ಮಹಾಭಾರತ ೩೧
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೧
*ದುಷ್ಟೇನ ಮನಸಾ ಯೋ ವೈ ಪ್ರಚ್ಛನ್ನೇನಾಂತರಾತ್ಮನಾ ಬ್ರೂಯಾನ್ನಿಃಶ್ಶ್ರೇಯಸಂ ನಾಮ ಕಥಂ ಕುರ್ಯಾತ್ಸತಾಂ ಮತಮ್*
_ಭೀಷ್ಮ ದ್ರೋಣರು ಪಾಂಡವರ ಪರವಾಗಿ ಮಾತನಾಡಿದಾಗ ಸಹಿಸದ ಕರ್ಣನ ಮಾತು. ಕೆಟ್ಟ ಸಂಕಲ್ಪದಿಂದ ಅಂತರಂಗವನ್ನು ಮುಚ್ಚಿಟ್ಟುಕೊಂಡು ಶ್ರೇಯಸ್ಸನ್ನುಂಟುಮಾಡುವಂತೆ ಮಾತನಾಡುವವನು ಸತ್ಪುರುಷರಿಗೆ ಸಮ್ಮತವಾದ ಕಾರ್ಯ ಹೇಗೆ ತಾನೇ ಮಾಡಿಯಾನು? ಅಂತರಂಗದಲ್ಲಿ ಒಂದು ಬಹಿರಂಗದಲ್ಲಿ ಒಂದು ಇರುವವನು ಎಂದಿಗೂ ಒಳ್ಳೆಯ ಕಾರ್ಯ ಮಾಡಲಾರ. ಕರ್ಣನು ದ್ರೋಣಾದಿಗಳು ಪಾಂಡವರ ಪರ, ದುರ್ಯೋಧನನಿಗೆ ವಿರುದ್ಧ ಎನ್ನುವುದನ್ನು ಹೀಗೆ ವ್ಯಂಗ್ಯವಾಗಿ ಪ್ರತಿಪಾದಿಸುತ್ತಿದ್ದಾನೆ. ಆ ಸಂದರ್ಭದ ಅವನ ಮಾತು ಸುಳ್ಳಾದರೂ ಉಳಿದೆಲ್ಲಾ ಸಂದರ್ಭದಲ್ಲಿ ನೂರಕ್ಕೆ ನೂರು ಸತ್ಯವಿದೆ.ನಮ್ಮ ಎದುರಿಗೆ ಭಾರೀ ಹಾಡಿ ಹೊಗಳಿ ಅಥವಾ ನಮಗನುಕೂಲವಾಗುವಂತೆ ಅರ್ಧದಷ್ಟು ಜನರು ದಿನವೂ ಮಾತನಾಡುವರು. ಆದರೆ ನಿಜವಾಗಿ ಆ ಭಾವನೆ ಹೊಂದಿರುವವರು ಅಥವಾ ನಿಜವಾಗಿ ನಮಗೆ ಸಹಕರಿಸುವವರು ಕೆಲವೇ ಬೆರಳೆಣಿಕೆಯ ಜನರು. ಉಳಿದವರ್ಯಾರೂ ನಮಗೆ ಒಳಿತು ಮಾಡಲಾರರು._
*ನ ಮಿತ್ರಾಣ್ಯರ್ಥಕೃಚ್ಛೇಷು ಶ್ರೇಯಸೇ ವೇತರಾಯ ವಾ ವಿಧಿಪೂರ್ವಂ ಹಿ ಸರ್ವಸ್ಯ ದುಃಖಂ ವಾ ಯದಿ ವಾ ಸುಖಮ್*
_ಕಷ್ಟದ ಸಮಯದಲ್ಲಿ ಒಳ್ಳೆಯದಕ್ಕಾಗಲೀ ಕೆಟ್ಟದ್ದಕ್ಕಾಗಲೀ ಮಿತ್ರರು ಕಾರಣ ಆಗುವುದಿಲ್ಲ. ಎಲ್ಲರ ಸುಖಕ್ಕೆ ಅಥವಾ ದುಃಖಕ್ಕೆ ವಿಧಿಯೇ ಕಾರಣ. ಅದೇ ಮೂಲ. ನಮಗೇನು ಕಮ್ಮಿ, ಇಂತಹ ಮಿತ್ರರಿರುವರು, ಪ್ರಾಣ ಬೇಕಾದರೂ ಕೊಡಬಲ್ಲರು ಎಂದೆಲ್ಲಾ ನಾವು ನುಡಿಯಬಹುದು. ಆದರೆ ವಿಧಿ ಅವರೊಡನಿರುವಾಗಲೇ ಬರಬೇಕೆಂದಿಲ್ಲ. ನಮ್ಮವರು ದೂರವಿದ್ದಾಗಲೇ ಬಿರುಗಾಳಿಯಂತೆ ಅಪ್ಪಳಿಸಬಹುದು ಅಥವಾ ಮಿತ್ರರೇ ಕೈ ಕೊಡಬಹುದು. ಹಾಗಾಗಿ ವಿಧಿಯನ್ನು ಮೀರಿ ನಿಲ್ಲುವೆನೆನ್ನುವುದು ಮೂರ್ಖತನವಾದೀತು. ವಿಧಿಯನ್ನೇ ನಂಬದೇ ನಮ್ಮ ಕಾರ್ಯವನ್ನು ಮಾಡುತ್ತಲೇ ಇರಬೇಕು. ಆಗ ವಿಧಿಯೇ ಸಹಕಾರಿ ಆದರೂ ಆದೀತು._
*ಕೃತಪ್ರಜ್ಞೋ ಅಕೃತಪ್ರಜ್ಞೋ ಬಾಲೋ ವೃದ್ಧಶ್ಚ ಮಾನವಃ ಸಸಹಾಯೋ ಅಸಹಾಯಶ್ಚ ಸರ್ವಂ ಸರ್ವತ್ರ ವಿಂದತಿ*
_ಮನುಷ್ಯನು ಎಷ್ಟೇ ದೊಡ್ಡ ಜ್ಞಾನಿಯಾಗಿರಲಿ, ಎಷ್ಟೇ ಅಜ್ಞಾನಿಯಿರಲಿ, ಬಾಲಕನಾಗಿರಲಿ ಅಥವಾ ವೃದ್ಧನಾಗಿರಲಿ, ಹತ್ತಿರವೇ ಸಹಾಯಕರಿರಲಿ, ಯಾರೂ ಸಹಾಯಕರು ಇಲ್ಲದಿರಲಿ ಎಲ್ಲಾ ಕಡೆಯಲ್ಲಿಯೂ ಎಲ್ಲರನ್ನೂ ವಿಧಿಯೇ ನಡೆಸುತ್ತದೆ. ವಿಧಿಗನುಸಾರವಾಗಿಯೇ ಉತ್ತಮ ಅಥವಾ ಅಧಮ ಫಲ ಪಡೆಯವನು. ವಿಧಿ ಅಂದರೆ ಇಲ್ಲಿ ತಾನು ಮಾಡಿದ ಕರ್ಮಗಳ ಫಲ. ಹಿರಣ್ಯಕಶಿಪು ಎಲ್ಲ ಇದ್ದೂ ಅಂತ್ಯ ಕಂಡ. ವಸಿಷ್ಠ ಯಾರಿಲ್ಲದಿದ್ದರೂ ಬದುಕುಳಿದ. ಶಬರಿ ಅಜ್ಞಳಾದರೂ ಮೋಕ್ಷ ಪಡೆದಳು. ಕೌಶಿಕ ಸುಜ್ಞನಾದರೂ ಗುರುವನ್ನೇ ಸುಲಭವಾಗಿ ಪಡೆಯಲಿಲ್ಲ. ಹಾಗಾಗಿ ಕರ್ಮಫಲದ ಅನುಭವ ಮೀರಿ ನಡೆಯುತ್ತೇನೆನ್ನುವುದು ಮೂರ್ಖತನದ ಮಾತು._
http://shreenidhiabhyankar.blogspot.in/
ಮುಂದುವರಿಯುವುದು
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ