ರಾಮಾಯಣ ೭೬
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೬
*ಸ ಶಾಸ್ತಿ ಚಿರಮೈಶ್ವರ್ಯಮರೀಂಶ್ಚ ಕುರುತೇ ವಶೇ ಸಂದಧಾನೋ ಹಿ ಕಾಲೇನ ವಿಗೃಹ್ಣಂಶ್ಚಾರಿಭಿಃ ಸಹ*
_ರಾವಣನ ಮಾತಾಮಹನಾದ ಮಾಲ್ಯವಂತನ ಉಪದೇಶ. ರಾವಣ, ಯಾವ ರಾಜನು ವಿದ್ಯಾವಂತನಾಗಿ ನೀತಿಶಾಸ್ತ್ರ ಅನುಸರಿಸಿ ಆಡಳಿತ ನಡೆಸುವನೋ ಅವನು ಚಿರಕಾಲ ಆಳುತ್ತಾನೆ. ಶತ್ರುಗಳನ್ನು ಗೆಲ್ಲುತ್ತಾನೆ. ಕಾಲಕ್ಕನುಸಾರ ಸಂಧಿಯನ್ನೂ ಯುದ್ಧವನ್ನೂ ನಡೆಸಬೇಕಾಗುತ್ತದೆ. ಹೀಗೆ ಸಮಯೋಚಿತವಾಗಿ ಮುಂದಡಿ ಇಡುತ್ತಿದ್ದರೆ ಅವನು ಸಂಪತ್ತನ್ನು ಹೆಚ್ಚಿಸಿಕೊಳ್ಳುವನು, ಅರಿಯನ್ನೂ ದೂರಮಾಡುವನು. ನಮಗಿಂತ ಬಲಿಷ್ಠನಾದ ಶತ್ರು ಎದುರಾದಾಗ ಸಂಧಿಯೇ ಸರಿಯಾದ ಮಾರ್ಗ. ಪ್ರಕೃತ ರಾಮನು ಬಲಿಷ್ಠ. ಹಾಗಾಗಿ ಅವನೊಡನೆ ಸಂಧಾನವೇ ಸರಿ. ಈ ಮಾಲ್ಯವಂತನು ಕೈಕಸಿಯ ತಂದೆ ಸುಮಾಲಿಯ ತಮ್ಮ. ಹಾಗಾಗಿ ಅಜ್ಜನ ತಮ್ಮ. ಅವನಿಗೂ ರಾಮನ ಬಲದ ಅರಿವು ಚೆನ್ನಾಗಿಯೇ ಇತ್ತು._
*ಸುರಾಣಾಮಸುರಾಣಾಂ ಚ ಧರ್ಮಾಧರ್ಮೌ ತದಾಶ್ರಯೌ*
_ಬ್ರಹ್ಮನ ಸೃಷ್ಟಿಯಲ್ಲಿ ಜನರು ಆಶ್ರಯಿಸುವ ಎರಡು ಪಕ್ಷಗಳುಂಟು. ಒಂದು ಧರ್ಮ, ಇನ್ನೊಂದು ಅಧರ್ಮ. ದೇವತೆಗಳ ಪಕ್ಷ ಧರ್ಮ. ರಾಕ್ಷಸರ ಪಕ್ಷ ಅಧರ್ಮ. ಯಾವಾಗ ಧರ್ಮವು ಅಧರ್ಮವನ್ನು ನುಂಗಿ ತಾನೊಂದೇ ವಿರಾಜಿಸುವುದೋ ಆಗ ಕೃತಯುಗ. ಅಧರ್ಮವೇ ಧರ್ಮವನ್ನು ನುಂಗಿ ಮೆರೆದಾಗ ಕಲಿಯುಗ._
*ಅಧರ್ಮಃ ಪ್ರಗೃಹೀತಶ್ಚ ತೇನಾಸ್ಮದ್ಬಲಿನಃ ಪರೇ ಸ ಪ್ರಮಾದಾದ್ವಿವೃದ್ಧಸ್ತೇಧರ್ಮೋರ್ಹಿಗ್ರಸತೇ ಹಿ ನಃ*
_ರಾವಣ, ನೀನು ಜಗತ್ತೆಲ್ಲಾ ಸುತ್ತಿ ಧರ್ಮದ ಕೊಲೆ ಮಾಡುತ್ತಿರುವೆ. ಅಧರ್ಮಕ್ಕೆ ಬಲವಾಗಿ ಅಂಟಿಕೊಂಡಿರುವೆ. ಹಾಗಾಗಿಯೇ ಶತ್ರುಗಳು ನಮಗಿಂತ ಬಲಿಷ್ಠರು. ನೀನು ಅವಿವೇಕದಿಂದ ಸಾಕಿದ ಆಧರ್ಮವು ಇಂದು ಹೆಬ್ಬಾವಾಗಿ ಬೆಳೆದು ನಮ್ಮನ್ನೇ ನುಂಗಲು ಬಂದಿದೆ. ಎಂತಹ ಅದ್ಭುತ ಮಾತು. ನಾವು ಯಾವುದನ್ನು ಪೋಷಿಸುವೆವೋ ಅಥವಾ ಜೀವನದಲ್ಲಿ ರೂಢಿಸಿಕೊಳ್ಳುತ್ತೇವೆಯೋ ಅದೇ ನಮ್ಮನ್ನು ರಕ್ಷಿಸುವುದು ಅಥವಾ ಭಕ್ಷಿಸುವುದು.ಅಧರ್ಮಿಗಳ ಅಟ್ಟಹಾಸವನ್ನು ಅಧರ್ಮವೇ ನಾಶ ಮಾಡುತ್ತದೆ.ನಾವು ಅದನ್ನು ಅನುಸರಿಸದೇ ದೂರ ಇದ್ದರಾಯಿತು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ