ರಾಮಾಯಣ ೭೪
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೪
*ಸಕಾಮಾ ಭವ ಕೈಕೇಯಿ ಹತೋಯಂ ಕುಲನಂದನಃ*
_ರಾವಣನು ವಿದ್ಯುಜ್ಜಿಹ್ವನೆಂಬ ರಾಕ್ಷಸನ ಮೂಲಕ ರಾಮನ ಕೃತಕ ತಲೆಯನ್ನು ಧನುರ್ಬಾಣಗಳನ್ನೂ ಸೃಷ್ಟಿಸಿ ಸೀತೆಯನ್ನು ವಂಚಿಸಲು ಪ್ರಯತ್ನಿಸಿದಾಗ ವೈದೇಹಿ ಆಡುವ ಮಾತು. ಅಯ್ಯೋ, ಕೈಕೇಯಿ ನಿನ್ನ ಇಷ್ಟ ನೆರವೇರಿತೇ, ಯಾವ ಕಾರಣದಿಂದ ನೀನು ರಾಮನನ್ನು ಕಾಡಿಗೆ ಕಳುಹಿದೆಯೋ ಆ ಕಾರ್ಯ ಇಂದು ನಡೆಯಿತು. ರಾಮನ ಕೊನೆಯಿಂದ ನಮ್ಮ ಕುಲವನ್ನೇ ನಾಶ ಮಾಡಿರುವೆ. ಇಲ್ಲಿ ಒಂದು ಅಚ್ಚರಿ ಗಮನಿಸಿ. ರಾಮನನ್ನು ಕೊಂದಂತೆ ಮಾಡಿದ್ದು ರಾವಣ ಹಾಗೂ ವಿದ್ಯುಜ್ಜಿಹ್ವ. ಆದರೆ ಸೀತೆ ನಿಂದಿಸುತ್ತಿರುವುದು ಕೈಕೇಯಿಯನ್ನು. ಎದುರಿಗಿರುವ ಶತ್ರುವನ್ನು ನಿಂದಿಸದೇ ದೂರದಲ್ಲೆಲ್ಲೋ ಇರುವ ಅತ್ತೆಯನ್ನು ಯಾಕಾದರೂ ನಿಂದಿಸುವಳೋ! ರಾಮ ವನಕ್ಕೆ ಬಂದ ಕಾರಣ ಇಷ್ಟೆಲ್ಲಾ ಅನರ್ಥ ನಡೆಯಿತೆಂಬ ಭಾವವಿರಬಹುದು._
*ಪ್ರಥಮಂ ಮರಣಂ ನಾರ್ಯಾ ಭರ್ತುರ್ವೈಗುಣ್ಯಮುಚ್ಯತೇ*
_ಆಗಿನ ಕಾಲದ ಒಂದು ನಂಬಿಕೆ. ಪತಿಗೆ ಮೊದಲೇ ಮರಣವಾಗುವುದೆಂದರೆ ನಾರಿಗೆ ಅದೊಂದು ಕಳಂಕವೇ ಸರಿ. ಏಕೆಂದರೆ ಅನಂತರ ಅವಳನ್ನು ನೋಡಿಕೊಳ್ಳುವವರು ಯಾರು ಎಂಬ ಅರ್ಥದಲ್ಲಿ ಸೀತೆಯ ಈ ಮಾತಿದೆ. ಸಾಧ್ವಿಯಾದ ನಾನಿನ್ನೂ ಬದುಕಿರುವಾಗ ಹೇಗೆ ನೀನು ಮೃತನಾದೆ? ಪತ್ನಿ ತಪ್ಪು ದಾರಿ ಹಿಡಿದಾಗ ಆ ಪಾಪ ಪತಿಗೂ ಸೇರಿ ಮೃತನಾಗಬಹುದು. ಆದರೆ ನಾನು ಸರಿದಾರಿಯಲ್ಲೇ ಸಾಗುತ್ತಿರುವಾಗ ನೀನು ದಾರಿ ಬಿಟ್ಟೋಡಿರುವುದು ಏತಕೆ?_
*ಅನಿಷ್ಟಂ ದೀರ್ಘಮಾಯುಸ್ತೇ ದೈವಜ್ಞೈರಪಿ ರಾಘವ ಅನೃತಂ ವಚನಂ ತೇಷಾಮಲ್ಪಾಯುರಸಿ ರಾಘವ ಅಥವಾ ನಶ್ಯತಿ ಪ್ರಜ್ಞಾ ಪ್ರಾಜ್ಞಸ್ಯಾಪಿ ಸತಸ್ತವ*
_ಆ ಕಾಲದಲ್ಲೂ ಜ್ಯೋತಿಷ್ಯ ಹೇಳುವ ಜನ ಅನೇಕರಿದ್ದರೆನ್ನುವುದು ತಿಳಿದು ಬರುತ್ತದೆ. ವೇದಾಂಗ ಜ್ಯೋತಿಷ್ಯವು ಇತ್ತೀಚೆಗೆ ಹುಟ್ಟಿತೆನ್ನುವ ಜನರು ರಾಮಾಯಣದ ಕಾಲ ಯಾವಾಗ ಎಂದು ಒಪ್ಪುವರೋ? ರಾಮ, ದೀರ್ಘಾಯುವಾಗಿ ಬಾಳುವೆಯೆಂಬ ಜ್ಯೋತಿಷ್ಯರ ವಚನ ಸುಳ್ಳಾಯಿತು. ನೀನು ತೀರಿಹೋದೆ. ಮಹಾಪ್ರಾಜ್ಞನಾದ ನಿನ್ನ ಮೇಧಾಶಕ್ತಿಗೂ ಹ್ರಾಸವುಂಟಾಯಿತೇ? ಮಂಕು ಕವಿಯಿತೇ? ಹೇಮಮೃಗದ ದೆಸೆಯಿಂದ ಬುದ್ಧಿಗೆ ಮಂಕು ಕವಿದಿದ್ದ ಸೀತೆ ಈಗ ಮಾಯೆಯ ಕಾರಣ ಮತ್ತೆ ದುಃಖಿಸುತ್ತಾ ರಾಮನ ಬಗೆಗೇ ಹೀಗೆ ನುಡಿಯುತ್ತಿದ್ದಾಳೆ. ಮನವು ಅತಿಯಾದ ದುಃಖಕ್ಕೆ ಒಳಗಾದಾಗ ವಿವೇಚನೆಯನ್ನು ಕಳೆದುಕೊಳ್ಳುವುದು ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ