ರಾಮಾಯಣ ೧೨೫

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೫

*ನೈರ್ಋತೇಂದ್ರ ಮಹಾವೀರ್ಯ ಸ್ವರೇಣ ತ್ವಾಭಿಲಕ್ಷಯೇ ಪೀಡ್ಯಮಾನಃ ಶಿತೈರ್ಬಾಣೈರ್ನತ್ವಾಂ ಪಶ್ಯಾಮಿ ಚಕ್ಷುಷಾ. ಅಂಜನಾ ಸುಪ್ರಜಾ ಯೇನ ಮಾತರಿಶ್ವಾ ಸ ನೈರ್ಋತ ಹನುಮಾನ್ ವಾನರಶ್ರೇಷ್ಠಃ ಪ್ರಾಣಾನ್ ಧಾರಯತೇ ಕ್ವಚಿತ್*

_ವಿಭೀಷಣ ಹಾಗೂ ಹನುಮರು ಸೇನೆಯ ನಡುವೆ ಜಾಂಬವನನ್ನು ಅರಸುತ್ತಾ ಹೊರಟರು. ಕೆಲಕಾಲದ ನಂತರ ಒಂದೆಡೆ ಬಿದ್ದು ನೂರಾರು ಬಾಣಗಳು ನಾಟಿ ಆರಿಹೋಗುವ ಅಗ್ನಿಯಂತೆ ತೋರುತ್ತಿದ್ದ ಅವನನ್ನು ಉಪಚರಿಸಿ ಮಾತನಾಡಿಸಿದಾಗ ಅವನಾಡುವ ಮಾತು. ಧ್ವನಿಯಿಂದ ಮಾತ್ರ ನಿನ್ನನ್ನು ಗುರುತಿಸುತ್ತಿದ್ದೇನೆ. ಅಸ್ತ್ರಗಳ ಹೊಡೆತದಿಂದ ಕಣ್ಣಿನ ದೃಷ್ಟಿ ಹೊರಟು ಹೋಗಿದೆ. ವಿಭೀಷಣ, ಯಾವ ಅಂಜನೆಯು ಸುಪುತ್ರನನ್ನು ಹಡೆದಳೋ, ವಾಯುವು ಯಾವನಿಗೆ ಜನ್ಮವಿತ್ತನೋ  ಆ ವಾನರೋತ್ತಮನು ಬದುಕಿರುವನೇ? ವಿಭೀಷಣನಿಗೆ ಅವನ ಮಾತು ಕೇಳಿ ಆಶ್ಚರ್ಯವಾಗಿ  ಹೀಗೆ ಪ್ರಶ್ನಿಸುತ್ತಾನೆ- ಆರ್ಯರಾದ ರಾಮಲಕ್ಷ್ಮಣರ ಯೋಗಕ್ಷೇಮ ಬಿಟ್ಟು ಹನುಮನನ್ನು ಕೇಳುತ್ತಿರುವೆಯಲ್ಲಾ, ಸುಗ್ರೀವನೋ ಅಂಗದನೋ ಹೇಗಿರುವನೆಂದು ಕೇಳುವ ಬದಲು ಅತಿಶಯವಾದ ಸ್ನೇಹ ಇವನಲ್ಲೇಕೆ ಎಂದು ಸಹಜವಾಗಿ ಪ್ರಶ್ನಿಸುತ್ತಾನೆ. ಆಗ ಅವನಾಡುವ ಮಾತು ಯುದ್ಧದಲ್ಲಿ ಮಾರುತಿಯ ಮಹತ್ವವನ್ನು ಸಾರುತ್ತದೆ._

*ತಸ್ಮಿನ್ಜೀವತಿ ವೀರೇ ತು ಹತಮಪ್ಯಹತಂ ಬಲಮ್ ಹನುಮತ್ಯುಜ್ಝಿತಪ್ರಾಣೇ ಜೀವಂತೋಪಿ ವಯಂ ಹತಾಃ.....ಜೀವಿತಾಶಾ ತತೋ ಭವೇತ್*

_ಜಾಂಬವನ ಮಾತು. ಅವನೊಬ್ಬನಿದ್ದರೆ ಈ ಸೇನೆ ನಾಶವಾಗಿದ್ದರೂ ನಾಶವಾಗದೆಂದು ತಿಳಿ. ಅವನೇನಾದರೂ ಪ್ರಾಣ ಬಿಟ್ಟಿದ್ದರೆ ನಾವೆಲ್ಲರೂ ಬದುಕಿದ್ದೂ ಸತ್ತಂತೆಯೇ ಸರಿ. ನಮ್ಮೆಲ್ಲರ ಪ್ರಾಣವಾಯುವಿನಂತೆ ಅವನಿದ್ದಾನೆ. ಪರಾಕ್ರಮದಲ್ಲಿ ವೈಶ್ವಾನರನಂತೆ ಅವನು. ಅವನು ಜೀವಿಸಿದ್ದರೆ ಮಾತ್ರ ನಮಗೆ ಪ್ರಾಣದಲ್ಲಿ ಆಸೆ ಹುಟ್ಟೀತು. ಜಾಂಬವಂತನಿಗೆ ಹನುಮನ ಚಿರಂಜೀವಿತ್ವ ಗೊತ್ತಿರಬೇಕು. ಆದರೂ ಬ್ರಹ್ಮಾಸ್ತ್ರದ ಪ್ರಭಾವ ಯಾರನ್ನೂ ಬಿಡದೆಂಬ ಭಾವದಿಂದ ಅಥವಾ  ಸಾಯದಿದ್ದರೂ ಅಂಗಾಂಗಹೀನನಾದನೋ ಎಂಬ ಸಂಶಯದಲ್ಲಿ ಕೇಳಿದ್ದಿರಬಹುದು. ಪ್ರಾಣವೇ ಹೋದ ಮೇಲೆ ಇಂದ್ರಿಯಗಳು ಗಟ್ಟಿಯಾಗಿ, ಮನಸ್ಸು ಸರಿಯಾಗಿ ಕಾರ್ಯನಿರ್ವಹಿಸಿದರೆ ಏನು ಪ್ರಯೋಜನ! ಹನುಮನು ಆ ಇಡೀ ಸೈನ್ಯದ ಪ್ರಾಣವಾಯುವಿನಂತೆ ಇದ್ದನು. ಮುಂದೆ ಮಹಾಭಾರತ ಯುದ್ಧದಲ್ಲೂ ಇದೇ ಹನುಮನು ಪ್ರಾಣನೆನಿಸಿದ ಕೃಷ್ಣನ ಜೊತೆಗೆ ರಥದ ಧ್ವಜದಲ್ಲೂ ನೆಲೆಸಿದ್ದು ವಿಶೇಷ. ಬ್ರಹ್ಮಾಸ್ತ್ರ ಎಂಬುದು ಬಹುಶಃ ಒಂದು ಶಸ್ತ್ರಾಸ್ತ್ರಗಳ ಗುಂಪು. ಅನೇಕ ಶಸ್ತ್ರಾಸ್ತ್ರಗಳು ಒಟ್ಟಿಗೆ ದಾಳಿ ಮಾಡುವ ವಿಧಾನವೇ ಬ್ರಹ್ಮಾಸ್ತ್ರ ಇರಬೇಕು. ಈಗಿನ ಕೆಲವು ಸುಧಾರಿತ ಶಸ್ತ್ರಗಳ ರೀತಿಯಲ್ಲಿ ಏಕಕಾಲದಲ್ಲಿ ಎಲ್ಲೆಡೆ ಆಕ್ರಮಿಸುವ ತಂತ್ರಜ್ಞಾನ ಬಹುಶಃ ಅದರಲ್ಲಿ ಅಡಕವಾಗಿದ್ದಿರಬೇಕು. ಹನುಮನು ಅಷ್ಟು ಪರಾಕ್ರಮಿಯಾದರೂ ಜಾಂಬವನನ್ನು ಕಂಡು ಕೂಡಲೇ ಪಾದಮುಟ್ಟಿ ನಮಸ್ಕರಿಸಿದನು. ನಾವೀಗ ನಮಗಿಂತ ಹಿರಿಯರಿಗೆ ಕಾಲು ಹಿಡಿಯುವುದಿರಲಿ ಕೈಯಿಂದ ನಮಸ್ಕಾರ ಮಾಡಲೂ ಯೋಚನೆ ಮಾಡುತ್ತೇವೆ. ಹನುಮನ ಭಜನೆ ಮಾಡುವ ನಮಗಿದು ನಿಜಕ್ಕೂ ನಾಚಿಕೆಯ ವಿಷಯ.ಮುಂದೆ ಹನುಮನಿಗೆ ಮುಖ್ಯ ಕಾರ್ಯವೊಂದನ್ನು ವಹಿಸುತ್ತಾನೆ ಜಾಂಬವ. ಅದೇನೆಂದು ಮುಂದಿನ ಅಂಕಣದಲ್ಲಿ ನೋಡೋಣ._

ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩