾತನಾಡಬೇಕೆಂದರೆ ಧರ್ಮ ಹಾಗೂ ಒಗ್ಗಟ್ಟು ಇರಬೇಕಾದುದು ಎಂದಿಗೂ ಅವಶ್ಯ ಎನ್ನುವ ಅಂಶ ಭೀಷ್ಮನ ಪ್ರತಿಪಾದನೆಯಲ್ಲಿ ಎದ್ದು ಕಾಣುತ್ತದೆ. ಇಲ್ಲಿ ಭೀಷ್ಮ ಆದೇಶ ಕೊಡುವ ಬದಲು ನಿವೇದಿಸಿದ್ದೇ ಧೃತರಾಷ್ಟ್ರನು ಮಕ್ಕಳ ಪರವಾಗಿ ನಿಲ್ಲಲು ಕಾರಣವಾಯಿತೇನೋ!_

ಮುಂದುವರಿಯುವುದು

http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು