ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*उपपत्तिरुदाहृता बलादनुमानेन न चागम: क्षत: । इदमीदृगनीदृगाशय: प्रसभं वक्तुमुपक्रमेत क:! ।।*
_ಧರ್ಮಜನು ಭೀಮನ ಮಾತನ್ನು ಹೊಗಳುತ್ತಿದ್ದಾನೆ. ನೀನು ಅವಸರವಸರವಾಗಿಯೇ ಮಾತನ್ನು ಆಡಿರುವೆ. ಆದರೆ ಯಾವ ಮಾತುಗಳೂ ಯುಕ್ತಿಹೀನವಲ್ಲ. *ಯುಕ್ತಿಯುಕ್ತಂ ವಚೋ ಗ್ರಾಹ್ಯಂ ಬಾಲಾದಪಿ ಶುಕಾದಪಿ* ಎಂಬ ಮಾತಿನಂತೆ ಸ್ವಲ್ಪ ಜೋರಾಗಿ ರಭಸದಲ್ಲಿ ನೀನು ನುಡಿದರೂ ಆ ಮಾತುಗಳೆಲ್ಲ ಸಂದರ್ಭಕ್ಕೆ ತಕ್ಕುದಾಗಿ ಆಚರಿಸಲು ಯೋಗ್ಯವಾಗಿವೆ. ನಿನ್ನ ಮಾತಿನಲ್ಲಿನ ಸತ್ಯವನ್ನು ಅನುಮಾನಗಳಿಂದ ಅಥವಾ ಶಾಸ್ತ್ರಗಳ ಮೂಲಕ ತೆಗೆದುಹಾಕಲೂ ಸಾಧ್ಯವಿಲ್ಲ. ನೀನಾಡಿದ ಮಾತು ತರ್ಕಕ್ಕೂ ಸಮ್ಮತವಾಗಿದೆ. ಶಾಸ್ತ್ರ ಅಂದರೆ ಸರಿ- ತಪ್ಪುಗಳ ವಿವೇಚನೆಯಿಂದಲೇ ಕೂಡಿದೆ. ಧರ್ಮಕ್ಕನುಗುಣವಾಗಿಯೇ ಎಲ್ಲವನ್ನೂ ನುಡಿದಿರುವೆ. ಸಹೋದರರ ಮೇಲೆ ತುಂಬು ಪ್ರೀತಿ ಹೊಂದಿರುವ ಲೋಕದ ಕ್ಷೇಮದ ಉತ್ತಮ ಆಶಯ ಹೊಂದಿರುವ ನೀನಲ್ಲದೆ ಇನ್ಯಾರು ಹೀಗೆ ನುಡಿಯುವರು! ನುಡಿದರೆ ಮುತ್ತಿನ ಹಾರದಂತಿರಬೇಕು,ಮಾಣಿಕ್ಯದ ದೀಪ್ತಿಯಂತಿರಬೇಕು ಇತ್ಯಾದಿ ಮಾತಿನ ಬಗ್ಗೆ ಹೊಗಳಿಕೆ ಇದೆ. ರಾಮಾಯಣದ ಹನುಮಂತನ ಮಾತು ಬಹಳ ಯುಕ್ತಿ ಯುಕ್ತವಾದುದಾಗಿತ್ತು. ಪ್ರಕೃತ ವಾಯುವಿನ ಮತ್ತೊಬ್ಬ ಪುತ್ರ ಭೀಮನ ಮಾತೂ ಬಹಳ ಸುಂದರವಾಗಿದೆ. ನಮ್ಮ ಮಾತೂ ಹಾಗೆಯೇ ಇರಬೇಕು. ಯಾರೂ ತೆಗೆದುಹಾಕದ ಹಾಗೆ, ಧರ್ಮಕ್ಕನುಗುಣವಾಗಿ, ಕಾಲ ದೇಶ ಸ್ಥಿತಿಗನುಗುಣವಾಗಿ ಇದ್ದಾಗ ಮಾತ್ರ ಅದಕ್ಕೊಂದು ಮೌಲ್ಯ ಸಿದ್ಧವಾಗುತ್ತದೆ. ಇಲ್ಲದಿದ್ದರೆ ಅಪಮೌಲ್ಯಗೊಂಡ ಹಣದಂತೆ ಗಾಳಿಯಲ್ಲಿ ಸುಟ್ಟು ಬೂದಿಯಾಗುವುದು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ