ರಾಮಾಯಣ ೧೨೮
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೮
*ಸ ಹಿ ಧೂಮಾಂಧಕಾರಂ ಚ ಚಕ್ರೇ ಪ್ರಚ್ಛಾದಯನ್ನಭಃ ದಿಶಶ್ಚಾಂತರ್ದಧೇ ಶ್ರೀಮಾನ್ನೀಹಾರತಮಸಾವೃತಾಃ*
_ಯಜ್ಞದಿಂದ ಪ್ರಸನ್ನರಾದ ದೇವತೆಗಳ ವರಬಲದಿಂದ ಕೊಬ್ಬಿದ ಇಂದ್ರಜಿತು ಮಾಯಾಯುದ್ಧವನ್ನು ನಡೆಸುತ್ತಾನೆ. ಅವನ ಅಸ್ತ್ರ ಶಸ್ತ್ರಗಳು ರಾಮ ಸೌಮಿತ್ರಿಯರನ್ನು ತಾಕಿ ನೆತ್ತರು ಹರಿಸುತ್ತಿದ್ದವು. ಆದರೆ ಇವರ ಅಸ್ತ್ರಗಳೊಂದೂ ಅವನ ಬಳಿ ಸಾಗುತ್ತಿರಲಿಲ್ಲ. ಏಕೆಂದರೆ ತನ್ನ ಮಾಯೆಯಿಂದ ಆಕಾಶದಲ್ಲಿ ಹೊಗೆ ಸೃಜಿಸಿ ಸಕಲ ದಿಕ್ಕುಗಳಲ್ಲಿ ಮಂಜುಮುಸುಕಿ ದಟ್ಟವಾದ ಕತ್ತಲೆ ಆದಂತೆ ಮಾಡಿದನು. ಆತನು ಸಂಚರಿಸುವಾಗ ಬಾಣಗಳ ಧ್ವನಿ, ಧನುಸ್ಸಿನ ಹಗ್ಗದ ದನಿ, ಕುದುರೆಗಳ ಖುರಪುಟದ ಸದ್ದು, ರಥಚಕ್ರದ ತಿರುಗುವಿಕೆಯ ರವ ಯಾವೊಂದೂ ಕೇಳಿಸದೇ ಅವನ ರೂಪವೂ ಕಾಣದೇ ವಿಚಿತ್ರವಾಗಿತ್ತು. ಬಲಿಷ್ಠನಾದ ಶತ್ರು ಎದುರಿಗಿದ್ದಾಗಲೇ ಹೋರಾಡುವುದು ಕಷ್ಟ. ಅಂತಹುದರಲ್ಲಿ ಅವನ ಯಾವ ಚರ್ಯೆಯೂ ಗುರುತಿಸಲಶಕ್ಯವಾದಾಗ ಏನು ಕಥೆ! ಆದರೂ ರಾಮರು ಅಂಜದೇ ಬಾಣಗಳನ್ನು ಬಿಡುತ್ತಲೇ ಇದ್ದರು._
*ರಾವಣಿಸ್ತು ದಿಶಃ ಸರ್ವಾಃ ರಥೇನಾತಿರಥಃ ಪತನ್ ವಿವ್ಯಾಧ ತೌ ದಾಶರಥೀ ಲಘ್ವಸ್ತ್ರೋ ನಿಶಿತೈಃ ಶರೈಃ*
_ಇಂದ್ರಜಿತುವಿನ ಹೊಡೆತ ತೀವ್ರವೆನಿಸಿದಾಗ ರಾಮರು ಯಾವ ಯಾವ ದಿಕ್ಕಿನಿಂದ ಅಸ್ತ್ರಗಳು ಬರುತ್ತಿವೆಯೋ ಆಯಾ ದಿಕ್ಕಿಗೆ ಗುರಿಯಿಟ್ಟು ಅಸ್ತ್ರಗಳನ್ನು ಪ್ರಯೋಗಿಸುತ್ತಲೇ ಹೋದರು. ಅತಿರಥನಾದ ರಾವಣಿಯೂ ಒಂದೆಡೆ ನಿಲ್ಲದೆ ದಶದಿಕ್ಕುಗಳಲ್ಲೂ ಕ್ಷಣಕ್ಕೊಮ್ಮೆ ಸಂಚರಿಸುತ್ತಾ ತೀಕ್ಷ್ಣವಾದ ಬಾಣಗಳನ್ನು ಬಿಡುತ್ತಲೇ ಇದ್ದನು. ಇಂತಹ ಯುದ್ಧದ ಕಲ್ಪನೆಯೇ ಕಷ್ಟ. ರಾಮಾಯಣದ ಯುದ್ಧಕ್ಕೆ ಸಾಟಿ ಯಾವುದೂ ಇಲ್ಲ ಎಂಬುದಕ್ಕೆ ಇಂತಹ ದೃಶ್ಯಗಳೇ ಸಾಕ್ಷಿ._
*ಲಕ್ಷ್ಮಣಸ್ತು ಸುಸಂಕ್ರುದ್ಧೋ ಭ್ರಾತರಂ ವಾಕ್ಯಮಬ್ರವೀತ್ ಬ್ರಾಹ್ಮಮಸ್ತ್ರಂ ಪ್ರಯೋಕ್ಷ್ಯಾಮಿ ವಧಾರ್ಥಮ ಸರ್ವರಕ್ಷಸಾಮ್* *ಅಯುಧ್ಯಮಾನಂ ಪ್ರಚ್ಛನ್ನಂ ಪ್ರಾಂಜಲಿಂ ಶರಣಾಗತಮ್ ಪಲಾಯಂತಂ ಪ್ರಮತ್ತಂವಾ ನ ತ್ವಂ ಹಂತುಮಿಹಾರ್ಹಸಿ*
_ರಣರಂಗದ ಎಲ್ಲೆಡೆ ಸತ್ತು ಬೀಳುತ್ತಿರುವ ವಾನರರನ್ನು ನೋಡಿ ಲಕ್ಷ್ಮಣನ ತಾಳ್ಮೆ ಕೆಟ್ಟುಹೋಯಿತು. ಅವನು ಕೋಪದಿಂದ ಅಣ್ಣ, ಈಗ ಬ್ರಹ್ಮಾಸ್ತ್ರ ಪ್ರಯೋಗಿಸುವೆನು. ಎಲ್ಲಾ ರಾಕ್ಷಸರೂ ಸತ್ತು ಹೋಗಲಿ ಎಂದನು. ಈ ಸಮಯದ ರಾಮನ ಮಾತು ಮನನಾರ್ಹ. ವತ್ಸ, ಒಬ್ಬನಿಗೋಸ್ಕರ ಎಲ್ಲರನ್ನೂ ಕೊಲ್ಲುವೆ ಎನ್ನುವುದು ಸರಿಯಲ್ಲ, ಏಕೆಂದರೆ ಯುದ್ಧ ಮಾಡದಿರುವವನನ್ನು- ಭಯದಿಂದ ಅಡಗಿರುವವನನ್ನು- ಕೈ ಜೋಡಿಸಿ ನಮಸ್ಕರಿಸಿದವನನ್ನು- ಶರಣಾಗಿ ಬಂದವರನ್ನು- ಹೆದರಿ ಓಡುವವರನ್ನು- ಮೈ ಮರೆತವರನ್ನು ಸಂಹರಿಸಬಾರದು. ಹಾಗಾಗಿ ಬ್ರಹ್ಮಾಸ್ತ್ರದ ಚಿಂತೆ ಬಿಡು. ಶತ್ರುವೋರ್ವನನ್ನೇ ಈಗ ಸಂಹರಿಸಲು ಪ್ರಯತ್ನಿಸೋಣ. ಈತನು ಕಣ್ಣಿಗೆ ಬಿದ್ದರೆ ನಮ್ಮ ವಾನರರೇ ವಧಿಸುತ್ತಾರೆ. ಈ ರಾಕ್ಷಸನು ಭೂಮಿ-ಸ್ವರ್ಗ- ರಸಾತಲ- ಆಕಾಶ- ಎಲ್ಲೇ ಇರಲಿ ಕಂಡನೆಂದರೆ ನನ್ನ ದಿವ್ಯಾಸ್ತ್ರಗಳಿಂದ ಸಾಯುವನು ಎಂದು ಸಂತೈಸುತ್ತಾನೆ. ರಾಮನ ಆತ್ಮವಿಶ್ವಾಸ ಹಾಗೂ ಕಷ್ಟದ ಪರಿಸ್ಥಿತಿಯಲ್ಲೂ ಯುದ್ಧ ನೀತಿ ಮೀರದ ಧರ್ಮಪ್ರಜ್ಞೆಯ ಕಾರಣ ಅವನು ಎಲ್ಲರಿಗೂ ಎಂದಿಗೂ ಒಂದು ಮಾದರಿ._
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ