ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*सहसा विदधीत न क्रियाम् अविवेक: परमापदां पदम् । वृणते हि विमृश्यकारिणां गुणलुब्धा: स्वयमेव सम्पद: ।।*

_ತಮ್ಮಾ, ಭೀಮ, ಆತುರ ಎಂದಿಗೂ ಸಲ್ಲದು. ವಿಮರ್ಶಿಸದೇ ಯಾವ ಕಾರ್ಯವನ್ನೂ ಮಾಡಬಾರದು.  ಏಕೆಂದರೆ ಅವಿಮರ್ಶೆಯು ಅಥವಾ ಅವಿವೇಕವು ಎಲ್ಲಾ ಆಪತ್ತುಗಳ ಮೂಲಸ್ಥಾನ. ಕೆಟ್ಟ ಪರಿಣಾಮಗಳಿಗೆ ಕಾರಣವು ಎಂದಿಗೂ ಅವಿವೇಕವೇ ಆಗಿದೆ. ಸರ-ತಪ್ಪುಗಳ ವಿವೇಚನೆ ಇಲ್ಲದೆ, ಸಮಯಾಸಮಯದ ವಿವೇಚನೆ ಇಲ್ಲದೆ,ವ್ಯಕ್ತಿ - ಪರಿಸ್ಥಿತಿ ವಿವೇಚನೆ ಇಲ್ಲದೆ, ಗುಣ- ದೋಷಗಳ ಲಾಭಾಲಾಭಗಳ ವಿವೇಚನೆ ಇಲ್ಲದೆ ಮಾಡುವ ಯಾವ ಕಾರ್ಯವೂ ಯಶಸ್ವಿಯಾಗುವುದು ಸಂಶಯ. ಅದರಿಂದ ಆಪತ್ತುಗಳ , ಅವಮಾನಗಳ, ಆತಂಕಗಳ, ಅವನತಿಯ ಪರಂಪರೆಯೇ ಎದುರಾದೀತು. ಹಾಗಾಗಿ ವಿಮರ್ಶಿಸಿ ಮುಂದಡಿ ಇಡುವುದು ಎಂದಿಗೂ ಒಳಿತು. ಹಾಗೆ ಯಾರು ವಿಚಾರ ಮಾಡಿ ಕೆಲಸ ಮಾಡುವನೋ ಅವನನ್ನು ಎಲ್ಲಾ ಸಂಪತ್ತುಗಳೂ ಆಶ್ರಯಿಸುತ್ತವೆ. ಗುಣಗಳನ್ನು ಬಯಸುವ ಬಗೆಬಗೆಯ ಸಂಪತ್ತುಗಳು ಕೀರ್ತಿ ಯಶಸ್ಸು ದುಡ್ಡು ಅಧಿಕಾರ ಪ್ರಶಸ್ತಿ ಪದವಿ ರಾಜ್ಯ ಇತ್ಯಾದಿಗಳೆಲ್ಲ ವಿಮರ್ಶಿಸಿ ಕಾರ್ಯ ಮಾಡುವವನನ್ನು ತಾವಾಗಿಯೇ ಆಶ್ರಯಿಸುತ್ತವೆ. ಸ್ವಯಂವರದಲ್ಲಿ ಹೇಗೆ ತುಂಬಾ ರಾಜಕುಮಾರರಿದ್ದರೂ ತನಗೆ ಅನುಕೂಲವಾಗುವನನ್ನು ಕನ್ಯೆ ವರಿಸುವಳೋ ಹಾಗೆಯೇ ವಿಮರ್ಶಿಸುವವನನ್ನು ಸಂಪತ್ತುಗಳು ವರಿಸುತ್ತವೆ. ವಿಮರ್ಶೆಯ ಮಹತ್ವ ಗೀತೆಯಲ್ಲೂ ಹೇಳಿದ್ದಾನೆ ಕೃಷ್ಣ. ನಾನು ಇಷ್ಟು ಹೊತ್ತು ಉಪದೇಶಿಸಿದ ವಿಷಯವನ್ನು ನೀನು ವಿಮರ್ಶಿಸಿ ನಿನಗೆ ಸರಿ ಎನಿಸಿದಂತೆ ಮಾಡು ಎನ್ನುತ್ತಾನೆ. ಅವನು ಸರಿಯಾದ ವಿಷಯವನ್ನೇ ಬೋಧಿಸಿದರೂ ವಿಮರ್ಶಿಸುವ ಬುದ್ಧಿ ಬಿಡದಿರು ಎಂಬ ಭಾವದಲ್ಲಿ ಹೇಳಿದ್ದು. ನಾವೂ ಯಾವುದೇ ಕರ್ಮಗಳನ್ನು ವಿಮರ್ಶಿಸಿ ನಡೆಸಿ ಯಶಸ್ಸು ಪಡೆಯೋಣ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು