ಮಹಾಭಾರತ ೩೩

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೩

*ನ ತದ್ಧ್ಯಾಯತಿ ಕೌಂತೇಯೋ  ಧರ್ಮಪುತ್ರೋ ಯುಧಿಷ್ಠಿರಃ ಯದೇಷಾಂ ಪುರುಷವ್ಯಾಘ್ರಃ ಶ್ರೇಯೋ ಧ್ಯಾಯತಿ ಕೇಶವಃ*

_ದ್ರುಪದನ ಮಾತು. ವಿದುರನು ಪಾಂಡವರನ್ನು ಕರೆದೊಯ್ಯಲು ಪಾಂಚಾಲಕ್ಕೆ ಬಂದಿದ್ದಾನೆ. ಕುರುಗಳು ನಿಮ್ಮನ್ನು ನೋಡಲು  ಕಾತುರರಾಗಿದ್ದಾರೆ. ಶೀಘ್ರ ಬನ್ನಿರಿ ಎಂದಾಗ ಧರ್ಮಜನು ದ್ರುಪದನ ಅನುಜ್ಞೆಯನ್ನು ಬೇಡುವನು. ದ್ರುಪದನು ಕೃಷ್ಣನ ಮತ ತಿಳಿದು ಕಳುಹಿಸಿಕೊಡುತ್ತಾನೆ. ಆಗ ಅವನೇ ಆಡುವ ಮಾತು. ಪುರುಷೋತ್ತಮನಾದ ಈ ಕೇಶವನು ಪಾಂಡವರ ಶ್ರೇಯಸ್ಸನ್ನು ಚಿಂತಿಸುವಷ್ಟು ಹಿರಿಯನಾದ ಯುಧಿಷ್ಠಿರನೂ ಚಿಂತಿಸುವುದಿಲ್ಲ. ಧರ್ಮಜ ಕೆಲವೊಮ್ಮೆ ಎಡವಿ ಬೀಳಬಹುದು. ಆದರೆ ಕೃಷ್ಣ ಆಗಲೂ ನಡೆಸಲು ಸಿದ್ಧನಾಗಿರುತ್ತಾನೆ. ಭಗವಂತನ ಭಕ್ತನಿಗೆ ಮಾಡುವ ಸಹಾಯವೆಂದರೆ ಹಾಗೆಯೇ ಇರುತ್ತದೆ. ಅಪ್ಪ ಅಮ್ಮ ಗಂಡ ಹೆಂಡತಿ ಅಥವಾ ಮಕ್ಕಳು ಯಾರೂ ಮಾಡದಷ್ಟು ಮಿಗಿಲಾದ ಪ್ರೀತಿ ಅವನ ರೀತಿ. ಪಾಂಡವರಂತೂ ಭಕ್ತರು ಹಾಗೂ ಧರ್ಮಿಷ್ಠರೂ ಕೂಡ. ಕೇಶವ ಅವರನ್ನು ಹಿಡಿದೆತ್ತಲು ಸದಾ ಸಿದ್ಧನಾಗಿದ್ದ. ಧರ್ಮಜನಿಗಿಂತಲೂ ಹೆಚ್ಚು ಕಾಳಜಿ ವಹಿಸುತ್ತಿದ್ದ._

*ಯಸ್ಮಿನ್ಧೃತಿರನುಕ್ರೋಶಃ ಕ್ಷಮಾ ಸತ್ಯಂ ಪರಾಕ್ರಮಃ  ನಿತ್ಯಾನಿ ಪಾಂಡವಶ್ರೇಷ್ಠೇ        ಸ ಜೀಯೇತ ಕಥಂ ರಣೇ*

_ವಿದುರನ ಮಾತು. ಅರ್ಜುನ- ಭೀಮ- ನಕುಲ- ಸಹದೇವರು ತಮ್ಮ ತಮ್ಮ ಅಸಾಧಾರಣ ಪರಾಕ್ರಮಗಳಿಂದ ಗೆಲ್ಲಲು ಅಸಾಧ್ಯ. ಇವರ ಹಿರಿಯನಾದ ಧರ್ಮಜನು ಎಲ್ಲರನ್ನೂ ಮೀರಿದ್ದಾನೆ, ಹೇಗೆಂದರೆ ಧೈರ್ಯ-ದಯೆ-ಕ್ಷಮೆ-ಸತ್ಯ-ಪರಾಕ್ರಮ ಈ ಐದು ಗುಣಗಳು ನೆಲೆಸಿರುವ ಅವನನ್ನು ಸೋಲಿಸುವುದು ನಿಜಕ್ಕೂ ಕಷ್ಟ.   ಆಪತ್ತಿನಲ್ಲಿ ತೋರಬೇಕಾದ ಧೈರ್ಯ, ಸಕಲ ಜೀವಿಗಳಲ್ಲಿ ತೋರಬೇಕಾದ ದಯೆ, ಪರರ ತಪ್ಪುಗಳನ್ನು ಕ್ಷಮಿಸುವ ಉದಾರತೆ, ಸದಾ ಸತ್ಯಪಥ ಬಿಡದಿರುವುದು ಹಾಗೂ ಕೊನೆಯದಾಗಿ ಶತ್ರುವು ಎದುರಾದಾಗ ಹೋರಾಟ ಮಾಡುವ ಛಾತಿ ಇವಿಷ್ಟು ನಮ್ಮಲ್ಲಿ ಇದ್ದರೆ ಯಾರು ತಾನೇ ನಮ್ಮನ್ನು ಸೋಲಿಸಿಯಾರು! ವಿಧಿಯೂ ಕ್ಷಣಕಾಲ ನಮ್ಮ ಬಗ್ಗೆ ಚಿಂತಿಸೀತು. ಹಾಗಾಗಿಯೇ ಧರ್ಮಜ ಅಚಲನಾಗಿ ನಿಂತದ್ದು._

*ಅಯಂ ಸ ಪುರುಷವ್ಯಾಘ್ರಃ     ಪುನರಾಯಾತಿ ಧರ್ಮವಿತ್     ಯೋ ನಃ ಸ್ವಾನಿವ ದಾಯಾದಾನ್               ಧರ್ಮೇಣ ಪರಿರಕ್ಷತಿ*

_ಪಾಂಡವರು ನಗರಕ್ಕೆ ಬಂದಾಗ ನಾಗರಿಕರು ಆಡಿಕೊಳ್ಳುತ್ತಿದ್ದ ಆತ್ಮೀಯ ಮಾತುಗಳು- ಪುರುಷಶ್ರೇಷ್ಠನೂ, ಧರ್ಮಜ್ಞನೂ ಆದ ಈ ಯುಧಿಷ್ಠಿರನು ಮತ್ತೆ ಹಿಂದಿರುಗಿ ಬರುತ್ತಿದ್ದಾನೆ. ಅವನು ನಮ್ಮನ್ನು ತನ್ನ ಸ್ವಂತ ಮಕ್ಕಳಂತೆ ಧರ್ಮದಿಂದ ಕಾಪಾಡುವನು. ಇದು ಪ್ರಜೆಗಳಿಗೆ ಪಾಂಡವರ ಮೇಲಿದ್ದ ನಂಬಿಕೆ. ವ್ಯಾಸರು ಧರ್ಮಜನನ್ನೋ ಕುಂತಿಯನ್ನೋ ಮೆಚ್ಚಿಸಲು ಹೀಗೆ ಬರೆದದ್ದಲ್ಲ ಹೊರತು ಆಗಿನ ಪಾಂಡವರ ಮೇಲಿನ ಪ್ರಜೆಗಳ ಪ್ರೀತಿ ಅಷ್ಟು ಗಾಢವಾಗಿತ್ತು.ಧರ್ಮಜ ಯುವರಾಜನಾಗಿದ್ದರೂ ಪ್ರಜೆಗಳು ಅವನ ಬಗೆಗೆ ರಾಜನಿಗಿಂತಲೂ  ಹೆಚ್ಚು ಗೌರವ ತೋರುತ್ತಿದ್ದರು. ನಮ್ಮ ವರ್ತನೆ ಸದ್ವರ್ತನೆಯಾದಲ್ಲಿ ಗೌರವ ಅಭಿಮಾನಗಳು ಅನಪೇಕ್ಷಿತವಾಗಿ ಅರಸಿ ಬರುತ್ತವೆ. ವನಕ್ಕೆ ತೆರಳಿದ ಪಾಂಡುವೇ ನಮಗೆ ಪ್ರಿಯವುಂಟುಮಾಡಲು ಹಿಂತಿರುಗಿ ಬಂದಿರುವನೇನೋ ಎಂದು ಕೆಲವರು ಆಡಿಕೊಂಡರು. ನಮಗೆ ಅತ್ಯಂತ ಪ್ರಿಯವಾದ ದಿನ ಇವತ್ತು, ಏಕೆಂದರೆ ಪಾಂಡವರು ಮತ್ತೆ ಪುರಕ್ಕೆ ಬಂದಿದ್ದಾರೆ ಎಂದೂ ಕೆಲವರು, ಇನ್ನು ಕೆಲವರಂತೂ ನಾವೇನಾದರೂ ದಾನ-ಯಜ್ಞ-ತಪಸ್ಸು ಮಾಡಿದ್ದರೆ ಅದರ ಪುಣ್ಯದಿಂದ ಪಾಂಡವರು ನೂರು ವರ್ಷ ಈ ಪಟ್ಟಣದಲ್ಲೇ ನೆಲೆಸಲಿ ಎಂದೆಲ್ಲಾ ಆಡಿಕೊಂಡರು. ಕೆಲವು ಕಾಲ ಮಾತ್ರ ಒಂದು ಕಡೆ ನೆಲೆಸಿದ್ದರೂ ಪ್ರಜೆಗಳ ಪ್ರೀತಿಯನ್ನು ಸಂಪಾದಿಸಿದ ರೀತಿ  ಬಣ್ಣಿಸಲಸದಳ._

http://shreenidhiabhyankar.blogspot.in/



🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩