ಮಹಾಭಾರತ ೩೨

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೩೨

_ಕರ್ಣ ತಾನು ಹೇಳಿದ ಮಾತಿಗೆ ಸಂಬಂಧಿಸಿದಂತೆ ಒಂದು ಕಥೆ ಹೇಳುತ್ತಿದ್ದಾನೆ. ಹಿಂದೆ ಮಗಧದೇಶದಲ್ಲಿ ( ಜರಾಸಂಧನ ವಂಶ) *ಅಂಬುವೀಚ* ಎಂಬ ರಾಜನಿದ್ದನು. ಅವನು‌ ಇಂದ್ರಿಯಗಳನ್ನೆಲ್ಲಾ ಕಳೆದುಕೊಂಡವನಾಗಿ ( ಸುಸ್ಥಿತಿಯಲ್ಲಿ ಇರದೇ) ಕೇವಲ ಉಸಿರಾಡುತ್ತಾ ಪ್ರತಿಯೊಂದು ಕೆಲಸಕ್ಕೂ ಮಂತ್ರಿಗಳನ್ನು ಅವಲಂಬಿಸಿದ್ದನು. ಮೊದಲು ಅಮಾತ್ಯನಾದ *ಮಹಾಕರ್ಣಿ* ಎಂಬುವನು ತಾನೇ ಆಳ್ವಿಕೆ ನಡೆಸುತ್ತಿದ್ದನು. ಬಲವು ತನ್ನ ವಶವಾಗಿರುವ ಕಾರಣ ರಾಜನನ್ನೇ ಕೆಲವೊಮ್ಮೆ ತಿರಸ್ಕರಿಸುತ್ತಿದ್ದನು. ಅಧಿಕಾರದಿಂದ ಮತ್ತನಾದ ಅವನು ರಾಜನ ಸ್ತ್ರೀಯರು, ಧನ, ರತ್ನ, ಐಶ್ವರ್ಯ ಎಲ್ಲವನ್ನೂ ತಾನೇ ಅನುಭವಿಸತೊಡಗಿದನು._

_ಲೋಭಿಯಾದ ಆ ಅಮಾತ್ಯನು ಅಷ್ಟಕ್ಕೂ ತೃಪ್ತನಾಗದೇ ರಾಜ್ಯವನ್ನೇ ಅಪಹರಿಸಲು ನಿಶ್ಚಯಿಸಿದನು. ಆದರೆ ಕೇವಲ ಉಸಿರಾಟ ನಡೆಸುತ್ತಿದ್ದರೂ ರಾಜನ ಸುಯೋಗದಿಂದ ಮಂತ್ರಿಯು ಅದನ್ನು ಪಡೆಯಲು ಅಸಮರ್ಥನಾದನು._

*ಕಿಮನ್ಯದ್ವಿಹಿತಾನ್ನೂನಂ ತಸ್ಯ ಸಾ ಪುರುಷೇಂದ್ರತಾ*
*ಯದಿ ತೇ ವಿಹಿತಂ ರಾಜ್ಯಂ ಭವಿಷ್ಯತಿ ವಿಶಾಂ ಪತೇ*

_ಅವನ ಆ ರಾಜತ್ವವು ವಿಧಿಯಿಂದ ನಿರ್ಣಯಿಸಲ್ಪಟ್ಟಿತ್ತು. ಹಾಗಾಗಿ ಯಾರು ಹೇಗೆ ಪ್ರಯತ್ನಿಸಿದರೂ ತಪ್ಪಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ಒಂದು ವೇಳೆ ನಿನಗೇ ರಾಜ್ಯವೆಂದು ವಿಧಿ ಬರೆದಿದ್ದರೆ ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಅದಿಲ್ಲದಿದ್ದಾಗ ನೀನು ಪ್ರಯತ್ನಿಸಿದರೂ ದೊರಕಲಾರದು. ಕರ್ಣನ ಈ ಸಲಹೆ ಪೌರುಷಕ್ಕೆ ವಿರುದ್ಧವಾದುದು‌. ನಮ್ಮ ಶಾಸ್ತ್ರಗಳ ಉಕ್ತಿ ಪರಿಶ್ರಮ ಪಡು, ಫಲ ದೊರಕುವುದು ಎನ್ನುವುದು. ಆದರಿಲ್ಲಿ ಸುಲಭವಾಗಿ ಸಿಕ್ಕಿದ್ದನ್ನು ತಿಂದು ಸುಮ್ಮನಿರು ಎನ್ನುವಂತಿದೆ._

_ಕರ್ಣನ ಮಾತನ್ನು ದ್ರೋಣರು ಸ್ವಲ್ಪ ಮಾತ್ರವೂ ಒಪ್ಪದೆ ತಿರಸ್ಕರಿಸಿದರು. ನಾನು ಹೇಳಿದ್ದಕ್ಕಿಂತ ಭಿನ್ನವಾದುದನ್ನು ಮಾಡಿದರೆ ಕೌರವರ ನಾಶ ಶೀಘ್ರದಲ್ಲಿಯೇ ನಿರೀಕ್ಷಿಸಬೇಕಾಗುವುದೆಂದನು._

*ನ ತ್ವಶುಶ್ರೂಷಮಾಣೇಷು ವಾಕ್ಯಂ ಸಂಪ್ರತಿಷ್ಠತಿ*

_ವಿದುರನ ಮಾತು. ಶ್ರೇಯಸ್ಸನ್ನು ಬಯಸುವ ಮಾತನ್ನು ಯಾರು ಆಡುವರೋ ಅವರೇ ನಿಜವಾದ ಬಂಧುಗಳು. ಇದರಲ್ಲಿ ಸಂದೇಹವೇ ಇಲ್ಲ. ಆದರೆ ಕೇಳಲು ಇಚ್ಛಿಸುವರಾಗಿರಬೇಕು. ಕಿವಿ ಮುಚ್ಚಿಕೊಂಡವರ ಬಳಿ ಕಿನ್ನರಿ ಊದಿಯೂ ಪ್ರಯೋಜನವಿಲ್ಲ. ಧೃತರಾಷ್ಟ್ರನಿಗೆ ಹಿತವಾದುದನ್ನೇ ಭೀಷ್ಮರೂ ದ್ರೋಣರೂ ಹೇಳಿದ್ದಾರೆ. ಇವರಿಬ್ಬರು ವಯಸ್ಸಿನಲ್ಲಿ, ಜ್ಞಾನದಲ್ಲಿ, ವಿದ್ಯೆಯಲ್ಲಿ ಹಿರಿಯರು. ಪಾಂಡವ ಕೌರವರ ಬಗೆಗೆ ಸಮ ಭಾವ ಉಳ್ಳವರು. ಧೃತರಾಷ್ಟ್ರನ ಮಿತ್ರರೂ ಕೂಡ. ಧರ್ಮದಲ್ಲಾಗಲಿ, ಸತ್ಯದಲ್ಲಾಗಲಿ ದಶರಥ ಸುತ ರಾಮನಿಗೂ, ಗಯನಿಗೂ ಇವರು ಕಡಿಮೆಯೇನಲ್ಲ.  ಆದರೆ ನೀನು ಮಾತ್ರ ಇವರ ಮಾತನ್ನು ತೆರೆದ ಮನದಿಂದ ಕೇಳಲು ಸಿದ್ಧನಾಗಬೇಕು. ಹಾಗಿಲ್ಲದಿದ್ದಾಗ ಅವರೆಷ್ಟು ಉಪದೇಶಿಸಿದರೂ ಎಲ್ಲವೂ ಗಾಳಿ ಮಾತಾಗುವುದು.ಹಿಂದೆಯೂ ನಿನಗೆ ಕೇಡು ಬಗೆದವರಲ್ಲ. ಇವರು ಹಣಕ್ಕಾಗಿ ಒಂದು ಪಕ್ಷ ಹಿಡಿದು ಮಾತನಾಡುವರಲ್ಲ. ಹಾಗಾಗಿ ಇವರ ಮಾತನ್ನು ಕೇಳು ಎಂದನು.ವಿದುರ ಇನ್ನೂ ಕೆಲವು ಸೂಕ್ತಿ ನುಡಿಯುವನು._


http://shreenidhiabhyankar.blogspot.in/

ಮುಂದುವರಿಯುವುದು

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩