ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*शुचि: भूषयति श्रुतं वपु: प्रशमस्तस्य भवत्यलंक्रिया । प्रशमाभरणं पराक्रम: स नयापादितसिद्धिभूषण: ।।*
_ಭಾರವಿಯ ಮತ್ತೊಂದು ಸುಂದರ ಶ್ಲೋಕ. ಧರ್ಮಜನ ಮಾತು. ಭೀಮ, ಶಾಸ್ತ್ರಾಧ್ಯಯನವು ಅಥವಾ ಯಾವುದೇ ವಿದ್ಯೆಯ ಅಧ್ಯಯನವು ಗುರುಮುಖೇನ ಸಂಪ್ರದಾಯಬದ್ಧವಾಗಿ ಪಡೆದಾಗ ಮಾತ್ರ ಅದು ಮನುಷ್ಯನಿಗೆ ಶೋಭೆಯಾಗುತ್ತದೆ. ಗುರುಗಳ ನಿರ್ದೇಶದಂತೆ ಪರಿಶ್ರಮಪೂರ್ವಕ ಓದಿದಾಗ ಅದರಲ್ಲಿ ಶ್ರದ್ಧೆ ಹಾಗೂ ಆಸಕ್ತಿ ಹೆಚ್ಚಾಗಿರುತ್ತದೆ.ಹಾಗಿಲ್ಲದೆ ದುಡ್ಡು ಚೆಲ್ಲಿಯೋ, ಬೆದರಿಸಿಯೋ, ಸುಖವಾಗಿಯೋ ಕಲಿತರ ಅದರ ಮೌಲ್ಯದ ಅರಿವು ಎಂದಿಗೂ ಆಗಲಾರದು. ಕಲಿಯುವ ಉದ್ದೇಶವೂ ಈಡೇರದು. *ವಿದ್ಯಾ ರೂಪಂ ಕುರೂಪಾಣಾಮ್* ನೋಡಲು ಚೆನ್ನಾಗಿಲ್ಲದಿದ್ದರೂ ಶ್ರೇಷ್ಠ ವಿದ್ಯೆಯು ರೂಪವಂತನನ್ನಾಗಿಸುತ್ತದೆ. ಆ ವಿದ್ಯೆಯು ಮನಸ್ಸಿಗೆ ನೆಮ್ಮದಿಯನ್ನು ಯಾವಾಗ ಕರುಣಿಸುವುದೋ ಆಗ ಅದು ಸಾರ್ಥಕ. ಹಪಾಹಪಿಯನ್ನು ಸ್ಪರ್ಧೆಯನ್ನು ಅಸೂಯೆಯನ್ನು ಅವಿನಯವನ್ನು ಅಹಂಕಾರವನ್ನು ಬೆಳೆಸುವಂತಾಗಬಾರದು ಕಲಿತ ವಿದ್ಯೆ. ಮನಕ್ಕೆ ನೆಮ್ಮದಿಯನ್ನು ಶಾಂತಿಯನ್ನು ವಿನಯವನ್ನು ಕೇಳುವ ಮನೋಭಾವವನ್ನು ಬೆಳೆಸಬೇಕು. ಆಗ ಮಾತ್ರ ಗುರುಮುಖೇನ ಕಲಿತ ವಿದ್ಯೆ ಬಹುಕಾಲ ಉಳಿಯುತ್ತದೆ,ಗೌರವಿಸಲ್ಪಡುತ್ತದೆ. *ವಿದ್ಯೆಗೆ ವಿನಯವೇ ಭೂಷಣ* ಎಂದಿರುವುದು ಅದಕ್ಕಾಗಿಯೇ. ಆ ಶಾಂತಿಗೆ ಭೂಷಣ ಪರಾಕ್ರಮ. ಕಲಿತು ಸುಮ್ಮನೆ ಕೊಳೆಯದೆ ಪ್ರಯತ್ನಪೂರ್ವಕವಾಗಿ ವಿನಿಯೋಗಿಸಿದಾಗ ಅದು ಭೂಷಣವಾಗುವುದು. ಎಷ್ಟು ಕಲಿತರೂ ಸುಮ್ಮನೆ ಮನೆಯಲ್ಲಿ ಕುಳಿತರ ಜೀವನ ವನದಲ್ಲೂ ಸಾಧ್ಯವಾಗದು. ಕಲಿತ ವಿದ್ಯೆಯಿಂದ ಪ್ರಯತ್ನಪಟ್ಟು ಬದುಕನ್ನು ಕಂಡುಕೊಳ್ಳಬೇಕು. ಆಗ ಶಾಂತಿಯು ಶಾಶ್ವತವಾಗಿ ಉಳಿಯುತ್ತದೆ. ಪರಾಕ್ರಮವು ಅಥವಾ ಪರಿಶ್ರಮವು ಪ್ರಾಮಾಣಿಕತೆಯಿಂದ ಸಾರ್ಥಕತೆಯನ್ನು ಪಡೆಯುತ್ತದೆ. ಒಳ್ಳೆಯ ವಿದ್ಯೆ ಕಲಿತು, ವಿನಯ ಅಳವಡಿಸಿಕೊಂಡು, ಪರಿಶ್ರಮ ಪಟ್ಟು ಅಪ್ರಾಮಾಣಿಕನಾಗಿ ಕಾನೂನಿಗೆ ಮಾನವೀಯತೆಗೆ ದೇಶಹಿತಕ್ಕೆ ಜನಹಿತಕ್ಕೆ ವಿರುದ್ಧವನ್ನು ಆಚರಿಸಿದರೆ ಏನು ಪ್ರಯೋಜನ! ವಿದ್ಯೆ ಅವನನ್ನು ಅಥವಾ ಅವಳನ್ನು ಆಶ್ರಯಿಸಿಯೂ ವ್ಯರ್ಥವಾಗುವುದು. ನಯ ಅಂದರೆ ನೀತಿ. ನೀತಿಮಾರ್ಗದಲ್ಲಿ ಸಂಪಾದನೆ ನಡೆದಾಗ ಇವೆಲ್ಲವೂ ಅಲಂಕಾರ ಎನಿಸಿಕೊಳ್ಳುತ್ತವೆ. ಶಕ್ತಿ ಇದ್ದೂ ಸುಮ್ಮನಿದ್ದರೆ,ಶಕ್ತಿ ಇದೆಯೆಂದು ಅನ್ಯಾಯ ಮಾಡಿದರೆ ಎರಡೂ ತಪ್ಪು. ನಮ್ಮ ಶಕ್ತಿ ಸಾಮರ್ಥ್ಯ ವಿದ್ಯೆಗಳು ಸರಿಯಾದ ದಾರಿಯನ್ನು ಕಂಡುಕೊಂಡಾಗ ಅವುಗಳೆಲ್ಲವೂ ನಮಗೆ ಆಭರಣದಂತೆ ಶೋಭಿಸುತ್ತವೆ. ಇಲ್ಲದೆ ಹೋದರೆ ಅವುಗಳು ಕೇವಲ ಆವರಣ.ನಾಯಿಗೆ ಗೂಡು ಕಟ್ಟಿಕೊಟ್ಟ ಹಾಗೆ. ಭಾರವಿಯ ಮಾತು ನೂರಕ್ಕೆ ನೂರರಷ್ಟು ಸತ್ಯವಿದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ