ಪ್ರತಿಜ್ಞಾ ಯೌಗಂಧರಾಯಣ ೧೩

🔥 ಪ್ರತಿಜ್ಞಾ ಯೌಗಂಧರಾಯಣ 🔥೧೩

*स्नातस्य यस्य समुपस्थितदैवस्य पुण्याहघोषविरमे पटहा नदन्ति । तस्यैव कालविभवात् तिथिपूजनेषु  दैवप्रणामचलिता निगला: स्वनन्ति ।।*

_ವತ್ಸರಾಜನ ಅವಸ್ಥೆಯ ಕುರಿತು ಯೌಗಂಧರಾಯಣನ ಮಾತು. ಯಾವ ರಾಜನು ಮುಂಜಾನೆ ಎದ್ದು ಸ್ನಾನ ಮಾಡಿದ ನಂತರ ದಿನವೂ ನಡೆಯುವ ಪುಣ್ಯಾಹವಾಚನದ ಕೊನೆಯಲ್ಲಿ ಪಟಹವೇ ಮೊದಲಾದ ಮಂಗಲವಾದ್ಯಗಳ ಘೋಷವನ್ನು ಕೇಳಿ ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದನೋ ಅದೇ ರಾಜನು ಇಂದು ಕಾಲಚಕ್ರದ ಪ್ರಭಾವದಿಂದಾಗಿ ಚತುರ್ದಶಿಯೇ ಮೊದಲಾದ ತಿಥಿಗಳಲ್ಲಿ ಮಾಡುವ ಪೂಜೆಗಳ ಕಾಲದಲ್ಲಿ ದೇವತೆಗಳ ಪ್ರಣಾಮ ಮಾಡಲು ತನಗೆ ಹಾಕಿರುವ ಸರಪಳಿಯ ಅಥವಾ ಬೇಡಿಯ ಧ್ವನಿಯನ್ನು ಆಲಿಸುತ್ತಿದ್ದಾನೆ. ಹೇಗೆ ಬದುಕಿದ್ದ ಮನುಷ್ಯನ ಅವಸ್ಥೆ ಹೇಗಾಗಬಹುದು ಎಂಬುದಕ್ಕೊಂದು ಸುಂದರ ನಿದರ್ಶನ. ಹಿಂದೆ ರಾಜನಾಗಿದ್ದಾಗ ಅರಮನೆಯಲ್ಲಿ ಪ್ರತಿದಿನವೂ ರಾಜನು ಸ್ನಾನ ಮಾಡಿದ ನಂತರ ಪುಣ್ಯಾಹವಾಚನ ಮಾಡುತ್ತಿದ್ದರು. ರಾಜನ ದಿನವು ಪುಣ್ಯಕರವಾಗಿ, ಶುಭವಾಗಿ, ಸಂಪತ್ತು ವೃದ್ಧಿಯಾಗುವಂತೆಲ್ಲಾ ಬ್ರಾಹ್ಮಣರು ಹಾರೈಸುತ್ತಿದ್ದರು. ಪುಣ್ಯಾಹದ ಕೊನೆಯಲ್ಲಿ ರಾಜನು ದೇವತೆಗಳಿಗೆ ನಮಸ್ಕರಿಸುವ ಸಮಯದಲ್ಲಿ ಮಂಗಳವಾದ್ಯಗಳು ಮೊಳಗುತ್ತಿದ್ದವು. ಆದರಿಂದು ಕಾಲ ಅವನ ವಿರುದ್ಧವಾಗಿ ನಿಂತಿದೆ. ದಿನವೂ ಕೇಳುವುದಿರಲಿ, ವಿಶೇಷ ಪೂಜೆಯ ದಿನವೂ ಅವನಿಗೆ ಅವನದೇ ಬಂಧನದ ಬೇಡಿಯು ಧ್ವನಿಸುತ್ತಾ ಅಣಕಿಸುತ್ತಿದೆ. ಚತುರ್ದಶಿ- ಸಂಕ್ರಾಂತಿ ಮುಂತಾದ ದಿವಸಗಳಲ್ಲಿ ವಿಶೇಷ ಪೂಜೆಗಳು ರಾಜರ ಅರಮನೆಯಲ್ಲಿ ಜರುಗುತ್ತವೆ. ಅದಕ್ಕೆ ಬೇರೆ ಬೇರೆ ಬಗೆಯ ವಾದ್ಯಗಳನ್ನು ಅನೇಕ ನುರಿತ ವಾದ್ಯಗಾರರು ನುಡಿಸುತ್ತಾರೆ. ಇಂದು ಚತುರ್ದಶಿ. ಆದರೆ ರಾಜನು ಕಾರಾಗೃಹದಲ್ಲಿ ದೇವತೆಗಳಿಗೆ ನಮಿಸುತ್ತಿದ್ದರೂ ನುಡಿಸುವವರಿಲ್ಲ ಅಥವಾ ನೋಡುವವರೇ ಇಲ್ಲ. ಅಂದು ರಾಜ, ಇಂದು ಖೈದಿ. ಭಾಗ್ಯದ ರೇಖೆ ತಿರುಗಿತೆಂದರೆ ಪರಿಸ್ಥಿತಿಯೂ ನಾವಂದುಕೊಂಡಂತೆ ಇರಲಾರದು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩