ರಾಮಾಯಣ ೮೩
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೩
*ಇದಾನೀಂ ಮಾ ಕೃಥಾ ವೀರ ಏವಂವಿಧಮಚಿಂತಿತಮ್ ತ್ವಯಿ ಕಿಂಚಿತ್ಸಮಾಪನ್ನೇ ಕಿಂ ಕಾರ್ಯಂ ಸೀತಯಾ ಮಮ*
_ರಾಮನು ಮಿತ್ರರಿಗೆ ಎಷ್ಟು ಗೌರವ ನೀಡುತ್ತಿದ್ದ, ಗೆಳೆತನದ ಪ್ರೀತಿ ಹೇಗೆ ತೋರುತ್ತಿದ್ದ ಎನ್ನುವುದಕ್ಕೆ ಈ ಮಾತು ಸಾಕ್ಷಿ. ಸುಗ್ರೀವ, ಎಂತಹ ಸಾಹಸದ ಕೆಲಸ ಮಾಡಿದೆ, ನೀನು ವೀರನೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ನನಗಾಗಲೀ ವಿಭೀಷಣನಿಗಾಗಲೀ ಮಾಹಿತಿ ನೀಡದೇ ಹೀಗೆ ಹೋಗಿ ಗಾಯಗಳನ್ನು ಮಾಡಿಕೊಂಡು ಬಂದಿರುವೆಯಲ್ಲ. ನಿನಗೇನಾದರೂ ಆದರೆ ನಮ್ಮ ಪರಿಸ್ಥಿತಿಯನ್ನು ಯೋಚಿಸಿರುವೆಯಾ? ನನ್ನನ್ನೂ, ವಿಭೀಷಣನನ್ನೂ, ಈ ಮಹಾ ಸೇನೆಯನ್ನೂ ಸಂಶಯಕ್ಕೊಳಪಡಿಸಿ ಈ ಅಪಾಯಕಾರಿ ಕಾರ್ಯದಲ್ಲಿ ಏಕೆ ತೊಡಗಿದೆ? ಇನ್ನೊಮ್ಮೆ ಇಂತಹ ಕಾರ್ಯದಲ್ಲಿ ತೊಡಗದಿರು. ಗೆಳೆಯ, ಒಂದು ವೇಳೆ ನಿನಗೇನಾದರೂ ಆದರೆ ಏನು ಗತಿ? ಆಗ ನನಗೆ ಸೀತೆಯಿಂದ ಆಗಬೇಕಾದ್ದೇನು? ನನ್ನ ಸ್ವಾರ್ಥಕ್ಕಾಗಿ ನಿನ್ನಂತಹ ಒಬ್ಬ ಒಳ್ಳೆಯ ಮಿತ್ರನನ್ನು ಕಳೆದುಕೊಂಡು ಸೀತೆಯನ್ನೂ ಪಡೆದೂ ನಾನು ದುಃಖಿಸಬೇಕಾಗುತ್ತದೆ. ಭರತ, ಲಕ್ಷ್ಮಣರಿಂದ ನನಗೆ ಆಗಬೇಕಾದ್ದೇನು? *ಸ್ವಶರೀರೇಣ ವಾ ಪುನಃ* ಅದಿರಲಿ, ನನಗೆ ಈ ದೇಹದಿಂದಾದರೂ ಏನು ಪ್ರಯೋಜನ?_
*ಭರತೇ ರಾಜ್ಯಮಾವೇಶ್ಯ ತ್ಯಕ್ಷ್ಯೇ ದೇಹಂ ಮಹಾಬಲ*
_ಒಂದು ವೇಳೆ ನೀನು ಸುಖವಾಗಿ ಬರದಿದ್ದರೆ ಆ ರಾವಣನನ್ನು ಕೊಂದು ವಿಭೀಷಣನಿಗೆ ಲಂಕೆಯಲ್ಲಿ ಪಟ್ಟಕಟ್ಟಿ, ಭರತನಿಗೆ ಕೋಸಲರಾಜ್ಯವನ್ನು ವಹಿಸಿ, ಈ ದೇಹವನ್ನು ತ್ಯಜಿಸಬೇಕೆಂದಿದ್ದೆ. ರಾಮನು ತನ್ನನ್ನು ನಂಬಿದವರಿಗೆ ತನ್ನ ಜೊತೆಗಿದ್ದವರ ಮೇಲೆ ತೋರುತ್ತಿದ್ದ ಪ್ರೀತಿಯ ರೀತಿ ಇದು. ನಂಬಿ ಕೆಟ್ಟವರಿಲ್ಲ ಎಂಬಂತೆ ದೇವರನ್ನು ಗಟ್ಟಿಯಾದ ಮನಸ್ಸಿನಿಂದ ನಂಬಿದರೆ ನಿಶ್ಚಯವಾಗಿ ಪೊರೆಯುವನೆಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. ನಾಯಕನಾದವನು ತನ್ನ ಜೊತೆಗಾರರನ್ನು ನಡೆಸಿಕೊಳ್ಳಬೇಕಾದ ರೀತಿ ಇದು. ರಾಮನ ನಾಯಕತ್ವ ಎಲ್ಲಾ ನಾಯಕರಿಗೆ ಉತ್ತಮ ಮಾದರಿ._
*ಎಲ್ಲರಿಗೂ ರಾಮನವಮಿಯ ಶುಭ ಆಶಯಗಳು. ರಾಮನ ನೆನಪು ನಿರಂತರವಾಗಿರಲಿ*
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ