ರಾಮಾಯಣ ೧೩೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೩೧

*ತಸ್ಯ ತದ್ವಚನಂ ಶ್ರುತ್ವಾ ರಾಘವಃ ಶೋಕಮೂರ್ಛಿತಃ ನಿಪಪಾತ ತದಾ ಭೂಮೌ ಛಿನ್ನಮೂಲ ಇವ ದ್ರುಮಃ*

_ಸೀತೆಯ ಬಗೆಗೆ ರಾಮನ ಒಲವು ಎಷ್ಟು ತೀವ್ರವಾಗಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಹನುಮಂತ ಸೇನೆಯನ್ನು ಸಂರಕ್ಷಿಸುತ್ತಾ ಯುದ್ಧದಿಂದ ಹಿಂತಿರುಗಿ ನೇರವಾಗಿ ರಾಮನ ಬಳಿ ಬಂದು ಅಮ್ಮ ಜಾನಕಿಯನ್ನು ರಾವಣಿ ಕೊಂದನು ಎಂದಾಗ ಕೇಳುತ್ತಿದ್ದಾ ರಾಮನು ಒಡನೆಯೇ ಮೂರ್ಛೆ ತಪ್ಪಿದನು. ದುಃಖದ ತೀವ್ರತೆ ಮನುಷ್ಯನ ಪ್ರಜ್ಞೆಯನ್ನು ಮರೆಸುತ್ತದೆ. ವಿಷಯ ಸತ್ಯ ಇರಲಿ ಸುಳ್ಳಿರಲಿ ಕೇಳಿದ ತಕ್ಷಣ ಆಗುವ ಆಘಾತ ಅಪಾರ. ರಾಮನು ಸೀತೆಯ ಮೇಲಿನ ತನ್ನ ತುಂಬಾ ಪ್ರೀತಿಯ ಕಾರಣ ಒಮ್ಮೆ ಆಘಾತಕ್ಕೆ ಒಳಗಾಗಿ ಬುಡವನ್ನು ಕತ್ತರಿಸಿದ ಮರದಂತೆ ಎಚ್ಚರ ತಪ್ಪಿ ಬಿದ್ದನು. ರಾಮನ ಪ್ರೀತಿ ತೋರಿಕೆಗೆ ಮಾತ್ರ ಎಂದೆಲ್ಲಾ ಬಡಬಡಿಸುವ ಈಗಿನ ಬುದ್ಧಿಜೀವಿಗಳು ಈ ಘಟನೆಯ ಬಗೆಗೆ ಏನನ್ನುವರೋ? ಕಪಿಗಳು ಆ ಕೂಡಲೇ ತಾವರೆ ಹಾಗೂ ನೈದಿಲೆಯ ನೀರನ್ನು ರಾಮನ ಮುಖಕಮಲಕ್ಕೆ ಸಿಂಪಡಿಸಿದರು. ಮೂರ್ಛೆ ಹೋದರೂ ತೇಜೋವಂತನಾದ ಅವನನ್ನು ಮುಟ್ಟುವ ಧೈರ್ಯ ಯಾರಿಗೂ ಕಾಣದಿದ್ದಾಗ ಲಕ್ಷ್ಮಣನು ದುಃಖದಿಂದ ಬಳಲುತ್ತಿದ್ದ ಅಣ್ಣನನ್ನು ಎರಡು ತೋಳುಗಳಿಂದ ಬರಸೆಳೆದು ಸಂತೈಸಿದನು. ದುಃಖಿತರಿಗೆ ಮೊದಲ ಸಮಾಧಾನವೇ ಅಪ್ಪುಗೆ. ಅಪ್ಪುಗೆಯ ಆತ್ಮೀಯತೆಯು ಕೆಲವು ಕಾಲಕ್ಕಾದರೂ ಎಲ್ಲವನ್ನೂ ಮರೆಸುತ್ತದೆ. ನಮ್ಮ ಪಾಲಿಗೆ ಯಾರಾದರೂ ಇದ್ದಾರೆಂಬ ಭರವಸೆಯನ್ನು ಮೂಡಿಸುತ್ತದೆ._

*ಭೂತಾನಾಂ ಸ್ಥಾವರಾಣಾಂ ಚ ಜಂಗಮಾನಾಂ ಚ ದರ್ಶನಮ್ ಯಥಾಸ್ತಿ ನ ತಥಾ ಧರ್ಮಸ್ತೇನ ನಾಸ್ತೀತಿ ಮೇ ಮತಿಃ*

_ಅಣ್ಣನನ್ನು ಸಂತೈಸುತ್ತಾ ಸೌಮಿತ್ರಿಯು ರಾಮನಿಗೊದಗಿದ ಅವಸ್ಥೆಗೆ ಕೋಪಗೊಂಡು ಧರ್ಮದ ನಿಂದೆಗೆ ತೊಡಗುವನು. ಅಣ್ಣ, ಧರ್ಮವು ನಿರರ್ಥಕ, ಈ ಯಾವ ಅನರ್ಥಗಳಿಂದಲೂ ಅದು ನಿನ್ನನ್ನು ಪಾರು ಮಾಡಲಿಲ್ಲ, ಜಿತೇಂದ್ರಿಯನಾಗಿ ಸದಾಚಾರರತನಾದವನು ನೀನು, ಆದರೆ ಏನು ಪ್ರಯೋಜನ? ಧರ್ಮವೆಂಬುದು ವಸ್ತುತಃ ಇಲ್ಲವೇ ಇಲ್ಲ, ಸ್ಥಾವರ ಅಥವಾ ಜಂಗಮ ಈ ಜಗದ ವಸ್ತುಗಳನ್ನು ನೋಡಿದರೆ ನನಗೆ ಧರ್ಮವಿಲ್ಲವೆಂದೇ ಅನಿಸುತ್ತದೆ‌. ಸ್ಥಾವರ ಮರಗಿಡ ಮೊದಲಾದವು ಹಾಗೆಯೇ ಜಂಗಮ ಕುದುರೆ ಆನೆ ಮೊದಲಾದ ಪ್ರಾಣಿಗಳು ಸುಖವಾಗಿವೆ. ಅವು ಯಾವ ಧರ್ಮದ ಆಚರಣೆಯನ್ನೂ ಮಾಡುವುದಿಲ್ಲ. ಹಾಗಾಗಿ ಧರ್ಮವು ಸುಖಹೇತುಕ ಎನ್ನುವ ಮಾತು ಸುಳ್ಳು. ಧರ್ಮ ಆಚರಿಸದೆಯೇ ಸುಖ ಇದೆ. ಹೀಗೆ ತುಂಬಾ ಮಾತುಗಳಿಂದ ಧರ್ಮದ ನಿಂದೆ ಮಾಡುತ್ತಾನೆ. ಮಾನವನ ಸಹಜ ಸ್ವಭಾವದ ಪರಿಚಯ ಕವಿಯ ಈ ನಡೆಯಲ್ಲಿದೆ. ದುಃಖಗಳು ಮೇಲಿಂದ ಮೇಲೆ ಒದಗಿದಾಗ ರಕ್ಷಕನು ಅಥವಾ ನಿವಾರಕನು ಯಾರು ಎಂಬ ಪ್ರಶ್ನೆ ಒದಗಿ ಇಂತಹ ಮನೋಭಾವ ಮನೆಮಾಡುತ್ತದೆ. ಅದೇ ಸುಖ ಅನುಭವಿಸುವ ಹೊತ್ತಲ್ಲಿ ಧರ್ಮದ ಅಥವಾ ದೇವನ ನೆನಪು ಮಾನವರಿಗೆ ಆಗುವುದು ಬಹಳ ಕಡಿಮೆ. ಲಕ್ಷ್ಮಣ ಕೋಪದಲ್ಲಿರುವ ಕಾರಣ ಹೀಗೆ ಮಾತಾಡಿದನೇ ಹೊರತು ಅದೇ ಅವನ ಅಭಿಪ್ರಾಯವಲ್ಲ. ನಾವೂ ಕೋಪದಲ್ಲಿ ಕೆಲವೊಮ್ಮೆ ಆತ್ಮೀಯರಿಗೆ ನಿಂದಿಸುತ್ತೇವೆ. ಆದರೆ ಕೋಪ ಕರಗಿದ ಮೇಲೆ ನಮ್ಮ ಮನದಲ್ಲಿ ಅವರ ಬಗೆಗಿನ ಪ್ರೀತಿ ಹಾಗೆಯೇ ಇರುತ್ತದೆ. ಅಂತೆಯೇ ಇಲ್ಲೂ ಕೂಡ ಲಕ್ಷ್ಮಣನ ಮಾತುಗಳು._


ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/


ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩