ರಾಮಾಯಣ ೮೨
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೨
*ಸಮೀಕ್ಷ್ಯ ತೂರ್ಣಮಾಯಾಂತಂ ಆಬಭಾಷೇ ನಿಶಾಚರಃ ಸುಗ್ರೀವಸ್ತ್ವಂ ಪರೋಕ್ಷಂ ಮೇ ಹೀನಗ್ರೀವೋ ಭವಿಷ್ಯಸಿ*
_ರಾವಣನ ಮಾತು. ಸುವೇಲ ಪರ್ವತದಲ್ಲಿ ನಿಂತು ರಾಮಾದಿಗಳು ರಾವಣನ ಒಡ್ಡೋಲಗವನ್ನು ವೀಕ್ಷಿಸುತ್ತಾರೆ. ಈಗಿನಂತೆ ದೂರದರ್ಶಕದ ಸಹಾಯ ಇಲ್ಲದಿದ್ದರೂ ಬೇರಾವುದೋ ಉಪಕರಣದ ಸಹಾಯ ಪಡೆಯುತ್ತಿದ್ದಿರಬೇಕು ಅಥವಾ ಅವರ ದೂರದೃಷ್ಟಿ ಚೆನ್ನಾಗಿದ್ದಿರಬೇಕು. ಏಕೆಂದರೆ ಯಾವ ಪರ್ವತ ಶಿಖರ ಏರಿ ನೋಡಿದರೂ ರಾವಣನ ಎದೆಯ ಮೇಲಿದ್ದ ಐರಾವತದ ಕೊಂಬಿನ ತಿವಿತದ ಗಾಯ ಕಾಣಲಾರದು. ಹಾಗೆ ಕಂಡ ಕಾರಣ ಅವರ ಸಾಮರ್ಥ್ಯ ಅಸಾಧಾರಣವಾಗಿತ್ತು ಅಥವಾ ಏನೋ ಪ್ರಾಚೀನ ಉತ್ತಮ ಉಪಕರಣದ ಬಳಕೆ ಇತ್ತೆನ್ನಬಹುದು. ಸುಗ್ರೀವ ಥಟ್ಟನೆ ಹಾರಿ ರಾವಣನಿದ್ದಲ್ಲಿಗೆ ಬಂದು ಕಾದಾಡುತ್ತಾನೆ. ಆಗ ರಾವಣನ ಸಿಟ್ಟಿನ ಮಾತು. ನೀನು ಉತ್ತಮವಾದ ಕಂಠದಿಂದ ಸುಂದರನಾಗಿ ಶೋಭಿಸುತ್ತಿರುವೆ. ಆದರೀಗ ನಾನು ನಿನ್ನ ಕುತ್ತಿಗೆಯನ್ನೇ ಕಿತ್ತು ಹಾಕುವೆನು ಎಂದು ಗದರಿಸುತ್ತಾನೆ. ಅವರ ನಡುವೆ ಸಾಕಷ್ಟು ಹೊಡೆದಾಟ ನಡೆಯುತ್ತದೆ._
*ಮಂಡಲಾನಿ ವಿಚಿತ್ರಾಣಿ ಸ್ಥಾನಾನಿ ವಿವಿಧಾನಿ ಚ. ಗೋಮೂತ್ರಿಕಾಣಿ ಚಿತ್ರಾಣಿ ಗತಪ್ರತ್ಯಾಗತಾನಿ ಚ*
_ಇಲ್ಲಿ ಕುಸ್ತಿಯ ನಾನಾ ಪಟ್ಟುಗಳನ್ನು ವಾಲ್ಮೀಕಿಗಳು ಉಲ್ಲೇಖಿಸಿದ್ದಾರೆ. ಮಂಡಲ ಅಂದರೆ ಗರಗರನೆ ತಿರುಗುವುದು. ಒಂದೇ ಕಾಲಿನಿಂದ ತಿರುಗುವ ಕ್ರಿಯೆಗೆ ಚಾರಿ ಎಂಬ ಹೆಸರು. ಎರಡು ಕಾಲಿನಿಂದಲೂ ಅತ್ತಿತ್ತ ಸುತ್ತುವುದಕ್ಕೆ ಕರಣ ಎಂಬ ಹೆಸರು. ಇಂತಹ ಬೇರೆ ಬೇರೆ ಚಾರಿ ಮತ್ತು ಕರಣಗಳ ಸಮುದಾಯಕ್ಕೆ ಖಂಡ ಎನ್ನುತ್ತಾರೆ. *ಸ್ಥಾನ* ಪಾದಗಳನ್ನು ಹಿಂದೆ ಮುಂದೆ ಅಥವಾ ಪಕ್ಕಕ್ಕೆ ನೀಡಿ ಸಿಂಹ ಹುಲಿ ಮುಂತಾದ ಪ್ರಾಣಿಗಳಂತೆ ನಿಲ್ಲುವ ಸ್ಥಿತಿ. ಇದು ವೈಷ್ಣವ,ಸಮಪಾದ, ವೈಶಾಖ, ಮಂಡಲ, ಪ್ರತ್ಯಾಲೀಢ, ಅನಾವಿದ್ಧ ಎಂದು ಆರು ಬಗೆ._
_*ಗೋಮೂತ್ರಿಕಾ* ಗೋವು ಮೂತ್ರ ಮಾಡುವಂತೆ ವಕ್ರವಕ್ರವಾಗಿ ಸಂಚರಿಸುವುದು. *ಗತ* ಶತ್ರುವಿನ ಮೇಲೆ ಥಟ್ಟನೆ ನುಗ್ಗುವುದು. *ಪ್ರತ್ಯಾಗತ* ಶತ್ರುವಿನ ಬಳಿಯಿಂದ ಥಟ್ಟನೆ ಹಿಂದಕ್ಕೆ ಸರಿಯುವುದು. *ತಿರಶ್ಚೀನಗತ* ಅಡ್ಡ ಸರಿಯುವುದು. *ವಕ್ರಗತ* ಅಡ್ಡಾದಿಡ್ಡಿ ಸುತ್ತುವುದು. *ಪರಿಮೋಕ್ಷ* ಶತ್ರುವಿನ ಪ್ರಹಾರದಿಂದ ತಪ್ಪಿಸಿಕೊಳ್ಳುವುದು. *ವರ್ಜನ* ತನ್ನ ಏಟು ತಾಗದೆಂದು ಅನಿಸಿದಾಗ ಸುಮ್ಮನಿರುವುದು. *ಪರಿಧಾವನ* ಶತ್ರುವು ನಿಂತಾಗ ಸುತ್ತಲೂ ಓಡುವುದು. *ಅಭಿದ್ರವಣ* ಶತ್ರುವಿನ ಮೇಲೆ ಬಹುರಭಸದಿಂದ ನುಗ್ಗುವುದು. *ಆಪ್ಲಾವ* ಶರೀರವನ್ನು ಬಗ್ಗಿಸಿ ಕಪ್ಪೆಯಂತೆ ಹೋಗುವುದು. *ಆಸ್ಥಾನ* ಸುಮ್ಮನೆ ಎದುರಿಗೆ ನಿಲ್ಲುವುದು. *ಪರಾವೃತ್ತ* ಮುಖವನ್ನು ಹಿಂದಿರುಗಿಸಿಕೊಂಡು ಹಿಂದಕ್ಕೆ ಬರುವುದು. *ಅಪಾವೃತ್ತ* ನಿಂತ ಸ್ಥಳದಲ್ಲೇ ಪಕ್ಕಕ್ಕೆ ವಾಲುವುದು. *ಅವದ್ರುತ* ಶತ್ರುವನ್ನು ಗಪ್ಪನೆ ಹಿಡಿಯಬೇಕೆಂದು ಥಟ್ಟನೆ ಬಾಗುವುದು. *ಅವಪ್ಲುತ* ಶತ್ರುವನ್ನು ಒದೆಯಬೇಕೆಂದು ಸ್ವಲ್ಪ ಬಗ್ಗಿ ಮುಂದಕ್ಕೆ ಹಾರುವುದು. *ಉಪನ್ಯಸ್ತ* ಶತ್ರುವಿನ ಕೈಯನ್ನು ಹಿಡಿಯುವುದಕ್ಕಾಗಿ ಕೈ ನೀಡುವುದು. *ಅಪನ್ಯಸ್ತ* ಶತ್ರುವಿನ ಹಿಡಿತವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ತನ್ನ ತೋಳನ್ನು ಸರಿಸುವುದು. ಹೀಗೆ ಬಹುಕಾಲ ಕಾದಾಡಿ ಇಬ್ಬರೂ ದಣಿಯದಿದ್ದಾಗ ರಾವಣನು ಮಾಯೆಯಿಂದ ಬಹುರೂಪ ತಾಳಿದನು. ಅದನ್ನರಿತ ಸುಗ್ರೀವನು ಒಡನೆ ಹಾರಿ ತನ್ನ ಪಕ್ಷಕ್ಕೆ ಹಿಂತಿರುಗಿದನು. ಹೀಗೆ ಮಾಡುವ ಮೂಲಕ ರಾಮಪಕ್ಷದ ಉತ್ಸಾಹವನ್ನು ವರ್ಧಿಸಿದನು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ