ಪದಶಕ್ತಿ ೨೪
📝📕ಪದ ಶಕ್ತಿ ೨೩📕📝
*ವಿನಾಯಕ*
_ಗಣಪತಿಯ ಪ್ರಸಿದ್ಧ ಹೆಸರುಗಳಲ್ಲಿ ಇದೂ ಒಂದು. ಗಣಪತಿಯ ಪರ್ಯಾಯ ಮಾತ್ರವಲ್ಲ. ಬುದ್ಧನೂ ವಿನಾಯಕನೇ, ಗರುಡನೂ ವಿನಾಯಕನೇ, ವಿಘ್ನಗಳೂ ವಿನಾಯಕವೇ, ಜ್ಞಾನ ಕೊಡುವ ಗುರುವೂ ವಿನಾಯಕನೇ ಸರಿ. ಯಾರಾದರೂ ವಿನಾಯಕ ಎಂದು ಕರೆದರೆ ಯಾವ ಅರ್ಥ ಬೇಕಾದರೂ ಹೊಂದಿಸಿಕೊಳ್ಳಿ. ಹಾಗಾದರೆ ಶಬ್ದಾರ್ಥ ಏನೆಂದು ನೋಡಿದರೆ- ವಿಗತಃ ನಾಯಕಃ ಅಥವಾ ವಿಶಿಷ್ಟೋ ನಾಯಕಃ ಎಂದು ವ್ಯುತ್ಪತ್ತಿ. ವಿಶಿಷ್ಟವಾದ ಗಮನವುಳ್ಳ ನಾಯಕರಲ್ಲಿ ಒಬ್ಬ ಗಣಪತಿ. ಸಣ್ಣ ಮೂಷಿಕದ ಮೇಲೆ ಬೃಹತ್ ಶರೀರದ ಭಾರ ಹೊರಿಸಿ ಮಂದಗತಿಯಲ್ಲಿ ಹೋಗುವವನು. ಶೀಘ್ರಫಲ ಕೊಡುವ ಪ್ರಮಥಾಧಿಪನೂ ಇವನೇ ಆಗಿದ್ದಾನೆ. ಹಾಗಾಗಿ ನಡಿಗೆ ನಿಧಾನ ಎಂದಾಕ್ಷಣ ಕಾರ್ಯವೂ ನಿಧಾನ ಎಂದಲ್ಲ. ನಿಧಾನವೇ ಪ್ರಧಾನ ಎಂಬ ತತ್ವ ಕೆಲವೆಡೆ ಮಾತ್ರ. ವಿಶಿಷ್ಟನಾದ ನಾಯಕನೂ ಇವನೇ ಹೌದು. ಎಲ್ಲೇ ಯಾರಿಗೇ ತೊಂದರೆ ಬಂದರೂ ಕಾರ್ಯಸಿದ್ಧಿಯಾಗಲು ಸಹಕಾರ ಕೊಡುವವನು. ಮೊದಲ ಪೂಜೆ ಪಡೆಯುವ ದೇವನಾಯಕನೂ ಇವನೇ. ವಿಘ್ನಸಿಧ್ಯರ್ಥಂ ನಿಯುಕ್ತಃ ವಿನಾಯಕಃ ದೇವೈಃ ಎಂದಿದ್ದಾರೆ ಯಾಜ್ಞವಲ್ಕ್ಯರು. ಹಾಗಾಗಿ ದೇವತೆಗಳಿಂದ ಶುಭಕಾರ್ಯಗಳ ವಿಘ್ನಪರಿಹಾರಕ್ಕಾಗಿ ನಿಯಮಿಸಲ್ಪಟ್ಟವನು ವಿನಾಯಕ. ನಮ್ಮಲ್ಲಿ ನಾಯಕತ್ವ ತಂದುಕೊಡಲೆಂದು ಪ್ರಾರ್ಥಿಸೋಣ._
ಸಾಹಿತ್ಯದ ಸಾವಿರಾರು ಕಡೆ ಈ ಪದ ಕಾಣಬಹುದು.
अस्तीह प्रमदोद्याने तरुमण्डलमध्यगः । दृष्टप्रभावो वरदो देवदेवो विनायकः ॥ ಕಥಾಸರಿತ್ಸಾಗರದ ಈ ಮಾತಿನಲ್ಲಿ ಗಣಪತಿಯನ್ನು ಪ್ರಭಾವಶಾಲಿಯೆಂದೂ ವರದನೆಂದೂ ದೇವರದೇವನೆಂದೂ ಸ್ತುತಿಸಿದ್ದಾರೆ.
ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ ||
ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ||
ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ
ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ
ಅಂದಾಜು ಪುರಂದರ ದಾಸರ ಈ ಕೃತಿಯಲ್ಲಿ ಏಕವಿಂಶತಿ ಪತ್ರ ಪೂಜಿತನು ವಿನಾಯಕನೆಂದು ಸ್ತುತಿಸಿದ್ದಾರೆ.
ಸಂಗ್ರಹ. ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗಾಗಿ ವೀಕ್ಷಿಸಿ http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ