ವೇದ ಧರ್ಮ ೫೦
📗🌾📙 ವೇದ-ಧರ್ಮ 📗🌾📙 ಭಾಗ-50
*ಪ್ರಶಾಂತಚಿತ್ತಸ್ಯ ಜಿತೇಂದ್ರಿಯಾಯ ಪ್ರಹೀಣದೋಷಾಯ ಯಥೋಕ್ತಕಾರಿಣೇ ಗುಣಾನ್ವಿತಾಯಾನುಗತಾಯ ಸರ್ವದಾ ಪ್ರದೇಯಮೇತತ್ಸತತಂ ಮುಮುಕ್ಷವೇ*
_ಶಾಸ್ತ್ರಗಳನ್ನು ಯಾರಿಗೆ ಉಪದೇಶಿಸಬೇಕು ಎಂಬ ವಿಷಯದ ಬಗ್ಗೆ ಶಂಕರರು ಇಲ್ಲಿ ಹೇಳಿದ್ದಾರೆ. ಮೊದಲಿಗೆ ಮನಸ್ಸಿನ ಸಮಾಧಾನ ಯಾರಿಗೆ ಇರುವುದೋ ಅವನಿಗೆ/ಳಿಗೆ ಹೇಳಿಕೊಡಬೇಕು. ಯಾವುದೇ ಪೂರ್ವಾಗ್ರಹ ಇಲ್ಲದೆ, ಉದ್ವೇಗ, ಕೋಪ, ಅವಸರ, ಒತ್ತಡ ಇಲ್ಲದವರು ಮಾತ್ರ ಯಾವುದೇ ವಿದ್ಯೆಯನ್ನು ಸರಿಯಾಗಿ ಅರಿಯಲು ಸಾಧ್ಯ. ಹಾಗಾಗಿ ಚಿತ್ತ ಹುತ್ತಗಟ್ಟುವುದು ಮೊದಲ ಲಕ್ಷಣ. ಎರಡನೇ ಲಕ್ಷಣ ಇಂದ್ರಿಯಗಳ ನಿಯಂತ್ರಣ. ಒಂದೊಂದು ಇಂದ್ರಿಯಗಳು ಒಂದೊಂದು ವಿಷಯದಲ್ಲಿ ಪ್ರಚೋದಿಸುತ್ತವೆ.ಪಂಚ ಕರ್ಮೇಂದ್ರಿಯಗಳು ಪಂಚ ಜ್ಞಾನೇಂದ್ರಿಯಗಳು ಬೇರೆ ಬೇರೆ ವಿಷಯದ ಬಗೆಗೆ ಅತಿಯಾದ ಆಸಕ್ತಿ ವಹಿಸಿದಾಗ ವಿದ್ಯೆ ತಲೆಗೆ ಹತ್ತಲಾರದು. ಹಾಗಾಗಿ ಜಿತೇಂದ್ರಿಯತ್ವ ಅಗತ್ಯವಾದುದು. ಮೂರನೆಯದು ದೋಷಗಳನ್ನು ಕಡಿಮೆ ಮಾಡಿಕೊಳ್ಳುವುದು. ಗುರುಗಳು ಹೇಳುವ ಮುಂಚೆಯೇ ತಲೆ ಅಲ್ಲಾಡಿಸುವುದು, ಮಧ್ಯದಲ್ಲಿ ಬಾಯಿ ಹಾಕುವುದು, ನಿದ್ದೆ ಮಾಡುವುದು, ಆಕಳಿಕೆ-ಅಪಾನ ಇತ್ಯಾದಿ ವಿಸರ್ಜನೆ, ಎತ್ತೆತ್ತಲೋ ಯೋಚಿಸುವುದು, ಪಾಪಕರ್ಮಗಳಲ್ಲಿ ರತನಾಗುವುದು, ದೇಹದ ಭಾಗಗಳನ್ನು ಪ್ರದರ್ಶನ ಮಾಡುವುದು, ತುರಿಸುವುದು, ಮೊಂಡುವಾದ ಮಾಡುವುದು, ಎದುರುತ್ತರ ಕೊಡುವುದು ಇತ್ಯಾದಿ. ಇವಿಷ್ಟು ದೋಷಗಳು ಸಾಮಾನ್ಯವಾಗಿ ನಾವು ಗುರುತಿಸುವಂತಹವು. ಅಂತಹ ಅನೇಕ ದೋಷಗಳು ಇಲ್ಲದಾದಾಗ ಶಿಕ್ಷಕರ ಅನುಗ್ರಹದಿಂದ ವಿದ್ಯೆ ಬೇಗ ಹಿಡಿಯುತ್ತದೆ. ನಾಲ್ಕನೆಯ ಅಂಶ. ಗುರುಗಳೆಂದಂತೆ ಮಾಡುವುದು. ಇದಕ್ಕೆ ಗುರುಗಳು ಉತ್ತಮರಾಗಿರಬೇಕು. ಇಲ್ಲದಿದ್ದರೆ ಶಿಷ್ಯನ ಗತಿ ಅಧೋಗತಿ ಆಗಬಹುದು. ಗುರುಗಳು ಹೇಳಿಕೊಟ್ಟಂತೆ ಬರೆಯುವುದೋ ಓದುವುದೋ ಮಾಡಿದರೆ ಶೀಘ್ರ ಅನೇಕ ವಿಷಯಗಳನ್ನು ತಿಳಿಯಬಹುದು. ಐದನೆಯ ಅಂಶ ಗುಣವಂತ. ಗುಣವಂತನಿಗೆ ಮಾತ್ರ ಶಾಸ್ತ್ರಗಳನ್ನು ಹೇಳಿಕೊಡಬೇಕು. ಅವಿಧೇಯನಾದ, ಏಕಾಗ್ರತೆ ಇಲ್ಲದ, ಆಸಕ್ತಿ ತೋರದ, ಭಂಡ ವಾದ ಮಾಡುವ, ಕಲಿಯುವ ವಿಷಯದಲ್ಲಿ ಶ್ರದ್ಧೆ ಇಲ್ಲದ, ಪಾಠ ಕೇಳುವುದು ಗುರುಗಳಿಗೇ ಮಾಡುವ ಉಪಕಾರ ಎಂಬ ಭಾವ ಯಾರಿಗೆ ಇರುತ್ತದೋ ಅಂತಹ ವ್ಯಕ್ತಿಗಳಿಗೆ ಎಂದಿಗೂ ಹೇಳಿಕೊಡಬಾರದು. ಇಲ್ಲಿ ಗಮನಿಸಬೇಕಾದ ವಿಷಯ, ಬ್ರಾಹ್ಮಣನಿಗೋ, ಮೇಲ್ವರ್ಗದವನಿಗೋ, ಒಳ್ಳೆಯ ವರ್ಣದವರಿಗೋ, ನಾಗರಿಕತೆ ಇರುವವರಿಗೋ ಬೋಧಿಸಿ ಎಂದು ಎಲ್ಲಿಯೂ ಹೇಳಲಿಲ್ಲ. ಈ ಮೇಲಿನ ಗುಣಗಳನ್ನು ಹೊಂದಿದವರಿಗೆ ಅವಶ್ಯವಾಗಿ ಕಲಿಸಬೇಕು ಎಂದೇ ಹೇಳಿದ್ದಾರೆ. ಹಾಗಾಗಿ ಸಂಸ್ಕೃತ ಶಾಸ್ತ್ರಗಳ ಅಧ್ಯಯನಕ್ಕೆ ಯಾವ ಹಂಗೂ ಅಥವಾ ಮೀಸಲಾತಿಯೂ ಇಲ್ಲದೆ ಅರ್ಹತೆಯೊಂದೇ ಮಾನದಂಡವಾಗಿದೆ._
ಈ ವೇದಧರ್ಮ ಮಾಲಿಕೆ ೫೦ ಕಂತುಗಳಲ್ಲಿ ಪ್ರಸಾರವಾಯಿತು. ಇನ್ನು ಇದನ್ನು ನಿಲ್ಲಿಸಿ ಬೇರೊಂದು ಮಾಲಿಕೆ ಪ್ರಾರಂಭಿಸುವೆ. ಓದುಗರೆಲ್ಲರ ಸಲಹೆ- ಸೂಚನೆಗಳಿಗೆ ಸದಾ ಸ್ವಾಗತ ಕೋರುತ್ತಾ ನಮಿಸುತ್ತಿದ್ದೇನೆ.👏
http://shreenidhiabhyankar.blogspot.in/
ಮುಂದುವರಿಯುವುದು......
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ