ಚಾರುದತ್ತ ೧೭
👳ಚಾರುದತ್ತ ಬೆಳಕು-೧೨🌞
*उदयति हि शशाङ्कः क्लिन्नखर्जूरपाण्डुः युवतिजनसहायो राजमार्गप्रदीपः । तिमिरनिचयमध्ये रश्मयो यस्य गौरा हृतजल इव पङ्के क्षीरधाराः पतन्ति ।।*
_ವಸಂತಸೇನೆಯನ್ನು ಮನೆಗೆ ಬಿಟ್ಟು ಬರಲು ಹೊರಟ ನಾಯಕನ ಮಾತು. ವಸಂತಸೇನೆ ಚಾರುದತ್ತನನ್ನು ನೋಡಳೆಂದು ಆಗಮಿಸಿದವಳು ವಿಟನ ಕೈಯಲ್ಲಿ ಸಿಕ್ಕಿಬಿದ್ದು ಕೊನೆಗೆ ಹೇಗೋ ತಪ್ಪಿಸಿಕೊಂಡು ಪ್ರಿಯನ ಮನೆ ಸೇರುವಳು. ಮತ್ತೆ ತಾನಲ್ಲಿಗೆ ಬರಬಹುದೆಂಬ ನೆವದಿಂದ ಆಭರಣಗಳನ್ನು ನ್ಯಾಸವಾಗಿ ಇಟ್ಟು ಹೊರಡುತ್ತಾಳೆ. ಆಗ ಕತ್ತಲೆಯ ಕಾರಣ ದೀಪ ಹತ್ತಿಸು ಎಂದು ವಿದೂಷಕನಿಗೆ ಅಂದಾಗ. ಎಣ್ಣೆ ಮುಗಿದಿದೆ ಎನ್ನುವನು ಆ ರಸಿಕ. ಆಗ ನಾಯಕನಾಡುವ ಮಾತು. ಏಕಿನ್ನು ದೀಪ, ಒಡೆದ ಹಸಿ ಖರ್ಜೂರದ ಒಳಗಿನ ಭಾಗದಂತೆ ಕಾಂತಿಯುಳ್ಳ ಚಂದಿರ ಮೂಡಿದನಲ್ಲ, ರಾಜಮಾರ್ಗದಲ್ಲಿ ಬೆಳಕು ಚೆಲ್ಲುತ್ತಾ ನಲ್ಲ-ನಲ್ಲೆಯರನ್ನು ಒಂದುಗೂಡಿಸುವನಲ್ಲ! ಆಹಾ,ಎಂತಹ ಬೆಳದಿಂಗಳು, ಅಂಧಕಾರದ ಮಧ್ಯೆ ಮೂಡಿದ ಚಂದ್ರನ ಬೆಳ್ಳಿಯ ಗೆರೆಯಂತಿರುವ ರಶ್ಮಿಗಳು ಹೇಗೆ ಕಾಣುತ್ತಿವೆಯೆಂದರೆ ಬಿಸಿಲಿನ ಬೇಗೆಗೆ ಒಣಗಿದ ಕೆರೆಯಲ್ಲಿ ಶುಭ್ರವಾದ ಮಳೆಹನಿಗಳ ಸಾಲು ಬಿದ್ದು ಪುಳಕವಾದಂತೆ ಕತ್ತಲೆಯನ್ನೇ ಹೊದ್ದು ಮಲಗಿದ್ದ ಧರಣಿ ಚಂದ್ರನ ಮೊಗದಿಂದ ಸೂಸಿದ ಕಿರಣಗಳೆಂಬ ನಗುವಿಗೆ ಎಚ್ಚೆತ್ತಂತಿದೆ. ಇಲ್ಲಿ ನೀರಿನ ಬದಲಿಗೆ ಅದೇ ಅರ್ಥವಿರುವ ಕ್ಷೀರ ಪದವನ್ನು ಬಳಸಿದ್ದಾನೆ. ಹಾಲಿನ ಮಳೆಯೆಂದು ವರ್ಣಿಸಿದ್ದಾನೆ. ಹಾಲಿನ ಮಳೆ ಕಲ್ಪಿತ, ನೀರಿನ ಮಳೆಯಾದರೆ ಪ್ರಾಕೃತಿಕ. ಹಾಗಾಗಿ ಕವಿಯ ಆಶಯ ಬೆಳಕನ್ನು ಅಥವಾ ಬಿಳಿ ಬಣ್ಣವನ್ನು ತೋರುವುದಕ್ಕೆ ಪೂರಕವಾಗಿ ಅರ್ಥ ಮಾಡಿಕೊಳ್ಳುವುದು. ಭಾಸನ ಕಾಲ ಸುಮಾರು ಒಂದು ಅಥವಾ ನಾಲ್ಕನೇ ಶತಮಾನ. ಆ ಸಮಯದಲ್ಲೇ ಹಸಿ ಖರ್ಜೂರವನ್ನು ಬಣ್ಣಿಸಿರುವನೆಂದರೆ ಆಗಲೇ ಜನಪ್ರಿಯ ಹಣ್ಣಾಗಿತ್ತೇನೋ. ಬಹುಶಃ ಅರಬ್ ದೇಶದಿಂದ ಬಂದದ್ದಾಗಿರದೆ ಈ ಹಣ್ಣು ಇಲ್ಲಿಂದಲೇ ರಫ್ತಾಗುತ್ತಿತ್ತೇನೋ!_
✍ ಸಂಗ್ರಹ ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗಾಗಿ ಭೇಟಿ ನೀಡಿ
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ