ರಾಮಾಯಣ ೮೧
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೧
*ನಿತ್ಯಮತ್ತವಿಹಂಗಾನಿ ಭ್ರಮರಾಚರಿತಾನಿ ಚ ಕೋಕಿಲಾಕುಲಷಂಡಾನಿ ವಿಹಂಗಾಭಿರುತಾನಿ ಚ ಭೃಂಗರಾಜಾಭಿಗೀತಾನಿ ಕುರರಸ್ವನಿತಾನಿ ಚ ಕೋಣಾಲಕ ವಿಘುಷ್ಟಾನಿ ಸಾರಸಾಭಿರುತಾನಿ ಚ*
_ಸುವೇಲ ಪರ್ವತದಲ್ಲಿ ರಾಮಾದಿಗಳು ಕಳೆಯುತ್ತಿದ್ದಾರೆ. ಅಲ್ಲಿನ ವನದ ಮಧುರ ಚಿತ್ರಣ ವಾಲ್ಮೀಕಿಗಳ ಕೆಲವು ಶ್ಲೋಕಗಳಲ್ಲಿ ಮೂಡಿಬಂದಿದೆ. ಒಂದೊಂದು ಪಕ್ಷಿಯ ಕೂಗಿಗೆ ಒಂದೊಂದು ಹೆಸರು. ಸೊಕ್ಕಿದ ಹಕ್ಕಿಗಳು, ಹಾರಾಡುವ ದುಂಬಿಗಳು, ಕಿಕ್ಕಿರಿದ ಕೋಗಿಲೆಗಳಿಂದ ಆ ವನ ರಮ್ಯವಾಗಿತ್ತು. ಕೋಗಿಲೆಗಳ ಗಾಯನ, ಪಕ್ಷಿಗಳ ಮಧುರ ಕೂಗು, ಭೃಂಗಗಳ ಹಾಡು, ಕುರರಗಳ ಇಂಚರ, ಖಂಜನ ಪಕ್ಷಿಗಳ ಘೋಷ, ಸಾರಸಗಳ ಕಲರವ ಇವುಗಳಿಂದ ಕಾನನವು ಸುಮಧುರವಾಗಿತ್ತು. ಇಲ್ಲಿ ಭೇದವನ್ನು ಸ್ಪಷ್ಟವಾಗಿ ಗಮನಿಸಬಹುದು. ನಾವು ಸಾಮಾನ್ಯವಾಗಿ ಪಕ್ಷಿಗಳ ಕೂಗೆಂದರೂ ಅದರಲ್ಲಿ ತುಂಬಾ ಭೇದವಿದೆ. ಇಂಚರ ಎಂದರೆ ಮೆಲ್ಲನೆ ಹಾಡುವುದು, ಕಲರವ ಅಂದರೆ ಗಿಜಿಗಿಜಿ ಎಂದು ಶಬ್ದ ಮಾಡುವುದು, ಇನ್ನು ದುಂಬಿಗಳು ಗುಂಯ್ಗುಡುವುದು, ಖಂಜನ ಪಕ್ಷಿಗಳದ್ದು ಸಿನೆಮಾಗಳ ಖಳನಾಯಕನಂತೆ ಗಂಭಿರನಾದ, ಕೋಗಿಲೆ ಹೆಣ್ಣಿನ ಧ್ವನಿಯಂತೆ ಆಲಾಪನೆ. ವಾಲ್ಮೀಕಿಗಳ ಸೂಕ್ಷ್ಮತೆ ನವಿರಾಗಿ ತೋರುತ್ತದೆ._
*ಶತಯೋಜನವಿಸ್ತೀರ್ಣಾ ತ್ರಿಂಶದ್ಯೋಜನಮಾಯತಾ*
_ಆ ತ್ರಿಕೂಟಗಿರಿಯು ನೂರು ಯೋಜನ ಉದ್ದ ಹಾಗೂ ಮೂವತ್ತು ಯೋಜನ ಅಗಲವಾಗಿತ್ತು.ಒಂದು ಯೋಜನ ಎಂಟು ಮೈಲುಗಳೆಂದು ಅಂದಾಜಿಸಿದರೆ ೩೮೦೦ ಮೈಲುಗಳಷ್ಟು ಲಂಕೆ ಆಗ ವಿರಾಜಿಸುತ್ತಿತ್ತು. ಈಗ ಪ್ರಾಕೃತಿಕ ವಿಕೋಪಗಳಿಂದ ಕೆಲವು ಭಾಗ ಹೋಗಿರಬಹುದು ಅಥವಾ ಕೆಲವೊಂದು ಸೇರಿರಬಹುದು._
*ಮನಸಾಪಿ ದುರಾರೋಹಂ ಕಿಂ ಪುನಃ ಕರ್ಮಣಾ ಜನೈಃ*
_ಮನಸ್ಸಿನ ಎಣಿಕೆಯಿಂದಲೇ ತಲುಪಲು ಅಸಾಧ್ಯವಾಗಿದ್ದ ಆ ಶಿಖರವನ್ನು ಜನರು ಕಾಲ್ನಡಿಗೆಯಿಂದ ಹತ್ತಬಲ್ಲರೇ? ಹೀಗಾಗಿಯೇ ಜನರಿಗೆ ಲಂಕೆ ತಲುಪಲು ಅಸಾಧ್ಯವಾಗಿತ್ತು. ಈಗ ನಾವು ಅಂಟಾರ್ಟಿಕಾದ ಹಿಮಾಚ್ಛಾದಿತ ಪ್ರದೇಶಗಳ ಬಗೆಗೆ ಮಾತನಾಡುವಂತೆ ಜನರು ಲಂಕೆಯ ಬಗೆಗೆ ಮಾತನಾಡುತ್ತಿದ್ದರು. ರಾಮನ ನೇತೃತ್ವದಲ್ಲಿ ಈಗ ಕೋಟಿ ಕೋಟಿ ವೀರ ವಾನರಾದಿಗಳು ಹುಮ್ಮಸ್ಸಿನಿಂದ ಮುಂದುವರಿಯುವ ಕಾರಣ ಇದು ಸಾಧ್ಯವಾಗುತ್ತಿದೆ. ಮೊದಲು ನಾವು ತಲುಪಬೇಕಾದ ಜಾಗವನ್ನು ಕಲ್ಪಿಸಿ ಕೊಳ್ಳುವೆವು. ಆದರೆ ಲಂಕೆಯ ಮಟ್ಟಿಗೆ ರಾವಣನ ಭಯಂಕರ ಆಳ್ವಿಕೆ ಹಾಗೂ ಪ್ರಾಕೃತಿಕ ವಿಶೇಷತೆಗಳಿಂದ ಕಲ್ಪನೆಯೇ ಅಸಾಧ್ಯವಾಗಿತ್ತು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ